ಪ್ರತಿಮೆಗಳ ನಿರ್ಮಾಣಕ್ಕಾಗಿಯೇ ಸಂಪುಟದಲ್ಲಿ ಸಚಿವರನ್ನು ನೇಮಿಸಬೇಕಾಗುತ್ತದೆ!

3 years ago

ಪ್ರತಿಮೆಗಳ ಹುಚ್ಚು ಅತಿಯಾಯಿತು

ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋದರು ಅತಿ ಹೆಚ್ಚು ಮಾಡುತ್ತಿರುವ ಕೆಲಸವೆಂದರೆ ಪ್ರತಿಮೆಗಳಿಗೆ ಶಂಕುಸ್ಥಾಪನೆ; ಇಲ್ಲವೇ ಪ್ರತಿಮೆಗಳ ಅನಾವರಣ. ಹೀಗೆಯೇ ಮುಂದುವರೆದರೆ ಪ್ರತಿಮೆಗಳ ನಿರ್ಮಾಣಕ್ಕಾಗಿಯೇ ಸಂಪುಟದಲ್ಲಿ ಒಬ್ಬ ಸಚಿವರನ್ನು ನೇಮಿಸಬೇಕಾಗುತ್ತದೆ. ಪ್ರತಿಮೆಗಳ ನಿರ್ಮಾಣಕ್ಕಾಗಿ ನಿಗಮವನ್ನು ಸ್ಥಾಪಿಸಬೇಕಾಗುತ್ತದೆ!

ರಾಜ್ಯದ ಬೊಕ್ಕಸದ ಹಣ ಒಂದಷ್ಟು ಪಾಲು ಮುಂಗಡ ಪತ್ರದಲ್ಲಿಯೇ ಇದಕ್ಕೆ ನಿಗದಿಪಡಿಸಬೇಕಾಗುತ್ತದೆ. ಬಸವಣ್ಣನವರ ನಿಜವಾದ ಆಶಯವನ್ನು ಯಾರು ಸಹ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಸ್ಥಾವರಕ್ಕೆ ಅಳಿವುಂಟು, ಜಂಗಕ್ಕೆ ಅಳಿವಿಲ್ಲ ಎಂಬ ಮಾತು ಮರೆತೆ ಹೋಗಿದೆ. ಮಹನೀಯರ ಬದುಕಿನ ಮೌಲ್ಯ ಆದರ್ಶಗಳು ನಮಗೆ ದಾರಿ ದೀಪವಾಗಬೇಕೆ ಹೊರತು ಅವರ ಪ್ರತಿಮೆಗಳಲ್ಲ. ಪ್ರತಿಮೆಗಳನ್ನಿಡುವುದಕ್ಕೆ ಒಂದು ಇತಿಮಿತಿ ಇರಬೇಕು.

ಕೇವಲ ಓಟಿನ ದೃಷ್ಟಿಯಿಂದ ಪ್ರತಿಮೆಗಳನ್ನು ಇಡುವುದು ಒಳ್ಳೆಯ ಬೆಳವಣಿಗೆಯಲ್ಲ. ಬಸವಣ್ಣನವರ, ಕನಕದಾಸರ ನುಡಿಗಳನ್ನು ಅನುಸರಿಸಿದರೆ ಸಾಕು. ಸಮಾನತೆಯ ವಿರುದ್ಧ ಯೋಜನೆಗಳನ್ನು ರೂಪಿಸುತ್ತಾ ಸಮಸಮಾಜವನ್ನು ಧಿಕ್ಕರಿಸುತ್ತಾ ಬಸವಣ್ಣನವರ ಪ್ರತಿಮೆ ಇಟ್ಟರೇನು ಬಂತು ಭಾಗ್ಯ? ಕುಲಕುಲವೆಂದು ಬಡಿದಾಡುತ್ತಾ ರಾಜಕಾರಣ ಮಾಡುವವರು ಕನಕದಾಸರ ಪ್ರತಿಮೆ ಇಟ್ಟರೇನುಬಂತು ಭಾಗ್ಯ? ತ್ಯಾಗದ ಬದುಕಿನ ಅರ್ಥವೇ ತಿಳಿಯದವರು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಇಟ್ಟರೇನುಬಂತು ಭಾಗ್ಯ?  ಸಂವಿಧಾನದ ಆಶಯಗಳನ್ನೇ ಧಿಕ್ಕರಿಸಿ ಬದುಕುವವರು ಅಂಬೇಡ್ಕರ್‌ರವರ ಪ್ರತಿಮೆಗೆ ಪೂಜಿಸಿದರೇನು ಬಂತು ಫಲ?

ಕೆರೆಗಳನ್ನು ನುಂಗಿ ನೀರು ಕುಡಿದವರು, ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡವರು, ಕುಲ ಕಸುಬುಗಳಿಗೆ ಉತ್ತೇಜನ ನೀಡದವರು ಮಾನವೀಯತೆ ಇಲ್ಲದವರು ಕೆಂಪೇಗೌಡರ ಪ್ರತಿಮೆ ಇಟ್ಟರೇನು ಬಂತು ಭಾಗ್ಯ?

ಬಸವಣ್ಣನವರ ಆಶಯವನ್ನು, ಕನಕದಾಸರ ಕಾಳಜಿಯನ್ನು, ಅಂಬೇಡ್ಕರ್‌ರವರ ವಿಚಾರವನ್ನು, ಕೆಂಪೇಗೌಡರ ಜನರ ಬದುಕಿನ ಕಳಕಳಿಯನ್ನು ಅರಿತು ನಡೆದರೆ ಅದಕ್ಕಿಂತ ದೊಡ್ಡ ಗೌರವ ಇವರುಗಳಿಗೆ ಸಲ್ಲಿಸುವುದು ಬೇಕಾಗುವುದಿಲ್ಲ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply