ಬೆಂಗಳೂರು: ಕೇಂದ್ರ ಸರಕಾರ ರಾಜ್ಯದಲ್ಲಿ ಕನ್ನಡ ಧಿಕ್ಕರಿಸಿ ಹಿಂದಿ ದಿವಸ ಆಚರಿಸುತ್ತಿರುವುದು, ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಬೆಂಬಲಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಿಂದಿ ದಿವಸ್ ಆಚರಣೆ ವಿರೋಧಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಕನ್ನಡ ಶಾಲು ಹಾಗೂ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ನಂತರ ಮಾತಾಡಿದ ಅವರು, ಕೇಂದ್ರ ಸರಕಾರಕ್ಕೆ ಭಾಷಾ ಸಹಿಷ್ಣುತೆ ಇಲ್ಲ. ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ಪದೇಪದೆ ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಪ್ರಾದೇಶಿಕ ಭಾಷೆಗಳನ್ನು, ಮುಖ್ಯವಾಗಿ ಕನ್ನಡವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಹಿಂದಿ ಆಚರಣೆ ಮಾಡುತ್ತಿರುವುದಕ್ಕೆ ನಮ್ಮ ಪಕ್ಷ ಜಾತ್ಯತೀತ ಜನತಾದಳದ ವಿರೋಧ ಇದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ದೇಶದಲ್ಲಿ ನಾನಾ ಭಾಷೆ ಮಾತಾಡುವ ನಾಗರೀಕರು ಇದ್ದಾರೆ. ಈಗಾಗಲೇ ಅಮೃತ ಮಹೋತ್ಸವ ಮಾಡಿದ್ದೇವೆ. ಅದರೂ ಕೇಂದ್ರ ಬಿಜೆಪಿ ಸರ್ಕಾರ ಕೇವಲ ಒಂದು ಭಾಷೆಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಿದೆ ಎಂದರು.
ಒಂದು ಭಾಷೆ ಒಂದು ರಾಷ್ಟ್ರ ಎಂಬ ಗೃಹ ಸಚಿವರ ಹೇಳಿಕೆ ಸರಿಯಲ್ಲ. ಕೇವಲ ಹಿಂದಿ ಒಂದು ಭಾಷೆಯಿಂದ ಭಾರತ ಒಂದಾಗಿ ಉಳಿದಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ. ಅದನ್ನೇ ಹಾಳು ಮಾಡಿದರೆ ದೇಶವನ್ನು ಒಡೆದಂತೆ. ಅವರು ಭಾವನಾತ್ಮಕ ವಿಚಾರ ಕೆಣಕುತ್ತಾ ದೇಶ ವಿಭಜಿಸುತ್ತಿದ್ದಾರೆ ಎಂದರು.
ಉತ್ತರ ಭಾರತದ ಕೆಲವು ಭಾಗದಲ್ಲಿ ಹಿಂದಿ ಇಲ್ಲ. ಅನೇಕ ರಾಜ್ಯಗಳಲ್ಲಿ ಅವರವರದೇ ಭಾಷೆ ಇದೆ. ತಮ್ಮ ಭಾಷೆಯನ್ನೇ ಮಾತನಾಡುತ್ತಾ ನೆಮ್ಮದಿಯಿಂದ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಸುಕುವ ಕೇಂದ್ರದ ನಡೆಗೆ ನಮ್ಮ ವಿರೋಧ ಇದೆ. ಕನ್ನಡದ ಬಗ್ಗೆ ಯಾಕಿಷ್ಟು ಅಸಹನೆ ಇವರಿಗೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದರು.
ಹಿಂದಿ ದಿವಸದ ಹೆಸರಿನಲ್ಲಿ ಕನ್ನಡಿಗರ ತೆರಿಗೆ ಹಣ ವ್ಯಯ ಮಾಡೋದು ಎಷ್ಟು ಸರಿ? ಜನ ಈಗಾಗಲೇ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಅವರ ನೆರವಿಗೆ ಭಾರದೆ ಹಿಂದಿ ಭಾಷೆಯ ವಿಚಾರ ಸರಕಾರಕ್ಕೆ ಮುಖ್ಯವಾಗಿದೆ. ಇದಕ್ಕೆ ಕನ್ನಡಿಗರ ಧಿಕ್ಕಾರವಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜೆಡಿಎಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ್, ಟಿ.ಎ.ಶರವಣ ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಇದ್ದರು.




