ಸ್ಪರ್ಧೆಯ ಯುಗದಲ್ಲಿ ನಲುಗುವ ಪ್ರತಿಭೆಯ ಪೀಳಿಗೆ

3 years ago

ಇಪ್ಪತ್ತರ ಹರೆಯದ ಹುಡುಗ ರಂಗತಂಡಕ್ಕೆ ಸೇರ್ಪಡೆಯಾಗಲು ಬಂದ. ಆತ ತುಂಬಾ ಮುಗ್ಧವಾಗಿ ಮತ್ತು ಪ್ರಾಮಾಣಿಕವಾಗಿ ತಾನು ರಂಗಭೂಮಿಗೆ ಬರಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿದ.
“ನೋಡಿ ಸಾರ್, ನಾನು ಫಿಲಂನಲ್ಲಿ ಸ್ಟಾರ್ ಆಗಬೇಕಂತಿದ್ದೀನಿ. ಈಗ ತುಂಬಾ ಕಾಂಪಿಟೇಶನ್ಸ್ ನೋಡಿ. ಅದಕ್ಕೆ ಚೆನ್ನಾಗಿ ಅಭಿನಯ ಕಲಿತು ನರ್ವಸ್‌ನೆಲ್ಲಾ ಹೋಗಿಸಿಕೊಂಡು ಒಳ್ಳೆ ಫೇಮಸ್ ಆಕ್ಟರ್ ಆಗಬೇಕು.”

“ಹಾಗಾದರೆ ನಿನಗೆ ಇಲ್ಲಿ ಏನೂ ಪ್ರಯೋಜನವಾಗುವುದಿಲ್ಲವಲ್ಲಪ್ಪಾ” ಮೆಲ್ಲನೆ ಹೇಳಿದೆ, “ಇಲ್ಲಿ ಸ್ಟಾರ್ ಮಾಡ್ಲಿಕ್ಕೆ ನಮಗೆ ಬಾರದು. ಕಲಾವಿದನಾಗಲಿಕ್ಕೆ ಒಂದಿಷ್ಟು ಪ್ರಯತ್ನ ಪಡಬಹುದು.”

“ಅದೇ ಸಾರ್. ಒಳ್ಳೆ ಕಲಾವಿದ ಆಗಬೇಕು. ನನಗೆ ಸರಿಯಾಗಿ ಹೇಳಕ್ಕೆ ಬರಲಿಲ್ಲ. ಜನಗಳು ಚೆನ್ನಾಗಿ ಗುರುತಿಸುವಂತಹ ಕಲಾವಿದನಾಗಬೇಕು. ಸಾರಿ ಸರ್, ನನಗೆ ಸರಿಯಾಗಿ ಮಾತಾಡಕ್ಕೆ ಬರ‍್ಲಿಲ್ಲ” ಎಂದ.

ಇಲ್ಲ, ಆತ ಸರಿಯಾಗಿಯೇ ಮಾತಾಡಿದ್ದಾನೆ. ನಿಜಕ್ಕೂ ಆತ ಆತನು ಕಲೆಯನ್ನು ಹೇಗೆ ಗ್ರಹಿಸಿದ್ದಾನೋ, ಕಲಾವಿದನೆಂದರೆ ಏನೆಂದು ತಿಳಿದಿದ್ದಾನೋ ಹಾಗೆಯೇ ನಿಷ್ಕಪಟವಾಗಿ ಮಾತಾಡಿದ್ದಾನೆ. ಆದರೆ ನನ್ನ ತಣ್ಣಗಿನ ಪ್ರತಿಕ್ರಿಯೆ ನೋಡಿ ತಾನು ಸರಿಯಾಗಿ ಮಾತಾಡಿಲ್ಲ ಎಂದು ತಿಳಿದ.

ಆತನಷ್ಟೇ ಅಲ್ಲ. ನೇರವಾಗಿ ಗಮನಿಸುತ್ತೇನೆ. ಸತ್ಯವಾಗಿ ಕಲೆಯೊಂದಿದೆ, ಅದು ಸುಂದರವಾಗಿದೆ. ಅದನ್ನು ಆರಾಧಿಸುವಷ್ಟು ನನ್ನಲ್ಲಿ ಪ್ರೇಮವುಂಟಾಗಿದೆ. ಅದನ್ನು ಅಗಲಿ ಇರಲಾರದೇ ನಾನು ಬಂದಿದ್ದೇನೆ. ನನ್ನ ಪ್ರೇಮದ ಕಲೆಯ ಜೊತೆಗೆ ಒಡನಾಡಲು ನಾನು ಹಾತೊರೆಯುತ್ತಾ ಬಂದಿದ್ದೇನೆ ಎಂಬರ್ಥ ಬರುವ ಮಾತುಗಳನ್ನು ನಾನಂತೂ ಇತ್ತೀಚೆಗೆ, ಈಗಿನ ಯುವ ಪೀಳಿಗೆಯಲ್ಲಿ ಕೇಳುತ್ತಲೇ ಇಲ್ಲ.

ರಂಗಭೂಮಿಗೆ ಯಾಕೆ ಬರ‍್ತೀಯಾ ಅಂದ್ರೆ ಅದರಲ್ಲಿ ಅಭಿನಯ ಕಲಿತು ಸೀರಿಯಲ್‌ಗೆ ಹೋಗುವುದು. ಸೀರಿಯಲ್‌ಗೆ ಯಾಕೆ ಅಂದ್ರೆ ಕ್ಯಾಮರಾ ಎದುರಿಸುವ ಅಭ್ಯಾಸವಾಗುತ್ತದೆ. ಒಂದಿಷ್ಟು ಪಾಪ್ಯುಲಾರಿಟಿಯೂ ಸಿಗುತ್ತದೆ. ನಂತರ ಸಿನಿಮಾಗೆ ಹೋಗಬೇಕು. ಸಿನಿಮಾಗೆ ಯಾಕೆ ಹೋಗಬೇಕು ಅಂದ್ರೆ ಸ್ಟಾರ್ ಆಗಬೇಕು. ಎಲ್ಲರೂ ನನ್ನ ಗುರುತಿಸಬೇಕು. ಒಳ್ಳೆ ಸಂಪಾದನೆ ಮಾಡಬೇಕು ಇತ್ಯಾದಿ ಇತ್ಯಾದಿ.

ರಂಗಭೂಮಿಗೆ ಬರೋದು, ಅದರಲ್ಲಿ ಕೆಲಸ ಮಾಡುವುದು, ಅದರ ಉದ್ದಗಲದ, ಆಳ ಎತ್ತರಗಳ ಪರಿಚಯ ಮಾಡಿಕೊಳ್ಳೋದು, ಅದರ ಸಾರ ಸತ್ವಾದಿಗಳನ್ನು ಅನುಭವಿಸುವುದು ಅವರ ಆಕಾಂಕ್ಷೆಯೂ ಅಲ್ಲ. ಗುರಿಯೂ ಅಲ್ಲ. ಇನ್ನಾವುದಕ್ಕೋ ಹೋಗುವುದಕ್ಕೆ ಬರಿದೇ ದಾರಿ. ಸರಿ, ಇದರಲ್ಲೇ ಸಂಪೂರ್ಣವಾಗಿ ತೊಡಗಿಸಿಕೋ, ಮುಂದೆ ದಿಕ್ಕು ದೆಸೆಗಳು ಕರೆದೊಯ್ದಂತೆ ಹೋಗು ಎಂದರೆ, “ಏನ್ಸಾರ್, ಈ ಕಾಂಪಿಟೇಶನ್ ಯುಗದಲ್ಲಿ ನಾವು ಯಾವುದೋ ಒಂದಕ್ಕೆ ಅಂಟಿಕೊಂಡು ಕೂತ್ಕೊಂಡ್ರೆ ಆಗತ್ತ ಸಾರ್?” ಅಂತೇನೋ ಮಾತಾಡುತ್ತಾರೆ. ಆದರೆ ಅವರು ಮೊದಲೇ ತಿಳಿಸಿದಂತೆ ಹೆಚ್ಚು ಖ್ಯಾತಿ, ಹೆಚ್ಚು ಹಣ, ಹೆಚ್ಚು ಹೆಚ್ಚು, ಎಲ್ಲವೂ ಇನ್ನಾರದೋ ಒಬ್ಬರಿಗಿಂತ ಹೆಚ್ಚಾಗಿರುವ ಹುಚ್ಚು!

ಎಷ್ಟೋ ಬಾರಿ ಸ್ಪರ್ಧೆಗಳಿಗೆ ತೀರ್ಪುಗಾರನಾಗಿ ಹೋದಾಗ ನನ್ನ ಅನುಭವದಲ್ಲಿ ಬಹುಪಾಲು ಮಂದಿ ಇನ್ನೊಬ್ಬರ ಪ್ರದರ್ಶನವನ್ನು ಅಸೂಯೆಯಿಂದ ನೋಡುವುದನ್ನೇ ಕಾಣುತ್ತೇನೆ. ತಾವು ಅವರಿಗಿಂತ ಚೆನ್ನಾದ ಪ್ರದರ್ಶನ ಕೊಡುತ್ತೇವೆ ಎಂದು ಅವರೇ ಅಂದುಕೊಂಡಾಗ ಗರ್ವದಿಂದ ಮತ್ತು ಠೀವಿಯಿಂದಲೂ ಇರುವುದನ್ನು ಗಮನಿಸುತ್ತೇನೆ. ವೇದಿಕೆಯ ಮೇಲೆ ಬರುವ ಮುನ್ನ ಒಂದು ವೇಳೆ ಸರತಿಯ ಸಾಲಿನಲ್ಲಿದ್ದರೆ ನಗುವ ನಗುವೂ ಕೃತಕವಾಗಿರುತ್ತದೆ. ಒಬ್ಬರನ್ನೊಬ್ಬರು ಶತ್ರುಗಳನ್ನು ನೋಡುವಂತೆ ನೋಡುತ್ತಿರುತ್ತಾರೆ. ಕೆಲವೊಮ್ಮೆ ಕಾರ್ಯಕ್ರಮ ಮುಗಿದ ಬಳಿಕ ತಮಗೆ ಬಹುಮಾನ ಬರದಿದ್ದರೆ ಕೆಲವರು ಜಗಳಕ್ಕೇ ಬರುತ್ತಾರೆ. ಅವರಿಗೆ ಏಕೆ ಬಂತು? ನಮಗೇಕೆ ಬರಲಿಲ್ಲ? ನಮ್ಮ ಮಾರ್ಕ್ಸ್ ಎಷ್ಟು? ಎಂದೆಲ್ಲಾ ನೋಡುತ್ತಾರೆ. ಕಾಡುತ್ತಾರೆ, ನೊಂದುಕೊಳ್ಳುತ್ತಾರೆ. ಅಳುತ್ತಾರೆ. ಕೆಲವೊಮ್ಮೆ ಯುದ್ಧಗಳೇ ನಡೆದುಹೋಗುತ್ತವೆ.

ಅಲ್ಲಿರುವವರಾರೂ ತಾವೊಂದು ಕಲೆಯನ್ನು ಪ್ರತಿನಿಧಿಸುತ್ತಿದ್ದೇವೆಂದಾಗಲಿ, ತಾವೊಬ್ಬರು ಕಲಾವಿದರೆಂದಾಗಲಿ ತೋರ್ಪಡಿಸುವುದೇ ಇಲ್ಲ. ಗೆಲ್ಲುವ ಪ್ರತಿಷ್ಟೆ ಮತ್ತು ಸೋತ ಅವಮಾನವನ್ನಷ್ಟೇ ಬಿಂಬಿಸುತ್ತಿರುತ್ತಾರೆ. ಅವರ ಜೊತೆಗಾರರೂ ಅಷ್ಟೇ, ಅವರಿಗೆ ಮತ್ತೊಬ್ಬರು ಪ್ರದರ್ಶಿಸುವ ಕಲೆಯಾಗಲಿ, ಆಟವಾಗಲಿ ಅದರ ಮೌಲ್ಯವಾಗಲಿ ಮುಖ್ಯವಾಗುವುದೇ ಇಲ್ಲ. ಬರಿದೇ ಇವನು ನಮ್ಮವನು ಗೆಲ್ಲಬೇಕು. ಅವನ್ಯಾರೋ ಪರಕೀಯ ಸೋಲಬೇಕು. ಇಷ್ಟೇ ಧೋರಣೆ.

ಕೆಲವರು ಬಂದು ಗೋಳಾಡುತ್ತಾರೆ, ತಾವೆಷ್ಟು ಕಷ್ಟಪಟ್ಟಿದ್ದೇವೆ, ತಾವೆಷ್ಟು ದೂರದಿಂದ ಬಂದಿದ್ದೇವೆ, ತಮಗೆ ಎಷ್ಟು ನಿರಾಸೆಯಾಯಿತು ಎಂದು. ಅದಕ್ಕೆ ನಾವು ಕೊಡುವ ಉತ್ತರ ಅದಕ್ಕೆ ನಾನೇನು ಮಾಡಲಿ ಎನ್ನುವಷ್ಟು ಒರಟಾಗಿದ್ದರೂ ನಡೆಯುತ್ತದೆ. ಆದರೆ ನಾವು ಹಾಗೆ ಹೇಳುವುದಿಲ್ಲ. ಬದಲಿಗೆ, “ಹೌದು, ಒಂದು ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲಲಾಗುವುದಿಲ್ಲ. ಹಾಗೆಯೇ ಸ್ಪರ್ಧೆ ಎಂದರೆ ಸೋಲು ಗೆಲುವು ಇದ್ದೇ ಇರುತ್ತದೆ. ಮಿಗಿಲಾಗಿ ನಮಗೆ ನೀವು ಮತ್ತು ಅವರು ಏನೂ ಬೇಧವಿಲ್ಲ. ಈ ಪ್ರದರ್ಶನದಲ್ಲಿ ಪ್ರತಿಭೆ ಮತ್ತು ಪ್ರದರ್ಶನಗಳನ್ನು ಅಳೆಯಲು ಇರುವಂತಹ ನಮ್ಮ ಮಾನದಂಡಗಳ ಪ್ರಕಾರ ಕೆಲವರಿಗೆ ಹೆಚ್ಚು ಮಾರ್ಕ್ಸ್ ಸಿಗುತ್ತದೆ. ಕೆಲವೊಮ್ಮೆ ಅರ್ಧ ಮಾರ್ಕ್ಸಿನಷ್ಟು ವ್ಯತ್ಯಾಸದಲ್ಲಿ ಬಹುಮಾನಗಳು ಸಿಗದೇ ಹೋಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ನೀನು ಅಥವಾ ನಿಮ್ಮ ತಂಡ ಸ್ಪರ್ಧಿಸಬೇಕಾಗಿರುವುದು ಅವರ‍್ಯಾರೋ ಜೊತೆಗೆ ಅಲ್ಲ. ನೀವು ಈಗ ನೀಡಿರುವ ಪ್ರದರ್ಶನದ ಗುಣಮಟ್ಟದೊಂದಿಗೆ. ಸ್ಪರ್ಧೆಗಳಿಗೆ ಬರುವುದು ಬರಿದೇ ಗೆಲ್ಲಲಿಕ್ಕಾಗಿ ಅಲ್ಲ. ಬೇರೆ ಬೇರೆ ಕಡೆಗಳಿಂದ ಬಂದಿರುವ ಬೇರೆ ಬೇರೆ ಪ್ರತಿಭೆಗಳ ಮತ್ತು ಪ್ರದರ್ಶನಗಳ ವೈವಿಧ್ಯತೆಗಳನ್ನು ಅರಿಯಲು. ನಿಮ್ಮ ಗುಣಮಟ್ಟವನ್ನು ನೀವು ಪರೀಕ್ಷಿಸಿಕೊಳ್ಳಲು. ನೀವು ಸ್ಪರ್ಧಿಸಬೇಕಾಗಿರುವುದು ಅವರೊಂದಿಗೆ ಅಲ್ಲ. ನೀವು ನಿಮ್ಮೊಂದಿಗೇ. ಪ್ರತಿ ಪ್ರದರ್ಶನದ ನಂತರ ನಿಮ್ಮ ಸೀನಿಯಾರಿಟಿಯು ಹೆಚ್ಚುತ್ತಾ ಹೋಗುತ್ತದೆ. ಅದರಿಂದ ನೀವು ಮತ್ತಷ್ಟು ಮಾಗುತ್ತೀರಿ. ಮತ್ತಷ್ಟು ಪ್ರಬುದ್ಧರಾಗುತ್ತೀರಿ. ನಿಮ್ಮ ಪ್ರತಿಭೆಯಲ್ಲಿ ಮತ್ತಷ್ಟು ಪಕ್ವತೆ ಕಾಣುತ್ತೀರಿ. ಇದೊಂದು ಸುಂದರ ಕಲೆ. ಈ ಕಲೆಯಿಂದ ನೀವು ಕಲಾವಿದರಾಗಿದ್ದೀರಿ. ಕಲೆಗೆ ಪ್ರಥಮ ಸ್ಥಾನ. ನಂತರ ಕಲಾವಿದನಿಗೆ. ಸಮಾಜವು ಈ ಕಲೆಯನ್ನು ಜೀವಂತವಾಗಿರಿಸಿಕೊಂಡಿರುವುದಕ್ಕೆ ಕಲಾವಿದನಿಗೆ ಗೌರವ ಸಲ್ಲಿಸುತ್ತದೆ.”

ಹೌದು ಭಾಷಣ ಸ್ಪಲ್ಪ ಉದ್ದವೆನಿಸಿದರೂ ಹೇಳಿಯೇ ತೀರುವ ಪ್ರಯತ್ನ ಮಾಡುತ್ತೇವೆ. ಏಕೆಂದರೆ ಕಲೆ ಉಳಿಯುವುದು ಮತ್ತು ಕಲಾವಿದ ಬೆಳೆಯುವುದು ವೈಯಕ್ತಿಕ ಪ್ರತಿಷ್ಟೆಗಳಿಂದಲ್ಲ ಅಲ್ಲ. ಪರಸ್ಪರ ಸಹಕಾರದಿಂದ. ಸ್ಪರ್ಧೆಯ ಉದ್ದೇಶ ಅವರ‍್ಯಾರನ್ನೋ ಸೋಲಿಸುವುದಾಗಿರುತ್ತದೆ. ಯಾರದೋ ಸೋಲಿನ ಮೇಲೆ ವಿಜಯದ ಪತಾಕೆಯನ್ನು ಹಾರಿಸುವುದು ಪ್ರತಿಭೆಯ ಪ್ರದರ್ಶನವಲ್ಲ. ಅಹಂಕಾರದ ಪ್ರದರ್ಶನ. ಪರಸ್ಪರ ಸಹಕಾರದಿಂದ ಪ್ರತಿಭೆಗಳು ಅನಾವರಣಗೊಂಡು ಪ್ರದರ್ಶನಗೊಂಡರೆ ದಿವ್ಯ ರಸಾನುಭೂತಿಯುಂಟಾಗಿ ಅಲ್ಲೇ ಸಾಕ್ಷಾತ್ಕಾರವಾದ ಭಾವ ಉಂಟಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕಾಂಪಿಟಿಶನ್ ಅನ್ನೋದು ಎಲ್ಲಾ ಜಮಾನಗಳ ಒಂದು ಸಾಂಕ್ರಾಮಿಕ ರೋಗ. ಆದರೆ ಈಗ ಅದರ ವ್ಯಾಪ್ತಿ ಮತ್ತು ಎಲ್ಲೆ ಅನಂತ. ಅಟ್ಟಕ್ಕೆ ಹತ್ತುವವಳ ಅಂಡನ್ನೆತ್ತಬಹುದು, ಬೆಟ್ಟಕ್ಕೆ ಹತ್ತುವವಳ ಕುಂಡಿಯನ್ನು ಹೊತ್ತುವವರಾರು ಅಂತದೆ ನಮ್ಮ ಕನ್ನಡ ಗಾದೆಯೊಂದು.

ಕಡೆಯ ಮಾತು: ತನಗೆ ಕೆಲಸವಾಗಬೇಕಾದಾಗ ಸಹಕಾರದ ಮಾತು. ಬೇರೆಯವರಿಗೆ ಮಾಡಲು ಕರೆ ಬಂದಾಗ ಸ್ಫರ್ಧಾತ್ಮಕ ಧೋರಣೆ!

– ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply