ಶಿವಾಜಿ ಬದುಕಿದ್ದಾಗಲೇ ಶಿವಾಜಿಯನ್ನು ವರ್ಣದಿಂದ ಕ್ಷತ್ರಿಯನಲ್ಲ ಎನ್ನುವ ಕಾರಣಕ್ಕೆ ಶಿವಾಜಿಯ ಪಟ್ಟಾಭಿಷೇಕದ ಸಮಯದಲ್ಲಿ ಅಲ್ಲಿನ ಬ್ರಾಹ್ಮಣರು ನಡೆದುಕೊಂಡ ರೀತಿ ನಿಜಕ್ಕೂ ಅಮಾನವೀಯ. ಆದರೂ ಶಿವಾಜಿ ದೃತಿಗೆಡದೆ ಹಲ್ಲುಕಚ್ಚಿಕೊಂಡು, ಕೈಲಾಗದ ಮತ್ತು ಮೈಬಗ್ಗಿಸಿ ದುಡಿಯದ ಮಂತ್ರ ತಂತ್ರಗಳಿಂದ ಜನರನ್ನು ಮೊಸಗೊಳಿಸುವ
ಕುತಂತ್ರಿಯೊಬ್ಬ, ಶಿವಾಜಿ ಒಬ್ಬ ಶೂದ್ರ ಹಾಗಾಗಿ ಆತನನ್ನು ನಾನು ಮುಟ್ಟುವುದಿಲ್ಲವೆಂದು ತನ್ನ ಎಡಗಾಲಿನ ಹೆಬ್ಬೆರಳಿನಿಂದ ತಿಲಕವಿಟ್ಟಂತಹ ಕೆಟ್ಟ ಗಳಿಗೆಯನ್ನು ಸಹಿಸಿಕೊಂಡು ರಾಜನ ಪಟ್ಟವನ್ನು ಅಲಂಕರಿಸುತ್ತಾನೆ. ಶಿವಾಜಿಯ ಆಳ್ವಿಕೆಯಲ್ಲಿ ಸೈನ್ಯದಲ್ಲಿ ಸೇರ್ಪಡೆಯಾಗುವುದಕ್ಕೆ ಜಾತಿ ಧರ್ಮದ ಬ್ಯಾರಿಯರ್ ಗಳಿರಲಿಲ್ಲ. ಆ ಕಾರಣಕ್ಕೆ ಶೂದ್ರರು ದಲಿತರು ಮುಸಲ್ಮಾನರು ಎಲ್ಲರೂ ಸೈನ್ಯದೊಳಗಿದ್ದರು. ಏಕೆಂದರೆ ದೈಹಿಕ ಸಾಮರ್ಥ್ಯವೊಂದೇ ಸೈನಿಕನಾಗಲು ಅರ್ಹತೆಯಾಗಿತ್ತು.
ಆದರೆ ಶೂದ್ರನೊಬ್ಬ ರಾಜನಾಗಿದ್ದನ್ನು ಸಹಿಸದ ಕುತಂತ್ರಿಗಳು ಕತ್ತಿ ಮಸೆಯುತ್ತಲೇ ಇದ್ದರು. ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಪುಷ್ಯಮಿತ್ರಶುಂಗನ ಕುಲದವರು ಶಿವಾಜಿಯನ್ನು ಕುತಂತ್ರದಿಂದಲೇ ಮುಗಿಸಿ ತಮ್ಮ ಕೈಗೆ ಅಧಿಕಾರವನ್ನು ಪಡೆದರು. ಪೆಶ್ವೇಗಳ ಆಳ್ವಿಕೆ ಶುರುವಾಯ್ತು.
ಪೆಶ್ವೇಗಳು ಆಳ್ವಿಕೆಗೆ ಬಂದ ತಕ್ಷಣ ದಲಿತ ಸೈನಿಕರನ್ನು ಸೈನ್ಯದಿಂದ ಕಿತ್ತುಹಾಕಿದರು. ಮೊದಲೇ ಸಾವಿರಾರು ವರ್ಷಗಳಿಂದ ಸಮಾಜದ ಮುಖ್ಯವಾಹಿನಿಯಿಂದ, ಶಿಕ್ಷಣ, ಉದ್ಯೋಗದಿಂದ ದೂರ ಉಳಿದಿದ್ದ ಇವರಿಗೆ ಸೈನ್ಯದಲ್ಲಿ ಸಿಕ್ಕಂತಹ ಕೆಲಸ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅವಕಾಶವಾಗಿತ್ತು. ದೈಹಿಕವಾಗಿ ಬಲಿಷ್ಠರಾಗಿದ್ದ ಸ್ವಾಭಿಮಾನಿ ಮೂಲನಿವಾಸಿಗಳಿಗೆ ದಿಕ್ಕೇ ತೋಚದಂತಾಗಿ ಮತ್ತೆ ವರ್ಣಾಶ್ರಮದಲ್ಲಿ ದಲಿತರಿಗೆ ಮೀಸಲಾಗಿರಿಸಿದ್ದ ಕಾಯಕವನ್ನೇ ಮಾಡಿ ಜೀವನ ಸಾಗಿಸಬೇಕಾಗಿ ಬಂತು.
ಪೆಶ್ವೇಯ ಎರಡನೇ ಬಾಜಿರಾಯನ ಆಳ್ವಿಕೆಯಲ್ಲಿ ಆತನ ವಿರುದ್ಧ ಯುದ್ಧ ಸಾರಿದ ಕ್ಯಾಪ್ಟನ್ ಸ್ಟಾಂಟನ್ ನ ನೇತೃತ್ವದ ಸುಮಾರು 600 ಕಾಲ್ದಳ ಸೈನಿಕರನ್ನು ಹೊಂದಿದ್ದ ಬ್ರಿಟೀಷ್ ಸೈನ್ಯ ಮರಾಠ ರಾಜ್ಯದ ಕಡೆಗೆ ಧಾವಿಸಿತ್ತು. ಎರಡನೇ ಬಾಜಿರಾಯ ಸುಮಾರು 28 ಸಾವಿರ ಸೈನಿಕರನ್ನು ಹೊಂದಿರುವ ವಿಷಯ ತಿಳಿದ ಸ್ಟಾಂಟನ್ ಭೀಮಾನದಿ ತೀರದಲ್ಲಿದ್ದ ಒಂದು ಹಳ್ಳಿಯ ಮುಖಂಡನಾದ ಸಿದ್ಧನಾಕ ನನ್ನು ಭೇಟಿಯಾಗುತ್ತಾನೆ. ಭೀಮಾತೀರದಲ್ಲಿದ್ದ ಆ ಹಳ್ಳಿಯ ಇತಿಹಾಸವನ್ನು ತಿಳಿದ ಕ್ಯಾಪ್ಟನ್ ಸ್ಟಾಂಟನ್ ಅವರ ಬಲಿಷ್ಠ ದೇಹದಾರ್ಢ್ಯತೆ ಮತ್ತು ಒಗ್ಗಟ್ಟನ್ನು ನೋಡಿ ಸಂತಸಗೊಳ್ಳುತ್ತಾನೆ. ಪೆಶ್ವೇಗಳ ವಿರುದ್ಧ ಹೋರಾಡಲು ನಮಗೆ ನಿಮ್ಮ ಸಹಾಯ ಬೇಕಾಗಿದೆ ಎಂದು ಕೇಳಿಕೊಂಡಾಗ, ನಾವು ನಮ್ಮವರೊಂದಿಗೆ ಮಾತನಾಡಿ ನಿಮಗೆ ತಿಳಿಸುತ್ತೇವೆ ಎಂದು ಸ್ಟಾಂಟನ್ ರನ್ನು ಕಳಿಸಿಕೊಡುತ್ತಾರೆ.
ಪೆಶ್ವೇಗಳು ನಮ್ಮನ್ನು ಜಾತಿಯ ಕಾರಣಕ್ಕೆ ಕೀಳಾಗಿ ಕಂಡು ಸೈನ್ಯದಿಂದ ತೆಗೆದುಹಾಕಿರಬಹುದು, ಆದರೆ ಇದು ನಮ್ಮದೇ ನೆಲ, ಎಲ್ಲಿಂದಲೋ ಬಂದ ಪರಕೀಯರನ್ನು ಗೆಲ್ಲಿಸುವುದಕ್ಕೆ ನಮ್ಮವರಾದ ಪೆಶ್ವೇಗಳ ವಿರುದ್ಧ ನಾವು ತಿರುಗಿ ಬಿದ್ದರೆ ಅದು ನಾಡದ್ರೋಹವಾದೀತು ಎಂದು ಆ ಸಮಯದಲ್ಲೂ ನಾಡಪ್ರೇಮ ಮೆರೆದ ಅವರು ಸೀದಾ ಎರಡನೇ ಬಾಜಿರಾಯನ ಬಳಿ ಹೋಗಿ ಒಮ್ಮೆ ಮಾತನಾಡಿ ಬರೋಣವೆಂದು ಹೋಗುತ್ತಾರೆ. ಅರಮನೆಯ ಉಪ್ಪರಿಗೆಯ ಮೇಲೆಯೇ ನಿಂತು ಯಾರು ನೀವು ಯಾಕೆ ಬಂದಿದ್ದೀರಿ ಎಂದು ಬಾಜಿರಾಯ ಕೇಳುತ್ತಾನೆ. ಪ್ರಭು ನಾವು ಭೀಮಾತೀರದ ಬಳಿಯ ಹಳ್ಳಿಯವರು, ನಮ್ಮ ತಾತ ಮುತ್ತಾತಂದಿರು ಮರಾಠ ಆಸ್ಥಾನದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದವರು, ಆದರೆ ನಾವು ಅಸ್ಪೃಶ್ಯರು ಎನ್ನುವ ಕಾರಣ ಕೊಟ್ಟು ನಮ್ಮನ್ನು ಸೇನೆಯಿಂದ ತೆಗೆದುಹಾಕಿದರು ಆಗಿನಿಂದಲೂ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೂ ನಮಗೆ ಈ ನೆಲದ ಋಣ ಬಾಕಿಯಿದೆ, ನಾವು ನಾಡ ಪ್ರೇಮಿಗಳು. ಬ್ರಿಟೀಷರು ನಿಮ್ಮ ಮೇಲೆ ಯುದ್ಧ ಸಾರಲು ಬರುತ್ತಿದ್ದಾರೆ. ಅವರು ನಿಮ್ಮ ಮೇಲೆ ಯುದ್ಧ ಮಾಡಲು ನಮ್ಮ ಸಹಾಯಕ್ಕಾಗಿ ಧಾವಿಸಿದ್ದಾರೆ. ಆದರೆ ಪರಕೀಯರಿಗಾಗಿ ನಮ್ಮವರ ವಿರುದ್ಧ ತಿರುಗಿ ಬೀಳಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ನಾವು ಒಂದು ಬೇಡಿಕೆಯೊಂದಿಗೆ ನಿಮ್ಮ ಬಳಿ ಬಂದಿದ್ದೇವೆ. ನಮಗೆ ನಮ್ಮ ದೈಹಿಕ ಸಾಮರ್ಥ್ಯದ ಅರ್ಹತೆಯನ್ನು ಪರೀಕ್ಷಿಸಿ ನಿಮ್ಮ ಸೇನೆಯಲ್ಲಿ ಸೇರಿಸಿಕೊಂಡರೆ ಈ ನೆಲಕ್ಕಾಗಿ ಕೊನೆಯುಸಿರು ಇರುವವರೆಗೂ ಹೋರಾಡುತ್ತೇವೆ ಎಂದು ಕೇಳಿಕೊಳ್ಳುತ್ತಾರೆ.
ಸಿದ್ಧನಾಕನ ಮಾತುಗಳನ್ನು ಕೇಳಿಸಿಕೊಂಡ ಎರಡನೇ ಬಾಜಿರಾಯ ಒಮ್ಮೆಲೆ ಕುಪಿತಗೊಂಡು ಕಾವಲುಗಾರರನ್ನು ಕರೆದು ಯಾರು ಇವರನ್ನು ಒಳಗೆ ಬಿಟ್ಟಿದ್ದು? ಈ ಕೀಳು ಜಾತಿಯವರನ್ನು ನಮ್ಮ ಸೈನ್ಯದೊಳಗೆ ಸೇರಿಸಿಕೊಳ್ಳಬೇಕೆ? ನಿಮ್ಮ ವೃತ್ತಿ ಏನಿದ್ದರೂ ಮಲ ಹೊರುವುದು, ಸತ್ತ ದನಗಳನ್ನು ಊರ ಹೊರಗೆ ಹಾಕುವುದು, ಕೂಲಿ ಮಾಡುವುದು ಅಷ್ಟೇ. ಅಂಥದ್ದರಲ್ಲಿ ನೀವು ಕ್ಷತ್ರಿಯರಾದ ನಮ್ಮೊಂದಿಗೆ ಸರಿಸಮಾನವಾಗಿ ನಿಂತು ಹೋರಾಡುವ ಕನಸು ಕಾಣುತ್ತಿದ್ದೀರಾ ತೊಲಗಿ ಇಲ್ಲಿಂದ ಇಲ್ಲದಿದ್ದರೆ ನಿಮ್ಮ ರುಂಡಗಳನ್ನು ಚೆಂಡಾಡುತ್ತೇನೆಂದು ನಿಂದಿಸುತ್ತಾನೆ. ಅವಮಾನಗೊಂಡ ಸಿದ್ಧನಾಕ ಮತ್ತು ಆತನ ಸ್ನೇಹಿತರು ತಲೆತಗ್ಗಿಸಿ ಅಲ್ಲಿಂದ ವಾಪಾಸ್ ಧಾವಿಸುತ್ತಾರೆ. ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಇದು ಕೇವಲ ಅವಮಾನವಷ್ಟೇ ಅಲ್ಲ ನಮ್ಮ ಸ್ವಾಭಿಮಾನದ ಕಗ್ಗೊಲೆ ಎಂದು ಭಾವಿಸಿ ಕ್ಯಾಪ್ಟನ್ ಸ್ಟಾಂಟನ್ ನನ್ನು ಭೇಟಿಯಾಗಿ ನಿಮ್ಮ ಬ್ರಿಟೀಷ್ ಸೈನ್ಯದೊಳಗೆ ನಮಗೆ ಉದ್ಯೋಗ ಕೊಟ್ಟರೆ ನಾವು ನಿಮ್ಮೊಂದಿಗೆ ನಿಂತು ಪೆಶ್ವೇಯ ವಿರುದ್ಧ ಹೋರಾಡಲು ತಯಾರಿದ್ದೇವೆ ಎಂದು ಹೇಳುತ್ತಾರೆ. ಇವರ ಬೇಡಿಕೆಯನ್ನು ಸ್ಟಾಂಟನ್ ಒಪ್ಪಿಕೊಳ್ಳುತ್ತಾನೆ.
‘ಭೀಮಾ ನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಮದ್ರಾಸ್ನ 24 ಗನ್ಮೆನ್ಗಳ ಸಹಾಯದಿಂದ 20,000 ಅಶ್ವದಳವಿದ್ದ, 8,000 ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12 ಗಂಟೆಗಳು ಯಾವುದೇ ವಿಶ್ರಾಂತಿ-ಆಯಾಸವಿಲ್ಲದೆ, ಆಹಾರ-ನೀರಿನ ಪರಿವೆಯಿಲ್ಲದೆ ಹೋರಾಡುತ್ತಾರೆ. ಮಹಾರ್ ಸೈನಿಕರ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು, ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9ಗಂಟೆಗೆ ಗುಂಡಿನ ದಾಳಿಯನ್ನು ನಿಲ್ಲಿಸುತ್ತದೆ. ಹಾಗೂ ವಿಧಿಯಿಲ್ಲದೆ ಕೋರೇಗಾಂವ್ನಿಂದ ರಾತ್ರೋರಾತ್ರಿ ಕಾಲ್ಕೀಳುತ್ತದೆ.. ಕೋರೇಗಾಂವ್ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ, ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ, ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ, ಅಂತಹ ದೌರ್ಜನ್ಯಕೋರ ಕುತಂತ್ರಿಗಳ ವಿರುದ್ಧ. ಒಂದು ವೇಳೆ ಕೋರೇಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಮತ್ತೂ ಮುಂದುವರಿದಿರುತ್ತಿತ್ತು.
ಈ ಯುದ್ಧದಲ್ಲಿ ವೀರಾವೇಶದಿಂದ ಪೆಶ್ವೇಗಳ ವಿರುದ್ಧ ಕಾದಾಡಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣ ಗೊಳ್ಳುತ್ತದೆ. ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ. ಒಟ್ಟಾರೆಯಾಗಿ ಅದು ಬ್ರಿಟೀಷ್ ಮತ್ತು ಪೇಶ್ವೆಯ ಮದ್ಯೆ ನಡೆದ ಯುದ್ದವಾಗಿರಲಿಲ್ಲ ಬದಲಾಗಿ ದಲಿತರ ಸ್ವಾಭಿಮಾನ ಮತ್ತು ಶೋಷಕರ ನಡುವೆ ನಡೆದ ಬಹುದೊಡ್ಡ ಕಾದಾಟವಾಗಿತ್ತು. ಗೆರಿಲ್ಲಾ ಯುದ್ಧದಲ್ಲಿ ಪರಿಣಿತಿ ಹೊಂದಿದ್ದ ಮಹಾರ್ ನ 22 ಸೈನಿಕರು ಇಡೀ 28000 ಪೇಶ್ವೇಗಳ ಹೆಡೆಮುರಿ ಕಟ್ಟಿದ ದಿನವನ್ನ ಭೀಮಾ ಕೊರೆಗಾಂವ್ ವಿಜಯೋತ್ಸವವನ್ನಾಗಿ ಆಚರಿಸಲಾಗುತ್ತದೆ. ಈ ಸ್ವಾಭಿಮಾನದ ಯುದ್ಧವನ್ನು ಇತಿಹಾಸದ ಪುಟಗಳಿಂದ ಮರೆಮಾಚಲಾಗಿತ್ತು ಏಕೆಂದರೆ ಅಕ್ಷರ ಬಲ್ಲವರು ಮಾತ್ರ ಇತಿಹಾಸ ಬರೆಯುತ್ತಿದ್ದರು, ಅಕ್ಷರ ಕಲಿತವರು ಅವರೇ ಆಗಿದ್ದರು, ಅಸ್ಪೃಶ್ಯರು ಬ್ರಾಹ್ಮಣರ ವಿರುದ್ಧ ಬಂಡಾಯವೆದ್ದು ಅವರ ಹೆಡೆಮುರಿ ಕಟ್ಟಿದ ಇತಿಹಾಸವನ್ನು ಸ್ವತಃ ಅವರಿಗೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.. ಮರೆಮಾಚಲಾಗಿದ್ದ ಈ ಇತಿಹಾಸವನ್ನು ಕೆದಕಿ ತೆಗೆದದ್ದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು.
– ರುದ್ರು ಪುನೀತ್ .ಆರ್.ಸಿ, ಸಾಮಾಜಿಕ ಹೋರಾಟಗಾರರು




