ಗುಡಿ ಸಂಸ್ಕೃತಿ ಧಿಕ್ಕರಿಸಿ ಸ್ಥಾವರವಾಗದೇ ಜಂಗಮವಾಗೇ ಉಳಿದ ಸಿದ್ದೇಶ್ವರ ಶ್ರೀ

3 years ago

ಯಾವತ್ತೂ ಒಂದೇ ಕಣ್ಣಲ್ಲಿ ನೋಡುತ್ತಿದ್ದರೆ ನಮಗೆ ಬೇಕಾದ್ದೇ ಕಾಣುತ್ತದೆ. ಎಲ್ಲರಿಂದ ನಮಗೆ ಬೇಕಾದ್ದೇ ನಿರೀಕ್ಷೆ ಮಾಡುವ ಹಾಗೂ ಇರಲ್ಲ. ಇದು ಕೆಲವರಿಗೆ ಅರ್ಥವಾಗುತ್ತಿಲ್ಲ.

ಸಿದ್ಧೇಶ್ವರ ಶ್ರೀ ಅವರು ಮಗುವಿನ ಮನಸ್ಸಿನವರಿದ್ದರು. ಅವರೂ ಮನುಷ್ಯರೇ ಆದ್ದರಿಂದ ಅದನ್ನು ಮೀರುತ್ತ ಹೋದರು. ಸಾಮಾನ್ಯ ವಿಚಾರಗಳ ವೈರುಧ್ಯವನ್ನೂ ಜೀರ್ಣಿಸಿದರು. ಪ್ರಕೃತಿಯನ್ನು ಆಸ್ವಾದಿಸುತ್ತಿದ್ದರು. ಅವರ ಆಶ್ರಮ ಕಾಡಂತಿದೆ. ಕಟ್ಟಡಗಳಿಗಿಂತ ಅಲ್ಲಿ ಗಿಡ, ಮರಗಳೇ ಹೆಚ್ಚು. ಅವರು ರೈತಾಪಿ ಜನರ ಬಗ್ಗೆ ಕಕ್ಕುಲಾತಿ ಹೊಂದಿದ್ದರು. ಬರದ ನಾಡಿಗೆ ನೀರು ಕೊಡಿ ಎಂದರು. ‘ನನ್ನದು ಆವೇಗವಿಲ್ಲದ ಸಾವಧಾನದ ಸಾಮಾನ್ಯ ಬದುಕು’. ಬದುಕು ಅನುಭವಗಳ ಪ್ರವಾಹ, ಅದರ ಸಿರಿವಂತಿಕೆ ಇರುವುದು ಸತ್ಯ ಶೋಧನೆ, ವಿಶ್ವ ಚಿಂತನೆಯಲ್ಲಿ; ರಾಗ ದ್ವೇಷ ರಹಿತ ಅಸೀಮಿತ ಸದ್ಭಾವದಲ್ಲಿ ಅಂತ ಹೇಳಿದರು! ಎಲ್ಲಿಯೂ ನಿಲ್ಲದಿರು ಅನ್ನುವುದನ್ನು ಪಾಲಿಸಿದರು. ಅನಿಕೇತನವಾದರು. ಮನುಜ ಮತ ಬಿಂಬಿಸಿದರು. ತಲೆಗೆ ತಾಪ ಮಾಡಿಕೊಳ್ಳದೇ ಅವರವರ ಕಾಯಕದಲ್ಲಿ ಆನಂದವಾಗಿ ಇರಿ ಎಂದರು. ಹೀಗಿದ್ದರೆ ಯಾವ ಸಮಸ್ಯೆ ಇರುತ್ತವೆ ಹೇಳಿ? ಬಸವಣ್ಣನವರು, ಬುದ್ಧ, ಕುವೆಂಪು ಅವರು ಹೇಳಿದ್ದು ಇದೇ ಅಲ್ಲವೇ? ಮತ್ತೆ ಇವರ ಕುರಿತು ಸಣ್ಣ ಮನಸ್ಸಿನ ಟೀಕೆ ಯಾಕೆ.. ನಮಗೆ ನಿಜಕ್ಕೂ ಕೊರತೆ ಇರುವುದೇ ಇಲ್ಲಿ, ಸದ್ಭಾವದಲ್ಲಿ. ಹಾಗಾಗಿ ಎಲ್ಲೆಲ್ಲೂ ವಿಷಮ ಸ್ಥಿತಿ. ಆನಂದ ಮಾಯ. ಸನ್ನಡತೆ ಸಾವು. ಬಯಲಲ್ಲಿ ಬರೀ ಗದ್ದಲ.

ಯಾವತ್ತೂ ಸಿದ್ಧಾಂತದ ಛತ್ರಿಯಲ್ಲೇ ನಾವುಗಳು ಪಡೆಯುತ್ತ ಹೋಗಲಾಗುವುದಿಲ್ಲ. ಪ್ರತಿಯೊಂದು ಅದರೊಳಗೆ ತುರುಕಲೂ ಸಾಧ್ಯವಿಲ್ಲ. ಸಿದ್ಧಾಂತಗಳು ಮನುಷ್ಯ ಪ್ರೇಮಿಯಾಗಿರಬೇಕು. ಅದೇ ನಿಜ ಗಮ್ಯವಲ್ಲವೇ? ಸಿದ್ದೇಶ್ವರ ಶ್ರೀ ಎಲ್ಲೂ ಅಂಟಿಕೊಳ್ಳಲಿಲ್ಲ. ನಾವು ಅವರನ್ನು ಅಂಟಿಸಲೂ ಬಾರದು. ಎಲ್ಲ ಧರ್ಮಗಳು ಒಳಿತನ್ನೇ ಬಯಸಿವೆ, ಆದರೆ ಆಚರಣೆ ಇಲ್ಲ. ಅರ್ಥೈಸಲು ಸೋತಿದ್ದೇವೆ. ದೇವರು, ಧರ್ಮಗಳು ಶ್ರೇಷ್ಠತೆಯ ವ್ಯಸನ ಹಚ್ಚಿಕೊಂಡು ಏನೇನು ನಡೆಯುತ್ತಿದೆ ಈಗೆ ನಾವೆಲ್ಲ ನೋಡುತ್ತಿದ್ದೇವೆ. ಮನುಷ್ಯನ ನೆಮ್ಮದಿ ಈ ಧರ್ಮಗಳ ಬೇಗುದಿಯಲ್ಲಿ ಸಿಕ್ಕು ನರಳುತ್ತಿವೆ. ಸಹಜವಾಗಿ ಸತ್ಯ ಒಪ್ಪಿಕೊಳ್ಳಲು, ಸರಳವಾಗಿ ಎಲ್ಲವನ್ನೂ ಸ್ವೀಕರಿಸಲು ಆಗುತ್ತಿಲ್ಲ. ಬರೀ ಬೇಗುದಿ ಇದೆ. ಇದೆಲ್ಲದಕ್ಕೆ ಸಿದ್ದೇಶ್ವರ ಶ್ರೀ ಬದುಕಿ ಹೋದ ರೀತಿ, ಅವರ ಅನುಭಾವದ ಮಾತುಗಳು ಔಷಧವಾದರೆ ಸಾಕು.

– ಶಿವಕುಮಾರ್ ಉಪ್ಪಿನ, ಪತ್ರಕರ್ತ

Leave a Reply