ಬೆಂಗಳೂರು : ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ರೈತರ ಆರ್ಥಿಕಾಭಿವೃದ್ಧಿಗೆ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ವರದಿಯಾಗಿದೆ.
ಕಳೆದ ಶುಕ್ರವಾರ ನಗರದ ಖಾಸಗಿ ಹೊಟೇಲ್ನಲ್ಲಿ ಜರುಗಿದ ಕೆಎಂಎಫ್ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ ಒಲುವು ತೋರಿವೆ ಎಂದು ಹೇಳಲಾಗಿದೆ.
ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿಂದ ರಾಜ್ಯದ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ಗೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದನೆ ನೀಡಿದ್ದರಿಂದ ಕೊನೆಗೂ ರೈತರ ಅನುಕೂಲಕ್ಕೋಸ್ಕರ ದರ ಹೆಚ್ಚಳಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಕೆಎಂಎಫ್ ಹೊರತುಪಡಿಸಿ ಉಳಿದೆಲ್ಲ ಬೇರೆ ಖಾಸಗಿ ಬ್ರಾಂಡ್ಗಳು ಹಾಲಿನ ದರದಲ್ಲಿ ಏರಿಕೆಯಾಗಿದೆ. ಕೆಎಂಎಫ್ ಮಾತ್ರ ಪ್ರತಿ ಲೀಟರ್ ಹಾಲಿಗೆ 37 ರೂ.ಗಳನ್ನು ನೀಡುತ್ತಿದೆ. ಬೇರೆ-ಬೇರೆ ಬ್ರಾಂಡ್ಗಳಿಗೆ ಹೋಲಿಕೆ ಮಾಡಿದರೆ 8 ರಿಂದ 10 ರೂ.ಗಳು ವ್ಯತ್ಯಾಸವಿದೆ ಎನ್ನಲಾಗಿದೆ.
ರೈತರ ಹಿತಕ್ಕಾಗಿ ನಂದಿನಿ ಹಾಲಿನ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಿರುವ ಕೆಎಂಎಫ್, 3 ರೂ. ಹೆಚ್ಚಳ ಮಾಡಲು ಮುಂದಾಗಿದ್ದು ಏರಿಕೆ ಮಾಡಲಿರುವ ದರವನ್ನು ರೈತರಿಗೆ ನೀಡಲು ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.
ವಿಪರೀತ ಮಳೆ ಹಿನ್ನೆಲೆಯಲ್ಲಿ ರೈತರ ಬೆಳೆಗಳು ಹಾನಿಯಾಗಿವೆ. ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ನಂದಿನಿ ಬೆಲೆ ಏರಿಕೆ ವರದಾನವಾಗಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತೇಜಿಸಲು ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಲಿನ ದರದಲ್ಲಿ ಏರಿಕೆ ಮಾಡುವ ಸಾಧ್ಯತೆಗಳು ಇವೆ ಎಂದು ಕೆಎಂಎಫ್ ಮೂಲಗಳಿಂದ ತಿಳಿದುಬಂದಿದೆ.



