ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತದ ಧಗೆ ತೀವ್ರಗೊಂಡಿದೆ. ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಹಿರಿಯ ನಾಯಕರಾದ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ, ಸಂಪುಟ ಸೇರ್ಪಡೆ ಮಾಡಿಕೊಳ್ಳದೆ ಹೋದರೆ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.
ಇವರ ಮನವೊಲಿಕೆಗೆ ಹಲವು ನಾಯಕರು ಮಾಡಿದ ಯತ್ನ ವಿಫಲವಾಗಿದೆ. ತಮ್ಮ ವಿರುದ್ಧದ ಆರೋಪಗಳಿಂದ ತಾವು ಮುಕ್ತರಾದರೂ ತಮಗೆ ಸಂಪುಟದಲ್ಲಿ ಅವಕಾಶ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿರುವ ಈ ನಾಯಕರು ಇದಷ್ಟೇ ಅಲ್ಲ ಅವರು ಮುಂದಿನ ದಿನಗಳಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಇಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಚಿಂತನೆಯಿದೆ. ತಾವು ಮೊನ್ನೆ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ವರಿಷ್ಠರ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ ಎಂದು ಹೇಳಿದರು.
ಕೆಲ ವಿಚಾರಗಳನ್ನು ಬಹಿರಂಗವಾಗಿ ಮಾತನಾಡವುದು ಸರಿಯಲ್ಲ. ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪನವರನ್ನು ಕರೆಸಿಕೊಂಡು ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಧನ್ಯವಾದ: ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ತಮಗೆ ಸಚಿವ ಸ್ಥಾನ ವಾಪಸ್ ನೀಡುವುದಾಗಿ ವರಿಷ್ಟರು ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರದ ಕಾರಣ ಅಸಮಾಧಾನ ಇತ್ತು. ಈಗ ಸಂಪುಟ ಸೇರುವ ಭರವಸೆ ಸಿಕ್ಕಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.
ನನ್ನ ಮೇಲಿನ ಆರೋಪಕ್ಕೆ ಕ್ಲೀನ್‍ಚಿಟ್ ಸಿಕ್ಕಿದ್ದು, ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ. ಆದಷ್ಟು ಬೇಗ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಜತೆ ರಮೇಶ್‍ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಭರವಸೆ ಮುಖ್ಯಮಂತ್ರಿಗಳಿಂದ ಸಿಕ್ಕಿದೆ. ಕರ್ನಾಟಕದಲ್ಲಿ ಬಿಜೆಪಿ 90ನೆ ದಶಕದಲ್ಲಿ ವೇಗ ಪಡೆಯಿತು. ಅನಂತ್‍ಕುಮಾರ್, ಬಿ.ಎಸ್.ಯಡಿಯೂರಪ್ಪ ಅವರ ಜತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿದವರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದರು.
ನನ್ನ ಮೇಲೆ ನಿರಾಧಾರ ಆರೋಪ ಬಂದಾಗ ಪಕ್ಷಕ್ಕೆ ಮುಜುಗರವಾಗದಂತೆ ಎಚ್ಚರ ವಹಿಸಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಮೇಲಿನ ಆರೋಪಗಳು ಮುಕ್ತವಾಗಿದ್ದು, ಮತ್ತೆ ಸಂಪುಟ ಸೇರುವ ಭರವಸೆ ಇದೆ ಎಂದು ಹೇಳಿದರು.




