ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ 35ಕ್ಕೂ ಹೆಚ್ಚು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಕೇವಲ 15 ದಿನಗಳಲ್ಲಿ ಆರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಸಾರಿಗೆ ನೌಕರರ ಸಾಲುಸಾಲು ಆತ್ಮಹತ್ಯೆಗೆ ಸಂಬಂಧಿಸಿ ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಪ್ರತಿಭಟನೆಗೆ ಮುನ್ನ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಪೃಥ್ವಿ ರೆಡ್ಡಿ, ಅಸಮರ್ಥ ಸಾರಿಗೆ ಸಚಿವ ಶ್ರೀರಾಮುಲುರವನ್ನು ಸಚಿವ ಸಂಪುಟದಿಂದ ಕೈಬಿಟ್ಟು ಯೋಗ್ಯರಿಗೆ ಸಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 35ಕ್ಕೂ ಹೆಚ್ಚು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಕೇವಲ 15 ದಿನಗಳಲ್ಲಿ ಆರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಸಾಲುಸಾಲು ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಚಿವರು ಹಾಗೂ ಅಧಿಕಾರಿಗಳು ಮೃತ ನೌಕರರ ಶವ ನೋಡಲು ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಕೂಡ ತೆರಳದಿರುವುದು ನಿಜಕ್ಕೂ ಅಮಾನವೀಯ ಎಂದರು.
ಆತ್ಮಹತ್ಯೆಗಳನ್ನು ಖಂಡಿಸಿ ಆಪ್ ಪ್ರತಿಭಟನೆ ನಂತರ ಸರ್ಕಾರ ಡಿಪೋ ಮ್ಯಾನೇಜರ್ ಒಬ್ಬರನ್ನು ಅಮಾನತು ಮಾಡಿ ಸುಮ್ಮನಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಕೂಡ ಸಾರಿಗೆ ಸಚಿವರಿಗೆ ಸಾಧ್ಯವಾಗದಿರುವುದು ದುರಂತ ಎಂದರು.
ಜನಸೇವೆಯಲ್ಲಿ ಸಾರಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. ಅವರಿಂದಾಗಿಯೇ ಇಂದು ಜನಸಾಮಾನ್ಯರಿಗೆ ಪ್ರಯಾಣ ಸಾಧ್ಯವಾಗುತ್ತಿದೆ. ಆದರೆ ಸರ್ಕಾರ ಅವರನ್ನು ಶತ್ರುಗಳಂತೆ ನೋಡುತ್ತಿದೆ. ಸಾರಿಗೆ ನೌಕರರಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿಕೊಂಡು ಆಪ್ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಶೀಘ್ರ ಶ್ರೀರಾಮುಲುರವನ್ನು ಸಂಪುಟದಿಂದ ವಜಾ ಮಾಡಿ, ಸಂತ್ರಸ್ತ ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ನೀಡಿ, ಸಾರಿಗೆ ನೌಕರರ ಹಿತ ಕಾಪಾಡುವಂತಹ ಸಾರಿಗೆ ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಆಪ್ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನೌಕರರ ಪೈಕಿ ಅನೇಕರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸಾವಿಗೆ ಇಲಾಖೆಯಲ್ಲಿನ ಕಿರುಕುಳವೇ ಕಾರಣವೆಂದು ಅದರಲ್ಲಿ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಸಚಿವರು ಹಾಗೂ ಉನ್ನತ ಅಧಿಕಾರಿಗಳ ಅಕ್ರಮಗಳಿಂದಾಗಿ ಪ್ರಾಮಾಣಿಕ ನೌಕರರು ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ ಎಂದರು.
2020 ಹಾಗೂ 2021ರಲ್ಲಿ ಕೋವಿಡ್ನಿಂದಾಗಿ 110ಕ್ಕೂ ಹೆಚ್ಚು ಸಾರಿಗೆ ನೌಕರರು ಬಲಿಯಾಗಿದ್ದಾರೆ. ಇವರ ಕುಟುಂಬಗಳಿಗೆ 30 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತಾದರೂ ಈವರೆಗೆ ಕೇವಲ ಏಳು ಕುಟುಂಬಗಳಿಗೆ ಮಾತ್ರ ಪರಿಹಾರ ದೊರೆತಿದೆ. ಸಾರಿಗೆ ಸಚಿವ ಶ್ರೀರಾಮುಲು ಕೋವಿಡ್ ಪರಿಹಾರ ದೊರಕಿಸಿಕೊಡುವುದರಲ್ಲೂ ವಿಫಲರಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.
ಆಪ್ ಮುಖಂಡರಾದ ವಿಜಯ್ ಶರ್ಮ, ಸಂಚಿತ್ ಸವ್ಹಾನಿ, ಬಿ.ಟಿ.ನಾಗಣ್ಣ, ಜಗದೀಶ್ ವಿ ಸದಂ, ದರ್ಶನ್ ಜೈನ್, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ಚನ್ನಪ್ಪ ಗೌಡ ನೆಲ್ಲೂರು, ಕುಶಲಸ್ವಾಮಿ, ಉಷಾ ಮೋಹನ್ ಮತ್ತಿತರ ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.



