ಸುದೀರ್ಘ ಚುನಾವಣಾ ಪ್ರಕ್ರಿಯೆ ಆಡಳಿತ ಯಂತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ

2 years ago

80 ದಿನಕ್ಕೂ ಹೆಚ್ಚು ಕಾಲದ ಚುನಾವಣಾ ಪ್ರಕ್ರಿಯೆ ವ್ಯವಸ್ಥೆಯಿಂದಾಗಿ ದೇಶದ ಆಡಳಿತ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣೆಯ ಫಲಿತಾಂಶ ಪ್ರಕಟವಾಗುವ ತನಕ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರ್ಕಾರಗಳು ಯಾವುದೇ ರೀತಿಯ ನಿಲುವುಗಳನ್ನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಅನಿವಾರ್ಯ ಪ್ರಸಂಗಗಳಲ್ಲಿ ಮತ್ತು ಸಂಕಷ್ಟದ ಸಮಯದಲ್ಲಿ ಸರ್ಕಾರಗಳು ನಿರ್ಧಾರಗಳನ್ನು ಕೈಗೊಳ್ಳಲು ಮತ್ತೆ ಮತ್ತೆ ಚುನಾವಣಾ ಆಯೋಗದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಗಳಾಗುತ್ತವೆ. ಯಾವುದೇ ಚುನಾವಣೆ 30 ರಿಂದ 40 ದಿನದ ಅವಧಿಯಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಬೇಕು. ನೀತಿ ಸಮ್ಮಿತೆ ಸಹ ಅಷ್ಟೇ ಅವಧಿಗೆ ನಿಗದಿಯಾಗಬೇಕು.

ಮಾರ್ಚ್ 16ರಂದು ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮೊದಲನೇ ಹಂತದ ಮತ್ತು ಎರಡನೇ ಹಂತದ ಚುನಾವಣೆಯಲ್ಲಿ ತಮ್ಮ ರಾಜ್ಯಗಳ ಎಲ್ಲಾ ಕ್ಷೇತ್ರಗಳ ಮತದಾನ ಮುಗಿಸಿದರು ಸಹ ಜೂನ್ ನಾಲ್ಕರ ತನಕ ನೀತಿ ಸಂಹಿತೆ ಇರುವುದರಿಂದ ಈ ಅವಧಿಯಲ್ಲಿ ಸರ್ಕಾರಗಳು ಯಾವ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದುದರಿಂದ ಚುನಾವಣಾ ಆಯೋಗ ಯಾವ ರಾಜ್ಯದಲ್ಲಿ ಸಂಪೂರ್ಣವಾಗಿ ಎಲ್ಲಾ ಸ್ಥಾನಗಳಿಗೆ ಮತದಾನ ಮುಗಿದು ಹೋಗುತ್ತದೆ ಅಂತಹ ರಾಜ್ಯಗಳಲ್ಲಿ ನೀತಿ ಸಂಹಿತೆಯನ್ನ ತೆಗೆದುಹಾಕುವುದು ಆಡಳಿತಾತ್ಮಕ ದೃಷ್ಟಿಯಿಂದ ಸರಿಯಾದ ಕ್ರಮವಾಗುತ್ತದೆ.

ಮೊದಲನೇ ಹಂತದಲ್ಲಿ ಚುನಾವಣೆ ಏಪ್ರಿಲ್ 19 ರಂದು ನಡೆದರೂ ಸಹ ಜೂನ್ ನಾಲ್ಕರ ತನಕ ಆಡಳಿತ ಯಂತ್ರ ಯಾವುದೇ ರೀತಿಯ ಕೆಲಸವನ್ನ ಮಾಡದೆ ಸುಮ್ಮನಿರಬೇಕಾದದ್ದು ಸರಿಯಾದ ಕ್ರಮವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನ ಸಡಲಿಸುವ ವಿಚಾರದಲ್ಲಿ ಚುನಾವಣಾ ಆಯೋಗ ಮರು ಚಿಂತನೆಯನ್ನು ಮಾಡಬೇಕು.

ಯಾವ ರಾಜ್ಯದಲ್ಲಿ ಚುನಾವಣೆಗಳು ಸಂಪೂರ್ಣವಾಗಿ ಮುಗಿದು ಹೋಗುತ್ತವೆ ಆ ರಾಜ್ಯದಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಂಡರು ಸಹ ಅದು ಪಕ್ಕದ ರಾಜ್ಯದ ಮೇಲೆ ಅಥವಾ ದೇಶದ ಇತರೆ ರಾಜ್ಯಗಳ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಇದು ಲೋಕಸಭಾ ಚುನಾವಣೆ ಆಗಿರುವುದರಿಂದ ಎಲ್ಲಾ ನಿರ್ಧಾರಗಳು ಕೇಂದ್ರ ಸರಕಾರಗಳ ಅಡಿಯಲ್ಲಿ ಬಹುತೇಕ ಬಗೆ ಹರಿಯುವುದರಿಂದ ರಾಜ್ಯಗಳ ಪಾತ್ರ ಮತ್ತು ರಾಜ್ಯಗಳ ಆಡಳಿತಾತ್ಮಕ ನಿರ್ಧಾರಗಳು ಮತದಾನ ಮುಗಿದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಈ ನೆಲೆಯಲ್ಲಿ ಚುನಾವಣಾ ಆಯೋಗ ನೀತಿ ಸಂಹಿತೆಯ ವಿಚಾರದಲ್ಲಿ ಮತ್ತಷ್ಟು ಚರ್ಚಿಸಿ ಕೆಲವು ವಿಚಾರಗಳಿಗಾದರೂ ರಿಯಾಯಿತಿಗಳನ್ನ ನೀಡಬೇಕಾಗುತ್ತದೆ.

ಬರಗಾಲದಿಂದ ತೊಂದರೆಗೆ ಒಳಗಾಗಿರುವ ರಾಜ್ಯದ ಜನರಿಗೆ ಮತ್ತು ಬೆಳೆಯನ್ನು ಕಳೆದುಕೊಂಡಿರುವ ರೈತ ಬಂಧುಗಳಿಗೆ ಉದ್ಯೋಗ ದೊರೆಯದೆ ನೊಂದಿರುವ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರ ಕಾಲಕ್ಕೆ ನೆರವಿನ ಅಥವಾ ಸಹಾಯದ ಯೋಜನೆಗಳನ್ನ ರೂಪಿಸಬೇಕಾಗುತ್ತದೆ. ನೀತಿ ಸಂಹಿತೆ ಇರುವುದರಿಂದ 80 ದಿನಗಳ ಕಾಲ ಯಾವುದೇ ನಿರ್ಧಾರವನ್ನು ಕೈಗೊಳ್ಳದೆ ಹೋದರೆ ಜನರ ಬದುಕಿಗೆ ತುಂಬಾ ತೊಂದರೆಯಾಗುತ್ತದೆ.

ರಸ್ತೆ ಅಪಘಾತಗಳಾಗುತ್ತವೆ ಇಲ್ಲವೇ ಅನ್ನದಾತರ ಜೀವಗಳಿಗೆ ತೊಂದರೆಯಾಗುತ್ತದೆ. ಹೀಗೆ ಪ್ರಕೃತಿ ವಿಕೋಪಗಳು ಆಗಿ ಅನಾಹುತಗಳಾದ ಸಂದರ್ಭದಲ್ಲಿ ತುರ್ತಾಗಿ ಜನರ ನೆರವಿಗೆ ನಿಲ್ಲಬೇಕಾದ ಸರ್ಕಾರಗಳು ಕೆಲವು ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀತಿ ಸಂಹಿತೆ ಅಡ್ಡಿಯಾಗುತ್ತದೆ. 80ಕ್ಕೂ ಹೆಚ್ಚು ದಿನಗಳ ಕಾಲ ಯಾವುದೇ ರಾಜ್ಯದಲ್ಲಿ ಸರ್ಕಾರಗಳು ಚುನಾವಣೆಯ ಹಿನ್ನೆಲೆಯಲ್ಲಿ ನಿಷ್ಕ್ರಿಯವಾದರೇ ಜನಸಾಮಾನ್ಯರ ಪ್ರತಿದಿನದ ನೂರಾರು ಸಮಸ್ಯೆಗಳನ್ನ ಇದನ್ನೇ ನೆಪವಾಗಿಟ್ಟುಕೊಂಡು ಕಚೇರಿಗಳಲ್ಲಿ ನೆರವನ್ನ ನೀಡದೆ ಕಡತಗಳನ್ನು ವಿಲೇವಾರಿ ಮಾಡದೆ ಸುಮ್ಮನೆ ಕಾಲ ಹಾಕುತ್ತಾರೆ.

ಒಟ್ಟಾರೆಯಾಗಿ ಸುದೀರ್ಘವಾದಂತಹ ಚುನಾವಣಾ ಪ್ರಕ್ರಿಯೆ ಮತ್ತು ಅತಿಯಾದ ನೀತಿ ಸಂಹಿತೆಗಳು ಪ್ರಜಾಪ್ರಭುತ್ವದಲ್ಲಿ ಮತದಾನವನ್ನ ಹಬ್ಬದ ರೀತಿಯಲ್ಲಿ ಆಚರಿಸುವುದಕ್ಕಿಂತ ತಮ್ಮ ಸಂಕಷ್ಟಗಳಿಗಾಗಿ ದುಃಖಿತರಾಗುವುದೇ ಹೆಚ್ಚಾಗುತ್ತದೆ.

ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕ ಹಾಗೆ ಮತ್ತು ಅವರ ಭಾಷಣಗಳಿಗೆ ಕಾಲವನ್ನು ಹೆಚ್ಚು ಒದಗಿಸಿಕೊಡುವ ಹಿನ್ನೆಲೆಯಲ್ಲಿ ಚುನಾವಣಾ ವ್ಯವಸ್ಥೆಯನ್ನ ಮತ್ತು ದಿನಾಂಕಗಳನ್ನು ನಿಗದಿ ಮಾಡಿದ ರೀತಿ ಇದೆ ಎಂಬ ಮಾತುಗಳು ಕೆಲವು ಕಡೆ ಕೇಳಿ ಬರುತ್ತಿವೆ. ಸಂವಿಧಾನಾತ್ಮಕವಾದ ಚುನಾವಣಾ ಆಯೋಗ ತನ್ನ ನಿರ್ಧಾರಗಳನ್ನು ಯಾವುದೇ ಒತ್ತಡಗಳಿಗೆ ಮಣಿಯದೆ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿನ್ನು ಜನರಲ್ಲಿ ಉಳಿದಿದೆ. ಆ ವಿಶ್ವಾಸವನ್ನು ಉಳಿಸಿಕೊಳ್ಳುವಂತಹ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಾರ್ಯವನ್ನು ನಿರ್ವಹಿಸಲಿ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply