ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ

4 years ago

ಇಷ್ಟು ದಿನ ನಾನು ಕೆಲಸ ಮಾಡಿದ‌ ಸಂಪಾದಕ ಅಂತ ಸುಮ್ಮನಿದ್ದೆ. ಇನ್ನು ಆಗಲ್ಲ ಸರ್.. ಆಹಾ! ಸುಮ್ನೆ ರೋಹಿತ್ ಚಕ್ರತೀರ್ಥ ಅಪ್ಪಟ ಬಂಗಾರ ಅಂತ ಬರೆದರೆ ಸಾಕಿತ್ತು. ಇಷ್ಟ್ಯಾಕೆ ಶ್ರಮ, ಕನ್ನಡದ ಅಮೂಲ್ಯ ಅಕ್ಷರಗಳನ್ನು ಹಾಳು ಮಾಡಿದಿರಿ? ಲಂಕೇಶ್, ಬೆಳಗೆರೆ ಪೋಲಿ ಜೋಕ್‌ಗಳು ರೋಹಿತನ ಮೇಲೂ ಪ್ರಭಾವ ಆದುವಾ? ಲಂಕೇಶ್, ಬೆಳಗೆರೆ ಅವರು ಬರೆದ‌ ಜೀವಪರ ಬರಹಗಳನ್ನ ಈ ನಿಮ್ಮ ರೋಗಿಷ್ಠ ಎಲ್ಲಿ ತೀರ್ಥ ಬಿಟ್ಟ ಸಾರ್!?

ಇಲ್ಲಿಯ ತನಕ ನೀವು ಏನೇ ಕಳಪೆ ಬರಹಗಳು ಬರೆದರೂ ನಾನು ಕೆಲಸ ಮಾಡಿದ ಸಂಪಾದಕ ಅಂತ ಸುಮ್ಮನಿದ್ದೆ. ಈಗ ನಮ್ಮ ಅಸ್ಮಿತೆ, ಆತ್ಮಾಭಿಮಾನವನ್ನೇ‌ ಕೆಣಕುತ್ತಿದ್ದೀರಿ, ಇನ್ನು ತಾಳಲಾಗಲ್ಲ. ಕುವೆಂಪು ಅವರಿಗೆ ಅವಮಾನ ಆಗಿದ್ದು ನಿಜ. ನಿಮ್ಮ ಸಬೂಬು ಬೇಕಿಲ್ಲ. ರಾಜಕಾರಣಿಗಳು ಒಂದು ಪಕ್ಷದವರಿಗೆ ಬೈದು ಮತ್ತೊಂದು ಪಕ್ಷ ಸೇರೋದು ಸಾಮಾನ್ಯ ಬಿಡಿ. ಆದರೆ ಈತ ಬರಹಗಾರ ಅನ್ಕೊಂಡಿರೋವ. ಕುವೆಂಪು ಅವರಿಗೆ ನಿಂದಿಸಿದ್ದಷ್ಟೇ ಅಲ್ಲ, ಬೇರೆಲ್ಲ ಇವನ ಹಿಂದಿನ ಪೋಸ್ಟ್‌ಗಳು ಕೊಳಕನ್ನೇ ಈಗ ತೋರಿವೆ. ಅದರಿಂದ ಇವನ ಬುದ್ಧಿ, ವಿಕೃತ ಮನಸ್ಸು ಬಿಚ್ಚಿಟ್ಟಿವೆ. ಇಂತಹ ವಿಕೃತನನ್ನು ನೀವು‌ ಸಮರ್ಥಿಸಿಕೊಳ್ತೀರಾ?

ಬಸವಣ್ಣ, ಕುವೆಂಪು, ನಾರಾಯಣ ಗುರು, ಭಗತ್‌‌ ಸಿಂಗ್‌‌‌ರನ್ನು ಈತ ಹೇಯವಾಗಿ ನಡೆಸಿಕೊಂಡಿದ್ದಾನೆ. ಇದು ನಾಡಿಗೇ ಗೊತ್ತು. ನೀವು ಬರೆದಿದ್ದು ನಿಮ್ಮ ‘ಘನ ಓದುಗ ಬಳಗ’ ಮೆಚ್ಚಿ ಭಾರಿ ಬರೆದೀರಿ ಅನಬಹುದು. ನೀವು ಬರೆದದ್ದೂ ಅವರಿಗೇ. ಆದರೆ ಸತ್ಯ ಯಾವತ್ತೂ ಸತ್ಯ. ನೀವು ರವಿ ಬೆಳಗೆರೆ ಜತೇಲಿದ್ದವರು. ಅವರ ಬಗ್ಗೆ ಏನೇ‌ ಟೀಕೆಗಳಿದ್ದರೂ ಇಂತಹ ರೋಗೀತನ ವಿಷಯದಲ್ಲಿ ಬೆಳಗೆರೆ ಆತ್ಮ ವಂಚನೆ ಮಾಡಿಕೊಳ್ಳದೇ ಝಾಡಿಸಿ ಬರೆದಿರೋರು. ಇದು ನಿಮ್ಮ ಒಳ ಮನಸ್ಸಿಗೂ ಗೊತ್ತು. ಪ್ರೀತಿಯಿಂದಲೇ ಕೇಳುತ್ತಿರುವೆ, ಹೀಗೆಲ್ಲ ಸುಳ್ಳು ಬರೆದು ಏನು ಸಾಧಿಸುವಿರಿ ಸರ್?

ನಿಮ್ಮ ನಂತರವೂ ನಿಮ್ಮ ಬರಹಗಳು ಉಳಿಯಲ್ಲ. ಆಯ್ತಲ್ಲ ದೊಡ್ಡ ಮನೆ ಕಟ್ಕೊಂಡೀರಿ, ಆರಾಮಿದೀರಿ, ಹೇಗೋ ಪತ್ರಿಕೆ ನಡೀತಿದೆ. ಒಬ್ಬನೇ ಮಗ. ಆತನಿಗೆ ‘ವಿಶ್ವಾತ್ಮ’ ಅನ್ನೋ ಹೆಸರು. ಸಾಕಲ್ಲ. ಇನ್ನಾದರೂ ಸಮಾಜದ ಸ್ವಾಸ್ಥ್ಯಕ್ಕೆ ನಿಮ್ಮ ಅಕ್ಷರಗಳು ಬಳಕೆಯಾಗಿ ಇರೋವಷ್ಟು ದಿನ ಚಂದಗೆ ಇರಿ. ಏನಿದೆ ಜೀವನದಲ್ಲಿ. ಇವತ್ತು ಇರ್ತೀವಿ, ನಾಳೆ ಇರಲ್ಲ. ನಾನು ಹೋದ ಮೇಲೆ ನಾನು ಕಟ್ಟಿದ ಇಷ್ಟಲಿಂಗ ನನ್ನೊಂದಿಗೆ ಬರುತ್ತೆ, ನೀವು ಹಾಕಿರುವ ಜನಿವಾರ ನಿಮ್ಮೊಂದಿಗೆ. ಕೊನೆಗೆ ಉಳಿಯೋದು ಇಷ್ಟಲಿಂಗ, ಜನಿವಾರದ ಜನೋಪಯೋಗಿ ಕೆಲಸಗಳು ಮಾತ್ರ.

ನಾನು ಸಣ್ಣವ, ತಾವು ಪ್ರಕಾಂಡ ಪಂಡಿತರು. ನಿಮ್ಮ ಅಂಕಣದ ಹೆಸರು, ಇದೇ ಅಂತರಂಗ ಸುದ್ಧಿ! ಹಾಗಿದೆಯಂತ ನಿಮಗೆ ಅನಿಸುತ್ತಾ!? ಬಸವಣ್ಣನವರ ಒಂದು ವಚನವಿದೆ ‘ಅಂತರಂಗ ಶುದ್ಧವಿಲ್ಲದವರ ಭಕ್ತಿ ಅಂತ.’ ನಿಮಗೂ ಗೊತ್ತಿರಬೇಕು.

ಇನ್ನು ಬರಹಗಳೇನೆ ಇರಲಿ, ವೈಯಕ್ತಿಕವಾಗಿ ನನ್ನನ್ನು ನೀವು ಪ್ರೀತಿಯಿಂದ ನೋಡಿಕೊಂಡಿದ್ದೀರಿ. ಅದಕ್ಕೆ ನಾನು ಋಣಿ. ಒಳ್ಳೆಯ ಕೆಲಸಕ್ಕೆ ಯಾವತ್ತೂ ಜತೆಗಿರುವೆ. ಶರಣು ಶರಣಾರ್ಥಿ.

  • – ಶಿವಕುಮಾರ್ ಉಪ್ಪಿನ, ಪತ್ರಕರ್ತರು

Leave a Reply