ಬಿಜೆಪಿ ನಾಯಕರಿಂದ ಕೋಮುದ್ವೇಷ ಬಿತ್ತುವ ಕೆಲಸ: ಎಸ್ಎಫ್ಐ

5 years ago

ಬೆಂಗಳೂರು: ಕೋವಿಡ್ ಸಂಕಷ್ಟದ ವೇಳೆ ಬಿಜೆಪಿ ಸರ್ಕಾರದ ಹೊಣೆಗೇಡಿತನದಿಂದ ಜನರು ಸಾವು ನೋವಿಗೆ ಕಾರಣವಾಗಿರುವಾಗ ಅವರ ಸಂಕಟವನ್ನು ಕೋಮುವಾದಿ ರಾಜಕೀಯ ದುರುಪಯೋಗ ಮಾಡಿಕೊಳ್ಳುವ ಹುನ್ನಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಡೆಸಿದ್ದಾರೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ)  ಕರ್ನಾಟಕ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಅಮರೇಶ ಕಡಗದ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.

ವಾರ್ ರೂಂ ನಲ್ಲಿ ಕೆಲಸ ಮಾಡುತ್ತಿರುವ 200 ಹೊರಗುತ್ತಿಗೆ ನೌಕರರಲ್ಲಿ ಕೇವಲ 17 ಜನ ಮುಸ್ಲಿಂ ಜನಾಂಗದ ನೌಕರರ ಹೆಸರನ್ನು ಮಾತ್ರ ಉಲ್ಲೇಖಿಸುತ್ತಾ ಜನತೆಯಲ್ಲಿ ಅವರ ಬಗ್ಗೆ ಅನುಮಾನ ಸೃಷ್ಟಿಸುವ ಮೂಲಕ ದ್ವೇಷ ಮತ್ತು ಶತೃತ್ವ ಬಿತ್ತುವ ಕೆಲಸದಲ್ಲಿ ಬಿಜೆಪಿ ಸಂಸದರು, ಶಾಸಕರು ನಿರತರಾಗಿದ್ದಾರೆ. ಕೆಲವು ಸಚಿವರು ಅದಕ್ಕೆ ಪುಷ್ಠಿ ನೀಡುವ ಹೇಳಿಕೆಯನ್ನು ತನಿಖೆಗೂ ಮುನ್ನ ನೀಡುತ್ತಿದ್ದಾರೆ ಎಂದಿದ್ದಾರೆ.

ವಾರ್ ರೂಂ ಜವಾಬ್ದಾರಿ ಹೊಂದಿರದ ಬಿಬಿಎಂಪಿ ಜಂಟಿ ಆಯುಕ್ತ ಸರಫರಾಜ್ ಖಾನ್ ರವರನ್ನು ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ಗುರಿಯಾಗಿಸಲಾಗುತ್ತಿದೆ. ಬಿಜೆಪಿ ಐಟಿ ಸೆಲ್ ಮೂಲಕ ಇದನ್ನು ಹರಿಬಿಡಲಾಗುತ್ತಿದೆ ಎಂದಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರದ ಸಾಲು ಸಾಲು ವೈಫಲ್ಯಗಳಿಂದ ಆಕ್ಸಿಜನ್ ಸಿಗದೆ ಕೋಲಾರದಲ್ಲಿ ‌4 ಜನ, ಚಾಮರಾಜನಗರದಲ್ಲಿ 24 ಜನರ ಸಾವುಗಳು ಸಂಭವಿಸಿವೆ. ಇದೇ ರೀತಿ ರಾಜ್ಯದೆಲ್ಲೆಡೆ ಸಾವುಗಳು ಸಂಭವಿಸಿವೆ. ಇದರ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರದ ಭಾಗವಾಗಿ ಇಂತಹ ಯತ್ನವನ್ನು ಬಿಜೆಪಿ ನಡೆಸಿದೆ ಎಂದಿದ್ದಾರೆ.

ಕೆಲ ಖಾಸಗಿ ಮಾಧ್ಯಮಗಳ ತನಿಖೆಯಲ್ಲಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಜೊತೆಗೂಡಿ ಬಿಬಿಎಂಪಿ ದಕ್ಷಿಣ ವಯಲದ ವಾರ್ ರೂಂ ನಲ್ಲಿ ನಡೆಯುತ್ತಿದೆ ಎನ್ನಲಾದ ಹಾಸಿಗೆ ಅವ್ಯವಹಾರ ಬಗ್ಗೆ ದಾಳಿ ನಡೆಸಿದ ತಂಡದ ಜೊತೆಗೆ ಭಾಗಿಯಾದ ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್‌ ರೆಡ್ಡಿ ಅವರೇ ಹಗರಣದ ಪ್ರಮುಖ ಆರೋಪಿಯಾಗಿ ಮೇಲ್ನೋಟನಕ್ಕೆ ಕಂಡುಬಂದಿದ್ದು ಕೂಡಲೇ ಅವರನ್ನು ಬಂಧಿಸಿ ಸಂಪೂರ್ಣವಾಗಿ ವಿಚಾರಣೆಗೆ ಒಳಪಡಿಸಬೇಕೆಂದು  ಎಸ್ಎಫ್ಐ ಆಗ್ರಹಿಸುತ್ತದೆ ಎಂದಿದ್ದಾರೆ.

ಮತ್ತಷ್ಟು  ತನಿಖೆ ನಡೆದರೆ  ತೇಜಸ್ವಿ ಸೂರ್ಯನೂ ಸಿಕ್ಕಿ ಬೀಳುವ ಸಾಧ್ಯತೆ ಇದೆ. ಬಿಜೆಪಿ‌ಯವರು ಯಾವುದಕ್ಕೂ ಹೇಸದವರು ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಸಮಗ್ರ ನ್ಯಾಯಾಂಗ ತನಿಖೆ ನಿರಾಕರಿಸಿ ಸಿಸಿಬಿ ತನಿಖೆಗೆ ಆದೇಶಿಸುವ ಮೂಲಕ ತನ್ನ ರಾಜಕೀಯ ಕ್ಕಾಗಿ ಬೆಡ್ ಬ್ಲಾಕಿಂಗ್ ಹಗರಣ ಬಳಸಿ ಕೋಮು ವಿಭಜನೆಗೆ ಬಿಜೆಪಿ ನಡೆಸಿರುವ ಯತ್ನ ಖಂಡನೀಯ. ಐಪಿಸಿ ಕಲಂ153A ಮತ್ತು 505(2) ರಡಿ ಇವರ ಮೇಲೆ  ಎಫ್ ಐ ಆರ್ ಹಾಕಬೇಕು. ಇಡಿ ಬೆಡ್ ಬ್ಲಾಕಿಂಗ್ ಹಗರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲು ಎಸ್ಎಫ್ಐ ಒತ್ತಾಯಿಸಿದೆ ಎಂದಿದ್ದಾರೆ.

ಖಾಸಗಿ ಆಸ್ಪತ್ರೆ ಬೆಡ್ ದರ ಪರಿಷ್ಕರಣೆ ಎಸ್ಎಫ್ಐ ವಿರೋಧ

ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಕೂಡಲೆ ಮೊದಲ ಸಭೆಯಲ್ಲಿ ಖಾಸಗಿ ಆಸ್ಪತ್ರೆ ಬೆಡ್ ದರ ಪರಿಷ್ಕರಣೆ ಮಾಡುವಂತೆ ನಿರ್ಣಯಿಸುವ ಮೂಲಕ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ಖಾಸಗಿ ಆಸ್ಪತ್ರೆಗಳ ಲಾಬಿಯ ಹಿತಾಸಕ್ತಿ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಸ್ವತಃ ವೈಧ್ಯಕೀಯ ಸಂಸ್ಥೆಯ ಮಾಲೀಕರಾದ  ಅವರಿಗೆ ಜನತೆಯ ಹಿತಕ್ಕಿಂತ ಖಾಸಗಿ ಆಸ್ಪತ್ರೆಗಳ ಹಿತವೆ ಪ್ರಧಾನವಾಗಿದೆ. ಖಾಸಗಿ ಹಿತಾಸಕ್ತಿಗಳ ಬಂದಿಯಾಗಿರುವ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಾಗಲೇ ಬಿಜೆಪಿ ಸಕಾ೯ರ ಖಾಸಗಿ ಲಾಬಿಗೆ ಮಣಿದಿದೆ ಎಂದು ದರ ಪರಿಕ್ಷರಣೆ ಶಿಫಾರಸ್ಸನ್ನು ಎಸ್ಎಫ್ಐ ವಿರೋಧಿಸಿದೆ. ಅದನ್ನು ಒಪ್ಪಬಾರದೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಸರ್ಕಾರಿ ಕೋಟಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತಾರತಮ್ಯ ಮಾಡುತ್ತಿರುವ ಹಲವು ಸಂಸ್ಥೆಗಳ ಮೇಲೆ ಕ್ರಮ ವಹಿಸದೆ ಅವರಿಗೆ ದರ ಹೆಚ್ಚಳದ ಉಡುಗೊರೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಎಂದು ಎಸ್ಎಫ್ಐ ಹೇಳಿದೆ.

Leave a Reply