ಬೆಂಗಳೂರು: ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಕೆನೆಭರಿತ ಹಾಲಿನ ಪುಡಿ ಬದಲಿಗೆ ಟೆಟ್ರಾ ಪ್ಯಾಕ್‍ನಲ್ಲಿರುವ ಹಾಲು ವಿತರಿಸಲು ಕೆಎಂಎಫ್ ತೀರ್ಮಾನಿಸಿದೆ.
ಕೆನೆಭರಿತ ಹಾಲಿನ ಪುಡಿಯ ಹಾಲು ಕುಡಿಯಲು ಮಕ್ಕಳು ಅಷ್ಟಾಗಿ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಬದಲಾವಣೆಯ ಚಿಂತನೆ ನಡೆಸಲಾಗಿದೆ.
ಈ ಕುರಿತಂತೆ ಕೆಎಂಎಫ್ ಈಗಾಗಲೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಶೀಘ್ರದಲ್ಲೇ ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ಹಾಲು ವಿತರಿಸುವ ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲಿನ ಪೌಡರ್ ವಿತರಿಸುವಲ್ಲಿ ಸಾಲು ಸಾಲು ಲೋಪಗಳು ಕಂಡು ಬಂದಿದ್ದವು. ಜೊತೆಗೆ ಬಡ ಮಕ್ಕಳ ಹಾಲಿನ ಪೌಡರ್ ಅಕ್ರಮ ಸಾಗಾಟ ಮಾಡುತ್ತಿರುವ ಆರೋಪಗಳು ಹೆಚ್ಚಾಗುತ್ತಿರುವ ಕಾರಣದಿಂದ ಟೆಟ್ರಾ ಪ್ಯಾಕ್ ಹಾಲು ವಿತರಿಸಲು ತೀರ್ಮಾನಿಸಿದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಮಾಡಿರುವ ಈ ಹೊಸ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಬಜೆಟ್‍ನಲ್ಲಿ ಟೆಟ್ರಾ ಪ್ಯಾಕ್ ಹಾಲು ವಿತರಿಸುವ ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.




