ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆರೋಪಿ ವಶಕ್ಕೆ ಎನ್.ಐ.ಎ ಸಜ್ಜು

3 years ago

ಬೆಂಗಳೂರು: ಕಳೆದ ನವೆಂಬರ್ ತಿಂಗಳಿನಲ್ಲಿ ಮಂಗಳೂರಿನ ಕಂಕನಾಡಿ ಬಳಿ ಕುಕ್ಕರ್ ಬಾಂಬ್ ಸ್ಪೋಟಗೊಂದು ಗಂಭೀರವಾಗಿ ಗಾಯಗೊಂಡಿದ್ದ ಶಂಕಿತ ಉಗ್ರ ಶಾರೀಕ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆಯಲು ಮುಂದಾಗಿದೆ.

ಕುಕ್ಕರ್ ಸ್ಪೋಟಗೊಂಡ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಂಕಿತ ಉಗ್ರ ಶಾರೀಕ್‍ಗೆ ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೇ.25ರಷ್ಟು ಈತನ ದೇಹದ ಅಂಗಾಂಗಗಳು ಸುಟ್ಟು ಹೋಗಿದ್ದವು. ಇದೀಗ ದಿನ ಕಳೆದಂತೆ ಆತನ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ಎನ್‍ಐಎ ವಶಕ್ಕೆ ಪಡೆಯಲು ಸಜ್ಜಾಗಿದೆ.

ಕಳೆದ ಒಂದು ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿರುವುದರಿಂದ ಯಾವುದೇ ಸಂದರ್ಭದಲ್ಲಿ ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

24 ವರ್ಷದ ಈತ ಈಗಾಗಲೇ ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು, ಈಗ ಮಂಗಳೂರು ಸ್ಪೋಟ ಪ್ರಕರಣದಲ್ಲೂ ಎ1 ಆರೋಪಿಯಾಗಿದ್ದಾನೆ. ಈತ ಐಸಿಸ್ ಸೇರುವ ಉದ್ದೇಶ ಹೊಂದಿದ್ದ. ಇದರ ಭಾಗವಾಗಿ ಆತ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದ. ಕರ್ನಾಟಕ ಮಾತ್ರವಲ್ಲದೆ, ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲೂ ಈತ ಸಂಚರಿಸಿದ್ದ ಮಾಹಿತಿಯನ್ನು ಈಗಾಗಲೇ ಎನ್‍ಐಎ ತನಿಖಾ ತಂಡ ಕಲೆ ಹಾಕಿದೆ.

ಸದ್ಯ ಈತ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಎನ್‍ಐಎ ಅಕಾರಿಗಳ ತಂಡ ಆತನನ್ನು ವಶಕ್ಕೆ ಪಡೆಯಲಿದ್ದು, ಪ್ರಕರಣ ಸಂಬಂಧ ಆತನನ್ನು ತೀವ್ರ ತನಿಖೆಗೆ ಒಳಪಡಿಸಲಿದೆ. ಈಗಾಗಲೇ ಚಿಕಿತ್ಸೆಯ ಜೊತೆ ಜೊತೆಗೆ ಬಹುತೇಕ ವಿಚಾರಣೆ ನಡೆಸಿರುವ ಎನ್‍ಐಎ ಅಧಿಕಾರಿಗಳ ತಂಡ ಮುಂದಿನ ವಾರವೇ ಶಾರೀಕ್‍ನನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ವಶಕ್ಕೆ ಪಡೆಯಲಿದೆ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

Leave a Reply