ಹಳೆ ಪಿಂಚಣಿ ಜಾರಿ: ಸಮಗ್ರ ಚರ್ಚೆ ನಂತರ ನಿರ್ಧಾರ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ನಿವೃತ್ತ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಕೇಳಿಬಂದ ಹಲವು ಪ್ರಸ್ತಾಪಗಳಿಗೆ ಉತ್ತರಿಸಿದ ಅವರು, ಈ ವಿಷಯವಾಗಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಾಡಬೇಕೆ? ಬೇಡವೇ ಎಂಬುದು ಎರಡನೇ ಮಾತು? ಆದರೆ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಎಲ್ಲ ಸದಸ್ಯರ ಅಭಿಪ್ರಾಯದ ನಂತರ ಸರ್ಕಾರದ ನಿಲುವು ಏನೆಂಬುದನ್ನು ತಿಳಿಸುವುದಾಗಿ ಹೇಳಿದರು.

ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನ ಮಾಡುವುದರಿಂದ ಆಗಬಹುದಾದ ವೆಚ್ಚ, ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆ ಇವೆಲ್ಲವನ್ನು ಲೆಕ್ಕ ಹಾಕಬೇಕು. ಇದರ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ, ಅಂತಿಮವಾಗಿ ಸದಸ್ಯರೆಲ್ಲರ ಅಭಿಪ್ರಾಯ ಪಡೆದು ನಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.

ಈಗಾಗಲೇ ಸರ್ಕಾರಿ ನೌಕರರಿಗೆ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ವೇತನ ಪರಿಷ್ಕರಣೆ ಕುರಿತು 7ನೇ ವೇತನ ಆಯೋಗ ರಚನೆ ಮಾಡಲಾಗಿದೆ. ಟಿಎಡಿಎ ಪರಿಷ್ಕರಿಸಲಾಗಿದೆ. ಹಿಂದೆ ಡಿಎ ಜಾರಿಯಾಗಿದ್ದರೆ ಅದು ಅನುಷ್ಠಾನವಾಗಲು ವರ್ಷಗಳಾಗುತ್ತಿದ್ದವು. ಈಗ 24 ಗಂಟೆಯೊಳಗೆ ಜಾರಿಗೆ ಬರುತ್ತದೆ. ಹೀಗೆ ನೌಕರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದರು.

Leave a Reply