ಲೋಕಾಯುಕ್ತರು ಏನು ಮಾಡುತ್ತಿದ್ದಾರೆ?: ರವಿಕೃಷ್ಣಾರೆಡ್ಡಿ

5 years ago

ಬೆಂಗಳೂರು: ಇಂತಹ ಸಮಯದಲ್ಲಿ ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಮತ್ತು ಲೋಕಾಯುಕ್ತರು ಏನು ಮಾಡುತ್ತಿದ್ದಾರೆ? ಎಂದು ಕೆ ಆರ್ ಎಸ್ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಪ್ರಶ್ನಿಸಿದ್ದಾರೆ.

ಬಿಬಿಎಂಪಿ ವಾರ್ ರೂಂ, ಬೆಡ್ ಅಲಾಟ್ ವಿಷಯದ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನಿನ್ನೆ ಸುದ್ದಿಗೋಷ್ಠಿ ನಡೆಸಿ ಅವ್ಯವಹಾರದ ಆರೋಪ ಹೊರಿಸಿದ್ದರು. ಈ ಹಿನ್ನೆಯಲ್ಲಿ ಪ್ರತಿಕ್ರಿಯಿಸಿರುವ ರವಿಕೃಷ್ಣಾರೆಡ್ಡಿ, ತಮ್ಮ ಕರ್ತವ್ಯ ನಿಭಾಯಿಸಲಾಗದ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ರಾಜೀನಾಮೆ ನೀಡಿ ತೊಲಗಬೇಕು. ಅದಕ್ಷ ಮತ್ತು ಅನರ್ಹ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ನೇಮಿಸಿದ ಸಿದ್ದರಾಮಯ್ಯನವರಿಗೆ ನಾಚಿಕೆ ಆಗಬೇಕು ಎಂದು ಅವರು ಕಿಡಿಕಾರಿದ್ದಾರೆ.

ಲೋಕಾಯುಕ್ತ ಒಂದು ಸಶಕ್ತ ಸಂಸ್ಥೆ ಆಗಿ ಉಳಿದಿದ್ದರೆ ಇಂದು ಆಡಳಿತ ವ್ಯವಸ್ಥೆ ಈ ರೀತಿ ಹದಗೆಡುತ್ತಿರಲಿಲ್ಲ. ಕರ್ನಾಟಕದ ಬಲಿಷ್ಠ ಲೋಕಾಯುಕ್ತ ಸಂಸ್ಥೆಯನ್ನು ಸರ್ವನಾಶ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ್ದು ಮತ್ತು ಸಿದ್ದರಾಮಯ್ಯನವರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ತಾವು ಅಧಿಕಾರಕ್ಕೆ ಬಂದ ತಕ್ಷಣ ಲೋಕಾಯುಕ್ತವನ್ನು ಬಲಗೊಳಿಸುತ್ತೇವೆ ಎಂದು ಪುಂಗಿ ಊದಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಮಾಡಿದ್ದೇನು? ಇವರ ವಚನಭ್ರಷ್ಟತೆಗೆ ಮತ್ತು ಭ್ರಷ್ಟಾಚಾರಕ್ಕೆ ಕೊನೆಯಿದೆಯೆ? ಇವರ ಸಮಯಸಾಧಕತನ ಮತ್ತು ಹಣಪಿಪಾಸಿಗೆ ಬಲಿಯಾಗುತ್ತಿರುವವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

ಸಾವುನೋವುಗಳು ಇಂದು ರಾಜ್ಯದ ಪ್ರತಿಯೊಬ್ಬರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಾಧಿಸುತ್ತಿವೆ. ನಮ್ಮ ಕರ್ನಾಟಕ ರಾಜ್ಯದ ಇಡೀ ಆಡಳಿತ ವ್ಯವಸ್ಥೆ ಈ ತರಹ ಅವ್ಯವಸ್ಥೆ ಕಡೆಗೆ ಜಾರಿ ಕುವ್ಯವಸ್ಥೆಯತ್ತ ಸಾಗಲು ಯಾರೆಲ್ಲಾ ಕಾರಣ ಎಂದು ಪ್ರತಿಯೊಬ್ಬರೂ ಯೋಚಿಸಬೇಕು. J.C.B ಪಕ್ಷಗಳನ್ನು ತಿರಸ್ಕರಿಸಿ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಮೌಲ್ಯಾಧಾರಿತ ರಾಜಕೀಯ ವ್ಯವಸ್ಥೆಯನ್ನು ಕಟ್ಟಿಕೊಳ್ಳುವತ್ತ ಜನ ಗಂಭೀರವಾಗಿ ಯೋಚಿಸಬೇಕು. ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೇ ನೇಣು ಹಾಕಿಕೊಳ್ಳಲು ಹೋಗುವವರನ್ನು ಯಾರೂ ಬದುಕಿಸಲಾರರು ಎಂದು ಹೇಳಿದ್ದು, ಬದಲಾಗಿ. ಬದಲಾಯಿಸಿ ಎಂದು ಅವರು ಕರೆ ನೀಡಿದ್ದಾರೆ.

Leave a Reply