ಬೆಂಗಳೂರು: ಉದ್ಯೋಗಾಕಾಂಕ್ಷಿಗಳ ಕನಸುಗಳನ್ನು ಪದೇ ಪದೆ ಚಿವುಟುತ್ತಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಯುವ ಜನತೆಯ ಮೇಲೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿಕ್ಷಕರ ನೇಮಕ ಸಂದರ್ಭದಲ್ಲಿ ಸರ್ಕಾರ ತಾನು ರೂಪಿಸಿರುವ ನಿಯಮಾವಳಿಗಳನ್ನೇ ಗಾಳಿಗೆ ತೂರಿ, ಸಾರ್ವಜನಿಕವಾಗಿ ಅರ್ಜಿಗಳನ್ನು ಕರೆಯದೆ ನೇಮಕ ಮಾಡಿರುವ ಹಗರಣದ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, PSI ಹಗರಣ, KPSC ಹಗರಣ, ಸಹಾಯಕ ಪ್ರಾಧ್ಯಾಪಕರ ಹಗರಣಗಳ ಸರಮಾಲೆಯಲ್ಲಿ ಗ್ರೇಡ್ 2 ಸಹ ಶಿಕ್ಷಕರ ನೇಮಕಾತಿ ಹಗರಣವು ಮುನ್ನೆಲೆಗೆ ಬಂದಿರುವುದು ಭವಿಷ್ಯದ ಬಗ್ಗೆ ಇನ್ನಷ್ಟು ಆತಂಕಗಳನ್ನು ಹೆಚ್ಚಿಸಿದೆ ಎಂದಿದ್ದಾರೆ.
ಹಗರಣಗಳನ್ನು ಬಿಟ್ಟರೆ ಬಿಜೆಪಿಯ 3 ವರ್ಷಗಳ ಸಾಧನೆ ಏನಿದೆ? ಸರ್ಕಾರಿ ನೌಕರಿಗಳ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ ರಾಜ್ಯ ಸರ್ಕಾರ. ಆತ್ಮಹತ್ಯೆಗಳ ಪ್ರಮಾಣ ಹೆಚ್ಚಿರುವ 5 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಯುವಕರ ಆತ್ಮಹತ್ಯೆಗೆ ನಿರುದ್ಯೋಗವೂ ಒಂದು ಕಾರಣ ಎಂದು ವರದಿ ಹೇಳುತ್ತಿದೆ. ಇದರ ಗಂಭೀರತೆ BJP ಸರ್ಕಾರಕ್ಕೆ ಅರ್ಥವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಕೂಡಲೇ ಶಿಕ್ಷಕರ ಅಕ್ರಮ ನೇಮಕ ಹಗರಣದಲ್ಲಿ ಭಾಗಿಯಾದವರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹಗರಣದ ಹಿಂದಿರುವ ಕಾಣದ ಕೈಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ನ್ಯಾಯ ಸಿಗಲೇ ಬೇಕಿದೆ. ಇದಕ್ಕಾಗಿ ಯುವ ಧ್ವನಿ ಮೊಳಗಬೇಕು ಎಂದು ಕರೆನೀಡಿದ್ದಾರೆ.



