ಜಾಣೆಯಾಗಿರು ನನ್ನ ಮಲ್ಲಿಗೆ, ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ…

3 years ago

ಹರೆಯದ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೇ ಹೆಚ್ಚು ಸಮಸ್ಯೆಗಳು ತಲೆದೋರುವುದು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಸೈದ್ಧಾಂತಿಕವಾಗಿ ಹೆಣ್ಣುಮಕ್ಕಳನ್ನು ಗಂಡು ಮಕ್ಕಳ ಜೊತೆ ಅದೆಷ್ಟೇ ಸಮೀಕರಿಸಿದರೂ ಸಮಸ್ಯೆಗಳು ಎಂದು ಎದುರಾದರೆ ಅದು ಹೆಣ್ಣು ಮಕ್ಕಳಿಗೇನೇ ಹೆಚ್ಚು ಘಾಸಿಗೊಳಿಸುವುದು ಹಾಗೂ ಅವರನ್ನು ತೊಂದರೆಗೀಡು ಮಾಡುವುದು.

ಇದಕ್ಕೆ ಕಾರಣ ಪ್ರಕೃತಿಯೇ. ಪ್ರಕೃತಿಯ ನಿಯಮದಂತೆಯೇ ಸಮಾಜವು ಇದ್ದುಬಿಟ್ಟಿದ್ದರೆ ಸಮಸ್ಯೆಯೇನೂ ಇರುತ್ತಿರಲಿಲ್ಲ. ಆದರೆ ಮನುಷ್ಯ ನಿರ್ಮಿಸಿಕೊಂಡಿರುವ ಸಮಾಜದ್ದೇ ಒಂದು ರೀತಿ, ಪ್ರಕೃತಿಯದೇ ಇನ್ನೊಂದು ರೀತಿ ಇರುವುದರಿಂದ ಒಂದು ಬಗೆಯ ತೊಂದರೆಗಳನ್ನು ಹೆಣ್ಣುಮಕ್ಕಳು ಎದುರಿಸಬೇಕಾಗುವುದು.

ಆಟೋ, ಬೈಕು ಅಥವಾ ಕಾರುಗಳ ಹಿಂದಿನ ಹುಡುಗರ ಸಾಹಿತ್ಯಗಳು “ಪ್ರೀತಿಯ ಹುಡುಗ, ಮೋಸದ ಹುಡುಗಿ,” “ಹುಡುಗನ ಪ್ರೀತಿ ಗುಲಾಬಿ, ಹುಡುಗಿಯ ಮೋಸ ಗುಲಾಬಿಯ ಮುಳ್ಳು” ಎಂಬರ್ಥದಲ್ಲಿಯೇ ಬಿಂಬಿತವಾಗುತ್ತಿರುತ್ತದೆ. ಸಾಲದಕ್ಕೆ ಸಿನಿಮಾದವರೂ “ನೀನೇ ಸಾಕಿದಾ ಗಿಣಿ ನಿನ್ನಾ ಮುದ್ದಿನಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ, ಹೂವಾಗಿ ಅರಳಿ, ಹಾವಾಗಿ ಕೆರಳಿ ಪ್ರಾಣಾವ ಹಿಂಡಿತಲ್ಲೋ” ಎಂದು ಕೆಮ್ಮಣ್ಣುಗುಂಡಿಯ ಅಥವಾ ಕುದುರೆಮುಖದ ಗಣಿಗಳ ಮಣ್ಣಲ್ಲೆಲ್ಲಾ ಬಿದ್ದು ಹೊರಳಾಡಿ ಗೋಳಾಡಿ ಹುಡುಗಿಯರೆಂದರೆ ತಮ್ಮ ಸ್ವಾರ್ಥವನ್ನು ನೋಡಿಕೊಳ್ಳುವವರು, ಸೋಗಿನವರು; ಈ ಹುಡುಗರೆಂದರೆ ಪಾಪದವರು, ಮುಗ್ಧರು, ನಂಬಿ ಕೆಟ್ಟವರು, ತಿಕ್ಕಲಾದವರು ಎಂದೆಲ್ಲಾ ಬಿಂಬಿಸುತ್ತಿರುತ್ತಾರೆ.

ಆದರೆ ಹುಡುಗಿಯರ ಹಿಂದೆ ಹೋಗಿ, ತಾವು ಅವಳನ್ನು ಪ್ರೀತಿಸುತ್ತಿದ್ದೇವೆಂದುಕೊಂಡು, ಅವಳು ಇನ್ನಾರನ್ನೋ ಕಟ್ಟಿಕೊಂಡು ಹೋದ ಮೇಲೆ ಗುಂಡು ಹಾಕಿಕೊಂಡು, ದಂ ಹೊಡೆದುಕೊಂಡು, ಡೆತ್ ನೋಟ್ ಬರೆದು ವಿಷ ಕುಡಿಯುವಂತ ಮುಗ್ಧರೋ, ಮೂರ್ಖರೋ ಆಗಿರುವ ಹುಡುಗರ ಬಗ್ಗೆ ನಾನಿಲ್ಲಿ ಹೇಳಲು ಹೊರಟಿಲ್ಲ. ಆದರೆ, ಹುಡುಗ ಮತ್ತು ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದಾಕ್ಷಣ ಅವರಿಬ್ಬರೂ ತಮ್ಮ ಸಾಂಗತ್ಯವನ್ನು ಬಲವಾಗಿ ನಂಬಿಕೊಂಡು ಅಗತ್ಯಕ್ಕಿಂತ ಹೆಚ್ಚು ಮುಂದುವರಿಯುವುದರ ಬಗ್ಗೆ ವಿಚಾರ ಮಾಡುತ್ತೇನೆ. ಅದರಿಂದ ಯಾರಿಗೆ ತೊಂದರೆಯಾಗುವುದು ಎನ್ನುವುದರ ಬಗ್ಗೆಯೂ ಬೆಳಕು ಚೆಲ್ಲುವುದರ ನಿಟ್ಟಿನಲ್ಲಿ ಹೋಗುತ್ತೇನೆ.

ಆಕೆ ಒಂದು ಮಧ್ಯಮ ವರ್ಗದ ಹುಡುಗಿ. ವಿದ್ಯೆಯೇನೂ ಅಷ್ಟು ಹತ್ತಿರಲಿಲ್ಲ. ಬುದ್ಧಿಯೂ ಅಷ್ಟಕಷ್ಟೇ. ಹೇಗೋ ಏನೋ ಇರುವ ರೂಪಕ್ಕೆ ಸಿನಿಮಾಗಳಲ್ಲಿ ಅಲ್ಲಿಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಪ್ರತಿಭೆಯೂ ಇಲ್ಲದ ಕಾರಣ ಅಷ್ಟೇನೂ ದೊಡ್ಡ ಪಾತ್ರಗಳೂ ಸಿಗುತ್ತಿರಲಿಲ್ಲ. ಆದರೂ ಅವಳು ಜಾಹಿರಾತುಗಳಲ್ಲಿ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳು ಸಿನಿಮಾದಲ್ಲಿ ಯಾವಾಗ ಕ್ಲಿಕ್ ಆಗಲಿಲ್ಲವೋ ಅವಳಿಗೊಂದು ದೊಡ್ಡ ಒತ್ತಡವೇ ಮೇಲಿತ್ತು. ವಯಸ್ಸಾಗುತ್ತಿದೆ. ಹಣಕ್ಕೆ ಹಣವನ್ನೂ ಸಂಪಾದನೆ ಮಾಡಿಡುವುದಕ್ಕೆ ಆಗುತ್ತಿಲ್ಲ. ಪ್ರತಿಭಾ ಪ್ರದರ್ಶನದಿಂದ ಹೆಸರು ಸಾಧಿಸುವಂತಹ ಖ್ಯಾತಿಯನ್ನೂ ಏನೂ ಗಳಿಸುತ್ತಿಲ್ಲ. ಇಂತಹ ಸಮಯದಲ್ಲಿ ಇನ್ನಾರೋ ಹೆಣ್ಣಿನ ದೌರ್ಬಲ್ಯದ ಖ್ಯಾತನಾಮರ ಮಗನೊಬ್ಬ ಗಂಟುಬಿದ್ದ. ಆದರೆ ಅವರಿಗೋ ಈ ಬಗೆಯ ಹುಡುಗಿಯರು ಬರಿಯ ಫಾಸ್ಟ್ಫುಡ್ ಆಗುವರೇ ಹೊರತು ಮನೆಯ ಊಟವಾಗಿ ಬೇಡ!

ಖ್ಯಾತನಾಮರಿಗೆ ಚಾಕೋಲೆಟ್‌ಗೂ ಮತ್ತು ಮನೆಯ ಊಟಕ್ಕೂ ವ್ಯತ್ಯಾಸ ಗೊತ್ತಿದೆ. ಆದರೆ ಚಾಕೊಲೆಟ್ ತಾನು ಮನೆ ಊಟವಾಗಿ ಬರುತ್ತೇನೆ ಎಂದು ಹಟ ಹಿಡಿದಿದೆ. ಆಮೇಲಿಂದ ಸುದ್ಧಿ, ಪ್ರಚಾರ, ಕೇಸ್, ಡೀಲ್ ಇತ್ಯಾದಿಗಳಾಗುತ್ತವೆ!

ಹುಡುಗರಲ್ಲಿ ಎರಡು ಬಗೆ. ಟೈಂ ಪಾಸ್ ಕಂಪನಿಗಾಗಿ ಹುಡುಗಿಯರ ಹಿಂದೆ ಸುತ್ತಾಡುವವರು. ಮತ್ತದೇನೋ ಪ್ರೀತಿ, ಪ್ರೇಮ, ಮದುವೆ, ಮಕ್ಕಳು, ಸಂಸಾರ ಇತ್ಯಾದಿಗಳೊಡನೆ “ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ ಹಾಡಿತು… ಎಂದೂ ಜೊತೆಯಲಿ ಬರುವೆ ನಿನ್ನ ನೆರಳಿನ ಹಾಗೆ ಇರುವೆ…. ನಿನ್ನ ಉಸಿರಿನ ಹಾಗೆ ಇರುವೆ, ನೋವುಗಳು ನನಗಿರಲಿ, ಆನಂದ ನಿನಗಾಗಲಿ,” ಎಂದು ಕೊನೆಗಾಲದವರೆಗೂ ಹಾಡಿಕೊಂಡು ಇರುವ ಕನಸು ಕಾಣುವವರು.

ಅದೇ ರೀತಿಯಲ್ಲಿಯೂ ಹುಡುಗಿಯರೂ ಕೂಡ. “ನೀ ನಡೆವ ಹಾದಿಯಲ್ಲಿ, ನಗೆ ಹೂವು ಬಾಡದಿರಲಿ, ಈ ಬಾಳ ಬುತ್ತಿಯಲಿ, ಸಿಹಿ ಪಾಲು ನಿನಗಿರಲಿ, ಕಹಿ ಎಲ್ಲಾ ನನಗಿರಲಿ” ಎಂದು ಹಾಡಿಕೊಂಡಿರುವ ಜೀವಿಗಳೂ ಇದ್ದಾರೆ, ಆಯಾ ಹೊತ್ತಿನ ಸವಲತ್ತುಗಳ, ಅಗತ್ಯಗಳನ್ನು ಪೂರೈಸುವ ಜೀವಗಳನ್ನು ಹುಡುಕಿಕೊಂಡವರೂ ಇರುತ್ತಾರೆ. ಅದು ಅವರವರ ದೃಷ್ಟಿಗಳು, ಧೋರಣೆಗಳು.

ಆದರೆ ಎಡವಟ್ಟಾಗೋದು ಎಡವಿದಾಗ! ಹೌದು, ಗಂಡು ಹೆಣ್ಣಿನ ಪರಸ್ಪರ ಶಾರೀರಿಕವಾಗಿ ಒಪ್ಪಿಸಿಕೊಳ್ಳುವಿಕೆ ಅದರಿಂದ ಉಂಟಾಗುವ ಪರಿಣಾಮಗಳನ್ನು ಎಡವುವಿಕೆ ಎಂದೇ ಕರೆಯಬೇಕಾಗುವುದು, ಅದೆಷ್ಟೇ ಮುಕ್ತ ಚಿಂತನೆಗಳಿದ್ದರೂ, ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಮಾತಾಡಿದರೂ.

ಏಕೆಂದರೆ, ಲೈಂಗಿಕತೆ ಪ್ರಾಕೃತಿಕವಾದರೂ, ವ್ಯಕ್ತಿಗಳು ಸಮಾಜದ ಅಧೀನದಲ್ಲಿದ್ದು ಅದರ ನಿಯಂತ್ರಣದಲ್ಲಿರುವುದರಿಂದ ಉಂಟಾಗುವ ಪರಿಣಾಮಗಳನ್ನು ತಮ್ಮದೇ ವ್ಯಕ್ತಿಗತ ನಿಲುವಿನಲ್ಲಿ ಎದುರಿಸುತ್ತೇವೆಂದರೆ ಏನೂ ಸಮಸ್ಯೆ ಇಲ್ಲ. ಆದರೆ ಅದು ಹಾಗಾಗುವುದಿಲ್ಲ.
ಹುಡುಗಿಯೇನಾದರೂ ಗರ್ಭ ಧರಿಸಿಬಿಟ್ಟರೆ, ಅವಳು ತನ್ನ ಮನೆಯವರನ್ನು ಎದುರಿಸಲು ಸಮರ್ಥಳಾಗಿರಳು, ಅದುವರೆಗೂ “ನನ್ನ ಜೀವ ನೀನು, ನನ್ನ ಬಾಳ ಜ್ಯೋತಿ ನೀನು” ಎಂದು ಹಾಡುತ್ತಿರುವ ಹುಡುಗ ಜಾರಿಕೊಳ್ಳಲು ಯತ್ನಿಸತೊಡಗುತ್ತಾನೆ. “ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ” ಎಂದು ಹಾಡುತ್ತಿದ್ದವನು, ಕಂಡರೂ ಕಾಣದಂತೆ, ಹುಡುಕಿದರೂ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳುತ್ತಿರುತ್ತಾನೆ.

ಲೈಂಗಿಕತೆಯಲ್ಲಿ ಶೀಲ ಅಶ್ಲೀಲ ನೋಡುವ ಬಗೆಯವರೊಂದಿಗೆ ನಾವು ಸಂವಾದಿಸಲಾರೆವು. ಆದರೆ ಆರೋಗ್ಯ, ಅನಾರೋಗ್ಯ, ಪರಿಣಾಮಗಳ ಬಗ್ಗೆಯಾದರೂ ಚಿಂತಿಸುವವರೊಂದಿಗೆ ಸಂವಹನ ನಡೆಸಬಹುದು.

ನಾನೊಂದು ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹರೆಯದ ಪ್ರೀತಿಸುವ ಹುಡುಗಿಯೊಬ್ಬಳು ಪ್ರೇಮಿಗಳ ಪರಸ್ಪರ ದುಡುಕಿನಿಂದಾಗಿ ಗರ್ಭಿಣಿಯಾಗಿಬಿಟ್ಟಳು. ಆಕೆಯ ಪ್ರಿಯತಮ ಕಣ್ಮರೆಯಾಗಿಬಿಟ್ಟಿದ್ದ.  ಆ ಹುಡುಗಿ ಅಳುತ್ತಿದ್ದಳು “ನನ್ನ ಮೇಲೆ ಅಷ್ಟೋ ನಂಬಿಕೆ ಇಲ್ವಾ? ನಾನು ನಿನ್ನ ಕೈ ಬಿಡ್ತೀನಾ ಅಂತಿದ್ದ” ಎಂದು. ಆಗ ನನ್ನ ಸಹೋದ್ಯೋಗಿಯೋರ್ವಳು ಆಕೆಗೆ ಹೇಳುತ್ತಿದ್ದಳು. “ಪ್ರೀತಿಸಮ್ಮಾ, ಪ್ರೀತಿಸು. ಆದರೆ ಪ್ರೀತಿಯಿಂದ ಕಾಮಿಸುವ ಕಡೆಗೇಕೆ ಜಾರಿದೆ? ನೋಡಮ್ಮಾ, ಹುಡುಗಿ, ಪ್ರಕೃತಿ ನಮಗೆ ಒಂದು ಮೋಸ ಮಾಡಿಬಿಟ್ಟಿದೆ. ಸಂಭೋಗ ಅಂತಾದಾಗ, ಮಗುವೆನ್ನುವುದು ಗಂಡಿಗೆ ಹುಟ್ಟುವುದೋ, ಹೆಣ್ಣಿಗೆ ಹುಟ್ಟುವುದೋ ತಿಳಿಯದೇ ಇದ್ದು, ಇಬ್ಬರಲ್ಲಿ ಯಾರೋ ಒಬ್ಬರು ಬಸಿರಾಗುತ್ತಾರೆ ಎಂದಿದ್ದರೂ ಇಂತಹದ್ದು ನಡೆಯುತ್ತಿರಲಿಲ್ಲವೇನೋ. ನೋಡು, ನಾವು ಒಂದು ಮೊಟ್ಟೆಯಂತೆ, ಮೊಟ್ಟೆಯೇ ಕಲ್ಲಿನ ಮೇಲೆ ಬಿದ್ದರೂ, ಕಲ್ಲೇ ಮೊಟ್ಟೆಯ ಮೇಲೆ ಬಿದ್ದರೂ ಒಡೆಯುವುದು ಮೊಟ್ಟೆಯೇ. ಹಾಗಾಗಿ ನೀನು ಎಚ್ಚರಿಕೆಯಲ್ಲಿರಬೇಕು. ಜಾಣೆಯಾಗಿರಬೇಕು. ಬಸಿರಾಗುವ ಭಯ ಹುಡುಗರಿಗೆ ಇರೋಲ್ಲ. ಈ ಒಂದು ಎಡವಟ್ಟಿನಿಂದಲೇ ಎಷ್ಟೋ ಪ್ರೇಮಿಗಳು, ನಿಜವಾಗಿಯೇ ಪ್ರೀತಿಸಿದ್ದರೂ ಕೂಡ, ಸಮಾಜದ ಒತ್ತಡಕ್ಕೆ ಸಿಲುಕಿ ತತ್ತರಿಸಿಹೋಗಿರುವುದು.”

ಹೌದು, ನಾವು ಯಾರಿಗೂ ಅಂಜುವವರಲ್ಲ. ನಮ್ಮ ದಾರಿ ನಮ್ಮದು, ನಮ್ಮ ರೀತಿ ನಮ್ಮದು ಎಂದು ತಮ್ಮ ಇಷ್ಟದಂತೆ ಬದುಕುವ, ಮದುವೆ, ಮದುವೆಗೆ ಮುನ್ನ ಅಥವಾ ನಂತರದ ಲೈಂಗಿಕತೆ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ತಾವು ತಾವಾಗಿಯೇ ಇರುವವರಿಗೆ ಇಲ್ಲಿ ಹೇಳುವುದೇನೂ ಇಲ್ಲ.

ಆದ್ದರಿಂದಲೇ ಹುಡುಗಿಯರ ವಿಷಯವಾಗಿ ಹುಡುಗರಿಗೆ ಹೇಳುವುದೇನೆಂದರೆ, ಹುಡುಗಿ ಸಿಕ್ಕಿದ್ದಾಳೆ, ತನ್ನನ್ನು ನಂಬಿದ್ದಾಳೆ ಒಪ್ಪಿದ್ದಾಳೆ ಎಂದಾಕ್ಷಣ ಮಿಸ್‌ಯೂಸ್ ಮಾಡಬೇಡಿ. ಹ್ಯಾಂಡಲ್ ವಿತ್ ಕೇರ್, ಹುಡುಗಿಯರು ಸಾಮಾಜಿಕವಾಗಿಯೂ, ಪ್ರಾಕೃತಿಕವಾಗಿಯೂ “ಫ್ರಜೈಲ್!”

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply