ಸ್ಲಂ ಬೋರ್ಡ್ ವಸತಿ ನಿರ್ಮಾಣಕ್ಕೆ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ದುರ್ಬಳಕೆ
ರಾಜ್ಯದ್ಯಂತ ಸೆಪ್ಟೆಂಬರ್ 22 ರಂದು ನೈಜ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂ ಬೋರ್ಡ ಫಲಾನುಭವಿಗಳಿಗೆ ನೀಡಿದ್ದಾರೆ. ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆದ ದ್ರೋಹವಾಗಿದ್ದು ಇದರ ವಿರುದ್ಧ ಸೆಪ್ಟೆಂಬರ್ 22ರಂದು ರಾಜ್ಯದ್ಯಾಂತ ನೈಜ ಕಟ್ಟಡ ಕಾರ್ಮಿಕರು ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 1996ರಲ್ಲಿ ಜಾರಿಗೊಂಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕರ್ನಾಟಕದಲ್ಲಿ 2007ರಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೆ 2007 ರಿಂದ ಕಲ್ಯಾಣ ಮಂಡಳಿಯ ಪ್ರಮುಖ ಯೋಜನೆಯಾದ ‘ವಸತಿ ನಿರ್ಮಾಣಕ್ಕೆ ಸಾಲ ಅಥವಾ ಮುಂಗಡ ಹಣ ಪಾವತಿ ಯೋಜನೆ ಇದುವರೆಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ದೊರೆತಿಲ್ಲ. ಪರಿಸ್ಥಿತಿ ಹೀಗಿರುವಾಗ ಕಳೆದ ವರ್ಷದಿಂದ ವಿ.ಸೋಮಣ್ಣ ಹಾಗೂ ಶಿವರಾಮ ಹೆಬ್ಬಾರ್ ಜತೆ ಸೇರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 76 ಕೋಟಿ ಹಣವನ್ನು ‘ಕೊಳಚೆ ನಿರ್ಮೂಲನಾ ಮಂಡಳಿ’ಯ ‘5129 ಫಲಾನುಭವಿಗಳಿಗೆ’ ಹೆಸರಿನಲ್ಲಿ ಕಬಳಿಸಿ ರಾಜ್ಯದಲ್ಲಿ ವಸತಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾತ್ರವಲ್ಲ ಬಿಜೆಪಿ ಸರ್ಕಾರದ ವಸತಿ ಯೋಜನೆಗೆ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣ ಬಳಸಲು ಮುಂದಾಗಿದ್ದಾರೆ. ಇದಕ್ಕಾಗಿ ಕಲ್ಯಾಣ ಮಂಡಳಿಯಲ್ಲಿ ರೂಪಿಸಿದ್ದ ಐದು ವರ್ಷ ಕಡ್ಡಾಯ ನೋಂದಣಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿದೆ. ಇದರಿಂದ ರಾಜ್ಯದ ಬಿಜೆಪಿ ಸಚಿವರು ಶಾಸಕರು ಹಾಗೂ ಇತರೆ ಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು ಬೇಕಾಬಿಟ್ಟಿ ಕಲ್ಯಾಣ ಮಂಡಳಿ ಹಣ ದೋಚಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಮುಂದಿನ ತನ್ನ ರಾಜಕೀಯ ನೆಲೆಯನ್ನು ಭದ್ರಪಡಿಸಲು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮುಂದಾಗಿದ್ದಾರೆ ಎಂದಿದ್ದಾರೆ.
2021ನೇ ವರ್ಷದಲ್ಲಿ 6 ಕೋಟಿ ಹಣವನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಸಿದಾಗ ಕಟ್ಟಡ ಕಾರ್ಮಿಕ ಸಂಘಗಳು ಒಕ್ಕೂರಲಿನಿಂದ ವಿರೋಧಿಸಿದ್ದವು. ಹಾಗಾಗಿ ಕಲ್ಯಾಣ ಮಂಡಳಿ ಸಭೆಯಲ್ಲಿ ಈ ಹಣ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು. ಆದರೆ ಈಗ ಏಕಾಏಕಿ ಕೊಳಚೆ ನಿರ್ಮೂಲನೆ ಮಂಡಳಿ ಮಾತ್ರವಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ‘ಫಲಾನುಭವಿ’ಗಳಾಗಿ ಆಯ್ಕೆಯಾದ ಎಲ್ಲರಿಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಕಲಿ ಕಾರ್ಮಿಕರನ್ನು ಹೆಸರು ನೋಂದಾಯಿಸಿ ಇದರ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಮತ್ತು ಹಲವಾರು ಕಡೆಗಳಲ್ಲಿ ಕಾರ್ಮಿಕ ನಿರೀಕ್ಷಕರು ಪರಿಶೀಲನೆ ನಡೆಸದೇ ಅನುಮೋದನೆ ನೀಡುತ್ತಿರುವುದು ಅಥವಾ ಅನುಮೋದನೆ ನೀಡುವಂತೆ ಒತ್ತಾಯಗಳನ್ನು ಸ್ಥಳೀಯ ಶಾಸಕರು ಅವರ ಮೇಲೆ ಹೇರುತ್ತಿರುವ ಕಂಡು ಬಂದಿದೆ ಎಂದಿದ್ದಾರೆ.
ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣದಲ್ಲಿ ಶಿವರಾಮ ಹೆಬ್ಬಾರ್ ಅವರು ರೇಷನ್ ಕಿಟ್, ಟೂಲ್ ಕಿಟ್, ಆಂಬ್ಯೂಲೆನ್ಸ್, ದುಬಾರಿ ಕಾರು, ತಂತ್ರಾಂಶ ಖರೀದಿ, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್ಗಳನ್ನು ಪಾರದರ್ಶಕತೆ ಕಾಪಾಡದೇ ಖರೀದಿಸಿ ನೂರಾರು ಕೋಟಿ ಭ್ರಷ್ಟಚಾರ ನಡೆಸಿದ್ದಾರೆ. ಇದಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಖರೀದಿಯಲ್ಲಿನ ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ 2021 ರ ಮಾರ್ಚ್ ನಲ್ಲಿ ಹೊರಡಿಸಿರುವ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನಲೆಯಲ್ಲಿ ಹಣ ನಕಲಿ ಫಲಾನುಭವಿಗಳ ಪಾಲಾಗದಂತೆ ಕೂಡಲೇ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕೆಂದು ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ “ನೈಜ ಕಟ್ಟಡ ಕಾರ್ಮಿಕರು” ಸೆಪ್ಟೆಂಬರ್ ೨೨ ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೇಡಿಕೆಗಳು:
1. ಕೊಳಚೆ ನಿರ್ಮೂಲನೆ ಮಂಡಳಿ ಸೇರಿ ಇತರೆ “ವಸತಿ ಯೋಜನೆಗಳ ಫಲಾನುಭವಿಗಳನ್ನು” ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವ ಕ್ರಮವನ್ನು ಕೂಡಲೇ ಕೈ ಬಿಡಬೇಕು. ನೊಂದಣಿಯಾದ ಫಲಾನುಭವಿಗಳಲ್ಲಿ ನೈಜ ಕಟ್ಟಡ ಕಾರ್ಮಿಕರಿದ್ದರೆ ಮಾತ್ರ ಪರಿಶೀಲಿಸಿ ಅವರ ಹೆಸರನ್ನು ಕಲ್ಯಾಣ ಮಂಡಳಿಯ ನೋಂದಣಿ ಉಳಿಸಿಕೊಂಡು ಇತರೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು ಆದರೆ ಅಂತಹವರಿಗೂ ಮನೆ ನಿರ್ಮಾಣ ಸಹಾಯಧನ ನೀಡಿದ್ದರೆ ರದ್ದು ಮಾಡಬೇಕು. ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆ ಮೂಲಕ ನೋಂದಣಿಯನ್ನು ಕಾರ್ಮಿಕ ಇಲಾಖೆ ಮೂಲಕ ಮಾಡಿಸಿಕೊಂಡಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಮಂಡಳಿಯೇ ಹೂಡಬೇಕು ಮತ್ತು ಇಂತಹ ನೊಂದಣಿಗೆ ಕಾರಣವಾದ ಕಾರ್ಮಿಕ ನಿರೀಕ್ಷಕರು ಡಿಇಓಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
2. ಈಗಾಗಲೇ ಕೊಳಚೆ ನಿರ್ಮೂಲನೆ ಮಂಡಳಿಗೆ ಪಾವತಿಸಲಾದ ರೂ ೭೬ ಕೋಟಿ ಹಣವನ್ನು ಕೂಡಲೇ ಮಂಡಳಿ ಖಾತೆಗೆ ವಾಪಸ್ಸು ಪಡೆÀಯಲು ಅಗತ್ಯ ಕ್ರಮವಹಿಸಬೇಕು.
3. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯನಾಗಿ ಐದು ವರ್ಷ ಪೂರೈಸಿದ ಸದಸ್ಯರಿಗೆ ಮಾತ್ರವೇ ‘ಮನೆ ನಿರ್ಮಾಣಕ್ಕೆ ಸಾಲ/ಸಹಾಯಧನ/ಮುಂಗಡ ಹಣ ಪಾವತಿ ಮಾಡುವ ಕ್ರಮ ಜಾರಿಗೊಳಿಸಬೇಕು. ಈಗಾಗಲೇ 15 ವರ್ಷಗಳಿಂದ ನಿರಂತವಾಗಿ ಕಲ್ಯಾಣ ಮಂಡಳಿ ಸದಸ್ಯರಾಗಿರುವ; ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಕಾರ್ಮಿಕರಿಗೆ ಕೂಡಲೇ ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು ಮತ್ತು 2022 ಸಾಲಿನಿಂದಲೇ ವಾರ್ಷಿಕವಾಗಿ ಕನಿಷ್ಟ 15000 ಕಾರ್ಮಿಕ ಕುಟುಂಬಗಳಿಗೆ ಅವರು ಸಲ್ಲಿಸಲಾಗುವ ಸ್ವಂತಭೂಮಿ ದಾಖಲೆಗಳ ಆಧಾರದಲ್ಲಿ ‘ಕಾರ್ಮಿಕ ವಸತಿ ನಿರ್ಮಾಣಕ್ಕಾಗಿ” ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಇದಕ್ಕಾಗಿ ವಾರ್ಷಿಕ ಕನಿಷ್ಟ 300 ಕೋಟಿ ರೂಪಾಯಿಗಳನ್ನು ತೆಗೆದಿರಸಬೇಕು.
4. ಮಂಡಳಿಯಿಂದ ಈಗ ಜಾರಿಯಲ್ಲಿರುವ ‘ಸಿಜಿಎಚ್ ಆಧಾರಿತ ವೈಧ್ಯಕೀಯ ಮರುಪಾವತಿ’ ಯೋಜನೆ ರದ್ದು ಮಾಡಿ ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ‘ಆರೋಗ್ಯ ಸಂಜೀವಿನಿ ೨೦೨೧’ ನಗದುರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು
5. ಎಸ್ಎಸ್ಪಿ ಪೋರ್ಟ್ ನಲ್ಲಿ ಸಲ್ಲಿಸಿ ಬಾಕಿ ಇರುವ 60 ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಹಣ ಜಮಾ ಮಾಡಬೇಕು. ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕಾಗಿ ಎಸ್ಎಸ್ಪಿ ಪೋರ್ಟಲ್ ಮೂಲಕ ಅರ್ಜಿ ಸ್ವೀಕಾರ ಕೂಡಲೇ ಆರಂಭಿಸಬೇಕು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ನಾವು ಸಲ್ಲಿಸಲಾದ ಕೆಲ ಬದಲಾವಣೆ, ತಿದ್ದುಪಡಿಗಳನ್ನು ಅಳವಡಿಸಬೇಕು.
6. ಸೇವಾಸಿಂಧು ತಂತ್ರಾಂಶಕ್ಕೆ ಬದಲಿಯಾಗಿ, ಕಾರ್ಮಿಕ ಇಲಾಖೆಗೆ ಪ್ರತ್ಯೇಕ ತಂತ್ರಾಂಶವನ್ನು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿರುವುದು ಸ್ವಾಗತಾರ್ಹ. ಇದರಿಂದ ಸರ್ವರ್ ಸ್ಥಗಿತಗೊಳ್ಳುವ ಸಮಸ್ಯೆ ನೀಗಬಹುದೆಂದು ನಿರೀಕ್ಷೆ ಹೊಂದಿದ್ದೇವೆ. ಇದು ಕೂಡಲೇ ಕಾರ್ಮಿಕ ಇಲಾಖೆ ಮೂಲಕ ಜಾರಿಗೊಳಿಸಬೇಕು.
7. ಆರಂಭಿಸಲಾದ ಹೊಸ ಸಾಫ್ಟ್ವೇರ್ ಕುರಿತಂತೆ ಸಂಘಟನೆಯ ಕಾರ್ಯಕರ್ತರಿಗೆ ತಾಂತ್ರಿಕ ತರಬೇತಿ ಕಾರ್ಯಾಗಾರ (ದೈಹಿಕ) ನಡೆಸಬೇಕು ಹಾಗೂ ಕೇವಲ ಕಾರ್ಮಿಕ ಕಚೇರಿಗಳು ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕ ಸಂಘಗಳು, ನೊಂದಾಯಿತ ಬಿಲ್ಡರ್ಗಳು ಮಾತ್ರವೇ ನೀಡುವ “ಉದ್ಯೋಗ ಪ್ರಮಾಣ ಪತ್ರ” ಗಳನ್ನು ಪರಿಗಣಿಸಿ ನೋಂದಣಿ ಮಾಡಬೇಕು. ನಕಲಿ ಕಾರ್ಡುಗಳನ್ನು ವ್ಯಾಪಕವಾಗಿ ನಡೆಸುತ್ತಿರುವ ಸಿಎಸ್ಸಿ ಸೆಂಟರ್ ಹಾಗೂ ಗ್ರಾಮ ಓನ್ ಕೇಂದ್ರಗಳಲ್ಲಿ ನೋಂದಣಿಗೆ ಇರುವ ಅವಕಾಶವನ್ನು ರದ್ದುಪಡಿಸಬೇಕು.
8. ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕ ಪ್ರಾತಿನಿದ್ಯ ಸಿಗಬೇಕು: ೧೯೯೬ರ ಕಟ್ಟಡ ಕಾರ್ಮಿಕ ಕಾನೂನು ಜಾರಿ ಹಾಗು ಮಂಡಳಿ ರಚನೆ ಹಾಗು ಸೆಸ್ ಸಂಗ್ರಹ ಮತ್ತು ಕಾರ್ಮಿಕರ ನೋಂದಣಿ, ನವೀಕರಣ, ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವುದು ಹೀಗೆ ಕಾರ್ಮಿಕ ವರ್ಗದ ನೈಜ ಪ್ರತಿನಿಧಿಯಾಗಿ ಸಿಐಟಿಯು ಕೆಲಸ ಮಾಡುತ್ತಿರುವ ವಿಚಾರ ತಮಗೆ ತಿಳಿದಿದೆ. ಆದರೆ ಕಲ್ಯಾಣ ಮಂಡಳಿಗೆ ಪ್ರಾತಿನಿದ್ಯ ನೀಡುವಾಗ ರಾಜಕೀಯ ನೇಮಕಾತಿ ನಡೆಯುತ್ತಿರುವುದು ಸರಿಯಾದ ಕ್ರಮವಲ್ಲ. ಕೇಂದ್ರದ ಕಟ್ಟಡ ಕಾರ್ಮಿಕ ಸಲಹಾ ಮಂಡಳಿಯಲ್ಲಿ ಸಿಐಟಿಯು ನೇತೃತ್ವದ ಇಬ್ಬರು ಪ್ರತಿನಿಧಿಗಳು (ಒಬ್ಬರು ಮಹಿಳಾ ಪ್ರತಿನಿಧಿ ಸೇರಿ) ನಿರಂತರವಾಗಿ ಸದಸ್ಯರಾಗಿದ್ದಾರೆ. ಆದರೆ ರಾಜ್ಯದಲ್ಲಿ ಮಾತ್ರವೇ ಸಿಐಟಿಯು ಸಂಘಟನೆಯನ್ನು ಕಡೆಗಣಿಸುತ್ತಾ ಬರಲಾಗಿದೆ. ಇದು ಸರಿಯಲ್ಲ. ಸರ್ಕಾರದ ಈ ಧೋರಣೆಯನ್ನು ನಾವು ಖಂಡಿಸುತ್ತೇವೆ. ಈಗಿರುವ ಮಂಡಳಿಯನ್ನು ಪುನರ್ ರಚಿಸಿ, ಅದರಲ್ಲಿ ಕಟ್ಟಡ ಕಾರ್ಮಿಕರ ನಡುವೆ ನಿರಂತರ ಹಾಗು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಸಿಐಟಿಯು ಸಂಘಟನೆಗೆ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸುತ್ತೇವೆ ಇಲ್ಲದಿದ್ದಲ್ಲಿ ನಾವು ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎನ್ನುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.
9. ವಿವಿಧ ಸಹಾಯಧನಕ್ಕಾಗಿ ಕೋರಿ ಸಲ್ಲಿಕೆ ಆಗುತ್ತಿರುವ ಅರ್ಜಿಗಳ ವಿಲೇವಾರಿ ವಿಳಂಬ ಆಗುತ್ತಿರುವುದನ್ನು ಹಲವಾರು ಬಾರಿ ಮಂಡಳಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಳಂಬ ಆಗುತ್ತಿರುವ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಅರ್ಜಿಗಳ ವಿಲೇವಾರಿ ವಿಳಂಬ ತಪ್ಪಿಸಲು ಪ್ರತಿ ಅರ್ಜಿಗೂ ಸಂಖ್ಯೆಯನ್ನು ನೀಡಿ ಜೇಷ್ಟತೆ ಆಧಾರದಲ್ಲಿ ವಿಲೇವಾರಿ ಮಾಡಬೇಕು. ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸುವ, ಈ ಹಂತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಕ್ರಮವಹಿಸಬೇಕು. ಜೊತೆಗೆ ಕಾರ್ಮಿಕ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಅಗತ್ಯ ಕ್ರಮ ವಹಿಸುವುದು.
10. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಟ್ಟಡ ಕಾರ್ಮಿಕರಲ್ಲದವರಿಗೂ ಕಾರ್ಡುಗಳನ್ನು ಮಾಡಿಕೊಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಸೇವಾಸಿಂಧು ಕೇಂದ್ರಗಳು ಹಾಗೂ ಗ್ರಾಮ ಓನ್ ಕೇಂದ್ರಗಳಲ್ಲಿ ಇಂತಹ ದಂಧೆಯ ಕೇಂದ್ರ ಸ್ಥಾನಗಳಾಗಿವೆ. ಇದರಲ್ಲಿ ಕಾರ್ಮಿಕ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿಯೂ ಭಾಗಿಯಾಗಿರುವ ಸಾಧ್ಯತೆಗಳಿವೆ. ಇದರಿಂದಾಗಿ ಅರ್ಹರಿಗೆ ಸೇರಬೇಕಾದ ಸವಲತ್ತುಗಳನ್ನು, ಅರ್ಹರಲ್ಲದವರು ಅನುಭವಿಸುವಂತಾಗಿದೆ. ಇದಕ್ಕೆ ನಿಯಂತ್ರಣ ಹಾಕದಿದ್ದಲ್ಲಿ ಇದು ಬೃಹದಾಕಾರವಾಗಿ ಬೆಳೆಯುವ ಸಾಧ್ಯತೆಗಳಿವೆ. ಆದ್ದರಿಂದ ಈ ವಿಚಾರದಲ್ಲಿ ಕಾರ್ಮಿಕ ಸಂಘಟನೆಗಳ ಸಹಕಾರ ಪಡೆದು ನಿಯಂತ್ರಣ ಕಾರ್ಯಕ್ಕೆ ಮುಂದಾಗಬೇಕೆಂದು ಒತ್ತಾಯಿಸುತ್ತೇವೆ.
11. ಮಂಡಳಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ. ಆದ್ದರಿಂದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ಸದ್ಯ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಖಾಯಂ ಮಾಡಬೇಕೆಂದು ಒತ್ತಾಯಿಸುತ್ತೇವೆ.
12. ಹೆಸರಿಗಷ್ಟೇ 19 ಸೌಲಭ್ಯಗಳು ಕಲ್ಯಾಣ ಮಂಡಳಿಯ ಪಟ್ಟಿಯಲ್ಲಿವೆ. ಆದರೆ ಜಾರಿಯಲ್ಲಿಲ್ಲ. ರಾಜ್ಯದಲ್ಲಿ ಯಾರೊಬ್ಬರಿಗೂ ಅಥವಾ ನಮ್ಮ ಸಂಘಟನೆಯಡಿ ನೋಂದಾಯಿತರಾದ ಯಾವೊಬ್ಬ ಫಲಾನುಭವಿಗೂ ಈ ಸೌಲಭ್ಯಗಳು ಸಿಕ್ಕಿಲ್ಲ. ಸದರಿ ಸವಲತ್ತುಗಳು ಫಲಾನುಭವಿಗಳಿಗೆ ಸಿಗುವಂತಾಗಲು ಅಗತ್ಯ ನಿಯಮಾವಳಿ ರೂಪಿಸಿ ಚಾಲನೆ ನೀಡಬೇಕೆಂದು ಒತ್ತಾಯಿಸುತ್ತೇವೆ.
13. ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವುದು ಹಾಗು ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸದೇ ಇರುವುದು ಈಗಾಗಲೇ ನಾವು ಆಕ್ಷೇಪಣೆ ವ್ಯಕ್ತಪಡಿಸಿದ್ದೇವೆ. ಈ ವಿಚಾರದಲ್ಲಿ ಈಗಾಗಲೇ ತನಿಖೆಗೂ ಒತ್ತಾಯಿಸಿದ್ದೇವೆ. ಆದರೂ ಮಂಡಳಿ ನಿರಂತರವಾಗಿ ಖರೀದಿಗಳನ್ನು ಮುಂದುವರೆಸುತ್ತಲೇ ಇದೆ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ೨೦೨೧ ಮಾರ್ಚ್ ನಲ್ಲಿ ನೀಡಿರುವ ಸ್ಪಷ್ಟ ನಿರ್ದೇಶನದಂತೆ ಯಾವುದೇ ಕಾರಣಕ್ಕೂ ಫಲಾನುಭವಿಗಳಿಗೆ ನೇರ ಹಣ ಮಾಡಬೇಕು. ವಸ್ತುಗಳ ರೂಪದಲ್ಲಿ ಪರಿಹಾರ ಸಾಮಾಗ್ರಿ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇವೆ.




