ಧಾರವಾಡ: ಲೋಕಾಯುಕ್ತಕ್ಕೆ ಸೂಕ್ತ ಸಿಬ್ಬಂದಿಯನ್ನು ನೀಡಬೇಕು. ಸೂಕ್ತ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ನಾನು ಸಲಾಂ ಹೇಳುವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಎಸಿಬಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದು, ಈ ವಿಷಯ ಈಗ ಎಲ್ಲ ಮಾಧ್ಯಮಗಳಲ್ಲಿ ಬಂದಿದೆ. ಎಸಿಬಿ ರದ್ದು ಆಗಿರುವುದರಿಂದ, ಈಗ ಲೋಕಾಯುಕ್ತಕ್ಕೆ ಮಾತ್ರ ಭಷ್ಟಾಚಾರ ವಿರುದ್ಧ ತನಿಖೆ ನಡೆಸುವ ಅಧಿಕಾರ ಸಿಕ್ಕಿದೆ. ಹಾಗಾಗಿ ಸರ್ಕಾರ ಈಗ ಲೊಕಾಯುಕ್ತಕ್ಕೆ ಸೂಕ್ತ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೀಡುವುದರ ಜೊತೆಗೆ ಕೆಲವು ಲೋಕಾಯುಕ್ತ ಕಾಯಿದೆಗಳಿಗೆ ತಿದ್ದುಪಡಿಯಾಗಬೇಕಾಗಿದೆ. ಅದರ ಕುರಿತು ಕೂಡಾ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ನಾನು ಪುನಃ ಲೋಕಾಯುಕ್ತಕ್ಕೆ ಬರೋದಿಲ್ಲ. ನನ್ನ ಕರ್ತವ್ಯ ನಾನು ಐದು ವರ್ಷ ಮಾಡಿದ್ದೇನೆ. ನನಗೆ ಈಗ 83 ವರ್ಷ ವಯಸ್ಸಾಯಿತು. ಹೀಗಾಗಿ ನನಗೆ ಈಗ ಯಾವುದೇ ಅಧಿಕಾರ ಬೇಡ. ಯಾವ ಹುದ್ದೆ, ಅಧಿಕಾರಕ್ಕೆ ನಾನು ಈಗ ಕಾಯೋದಿಲ್ಲ. ಲೋಕಾಯುಕ್ತ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುವೆ. ಆದರೆ ಅವರು ಕೇಳೋದಿಲ್ಲ, ಕೇಳಿದರೆ ಸಲಹೆ ನೀಡುತ್ತೇನೆ ಎಂದರು.
1983ರಲ್ಲಿ ಜನತಾ ಪಕ್ಷ ಲೋಕಾಯುಕ್ತವನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಅಂದು ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆ ಕಟ್ಟಿದ್ದರು. ಆದರೆ ಮೊದಲಿನ ಹತ್ತು ವರ್ಷ ಏನೂ ನಡೆದಿರಲಿಲ್ಲ. ಎನ್. ವೆಂಕಟಾಚಲಯ್ಯ ಲೋಕಾಯುಕ್ತದ ಶಕ್ತಿಯನ್ನು ತೋರಿಸಿದ್ದರು. ಆ ಬಳಿಕ ನಾನು ಅವರ ಕೆಲಸ ಮುಂದುವರೆಸಿಕೊಂಡು ಹೋಗಿದ್ದೆ. ಹೀಗಾಗಿ ಲೋಕಾಯುಕ್ತ ಅಧಿಕಾರ ಕಿತ್ತುಕೊಂಡು ದುರ್ಬಲಗೊಳಿಸಲು ಪ್ರಯತ್ನ ಮಾಡಿದರು. ಯಾಕಂದ್ರೆ ಮುಚ್ಚುವ ಧೈರ್ಯ ಸರ್ಕಾರಕ್ಕೆ ಇರಲಿಲ್ಲ. ಹೀಗಾಗಿ ದುರ್ಬಲಗೊಳಿಸುವ ಯತ್ನ ಮಾಡಿದರು ಎಂದರು.
ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಹಳ ಹಿಂದೆಯೇ ನಾನು ಈ ಬಗ್ಗೆ ಎರಡು ವರದಿ ಕೊಟ್ಟಿದ್ದೇನೆ. ಎನ್ ಜಿ ಟಿ ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೆ ಎಂದರು.
ಮಹಾರಾಜರು ಹಿಂದೆ ನೂರಾರು ಕೆರೆ ಕಟ್ಟಿಸಿದ್ದರು. ಇವು ಮಳೆ ನೀರನ್ನು ಸಂಗ್ರಹಿಸುವ ಕೆರೆಗಳಾಗಿದ್ದವು. ಅಂದು ಸುಮಾರು 200 ಕೆರೆಗಳಿದ್ದವು, ಮಳೆ ಬಂದಾಗ ನೀರು ಕೆರೆಗಳಿಗೆ ಸರಾಗವಾಗಿ ಹೋಗುತಿತ್ತು. ಭಾಷಾವಾರು ಪ್ರಾಂತ್ಯ ಆದಾಗ ಬೆಂಗಳೂರನ್ನು ರಾಜಧಾನಿ ಮಾಡಲಾಯಿತು. ಆಗ ಇಲ್ಲಿ ದಿಢೀರಾಗಿ ಜನಸಂಖ್ಯೆ ಹೆಚ್ಚಾಯಿತು. ಆಗ ಸರ್ಕಾರ ಮುಂದಾಲೋಚನೆ ಮಾಡಿ ಜಾಗ ಕೊಡುವುದನ್ನು ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಬಿಟ್ಟಿತು. ಅದೇ ಈಗ ಬೆಂಗಳೂರಿನಲ್ಲಿ ನೀರು ತುಂಬಿಕೊಳ್ಳುವಂತೆ ಮಾಡಿದೆ ಎಂದರು.
ಬೆಂಗಳೂರಿನ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗ ಮಳೆ ಬಂದರೆ ನೀರು ಹೋಗಲು ಜಾಗ ಇಲ್ಲ. ಕೆಲವರು ತಮ್ಮ ಲಾಭಕ್ಕಾಗಿ ಒತ್ತುವರಿ ಮಾಡಿದ್ದು, ಈಗಿನ ಸುಭಾಷನಗರ ಬಸ್ ನಿಲ್ದಾಣ ಹಿಂದೆ ಕೆರೆಯಾಗಿತ್ತು. ಸಂಪಂಗಿರಾಮನಗರದಲ್ಲಿ ಕೆರೆಯನ್ನು ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ ಮಾಡಿದ್ದಾರೆ. ಎಲ್ಲ ಕೆರೆಗಳು ಬಿಡಿಎ ಮುಖಾಂತರ ಲಾಭಕ್ಕೆ ಬಳಕೆಯಾಗಿದೆ ಎಂದರು.



