ನಿನ್ನೆ ಕಿರಿಯ ಗೆಳೆಯರೊಬ್ಬರ ಎಫ್ಬಿ ಪೋಸ್ಟ್ ನೋಡಿದ ಮೇಲೆ ಈ ಕೆಲವು ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಅನಿಸಿತು.
ನನ್ನ ಕಿರಿಯ ಹಾಗೂ ಮುಂದಿನ ಕನ್ನಡ ಚಿತ್ರರಂಗದ ಭರವಸೆಯ ಭಾವೀ ನಿರ್ದೇಶಕರೇ,
ಒಂದು ನೆನಪಿಟ್ಕೊಳ್ಳಿ, “Cinema is above this Social Media”
ಇಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಬರೆದುಕೊಳ್ಳುವ ಅವಕಾಶ ಇದೆ. ಆದರೆ ಇಲ್ಲಿ ಬರೆಯುವವರೆಲ್ಲರೂ ಪ್ರಕಾಂಡ ಪಂಡಿತರಲ್ಲಾ, ಹಾಗಂತ ತೆಗೆದು ಹಾಕುವಂತ ದಡ್ಡರೂ ಅಲ್ಲಾ, ಅವರವರ ಬುದ್ಧಿಮತ್ತೆಯ ಮಿತಿಗಳಲ್ಲಿ ಅವರಗನಿಸಿದ್ದನ್ನು ಬರೆದುಕೊಳ್ತಾರೆ ಅದನ್ನೇ ನಿಮ್ಮ ಸಿನೆಮಾ, ಬರೆವಣಿಗೆಯ ಅಳತೆಗೋಲಿನಂತೆ ಪರಿಗಣಿಸುವುದರಲ್ಲಿ ಅರ್ಥವಿಲ್ಲಾ.
ಮುಖ್ಯವಾಗಿ ನಮಗೆ ಅವರ ಜಾತಿ, ಕಷ್ಟ, ಅವಮಾನಗಳ ಬಗ್ಗೆ ಹೇಗೆ ಪರಿಪೂರ್ಣ ಮಾಹಿತಿ ಇರುವುದಿಲ್ಲವೋ ಹಾಗೇ ಅವರಿಗೆ ಸಿನೆಮಾ ಜಗತ್ತಿನ ಬಗ್ಗೆ ಪೂರ್ಣ ಅನುಭವ ಇರುವುದಿಲ್ಲಾ. ಸಿನೆಮಾ ಗ್ರಹಿಕೆಯ ವಿಷಯದಲ್ಲೂ ಇದು ಅವರಿಗೆ ಅನ್ವಯ. ಎಲ್ಲಾ ಸಿನೆಮಾಗಳೂ ಪೂರ್ತಿಯಾಗಿ ಅವರಿಗೆ ದಕ್ಕುವುದಿಲ್ಲಾ. ನಾವು ಅವರ ಬದುಕು ಬರವಣಿಗೆಯನ್ನು ಹೇಗೆ ನಮ್ಮ ಮೂಗಿನ ನೇರಕ್ಕೆ ನೋಡ್ತೀವೋ ಅವರು ಸಿನೆಮಾ ನೋಡೋದು ಅವರವರ ಮೂಗಿನ ನೇರಕ್ಕೆ. ಅದರಾಚೆ ನಮ್ಮಷ್ಟೇ ಅವರೂ ದಡ್ಡರು. ಎಲ್ಲರೂ ಅವರಿಗವರೇ ಸರ್ವಜ್ಞರಂತೆ ಆಡ್ತಿರ್ತಾರೆ ಅಷ್ಟೇ. ಅದಕ್ಕೆಲ್ಲಾ ತಲೆ ಕೆಡಿಸ್ಕೊಳ್ಬೇಡಿ.
ಉದಾಹರಣೆಗೆ ಹೇಳೋದಾದ್ರೆ, ನನ್ನ ಮೊದಲ ಸಿನೆಮಾ ಬಗ್ಗೆ ಕೆಲವರು ಎಷ್ಟು ಹಾಸ್ಯಾಸ್ಪದವಾಗಿ ಮಾತಾನಾಡಿದ್ದಾರೆ ಎಂದು ನನಗೆ ಗೊತ್ತು. ಒಬ್ರು ಹಿರಿಯರು ನನಗೇ ಹೇಳಿದ್ರು ನಿಂದು ಕಳಪೆ ಸಿನೆಮಾ ಕಣೋ ಅಂತ. ಇನ್ನೊಬ್ರು ಎಫ್ಬಿ ಕ್ರಾಂತಿಕಾರಿ ‘Not worth’ ಸಿನೆಮಾ ಅಂತ ಬರೆದಿದ್ದರು. ಅವರ ಅಭಿಪ್ರಾಯ ಅವರದು. ಸ್ವಲ್ಪ ಕಾಲ ಇಂತಹ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ, ಆದರೆ ಇವರ ಆಚೆಗೂ ಸಿನೆಮಾಗೆ ತನ್ನ ವ್ಯಾಪ್ತಿ ಇದೆ ಎಂದು ಗೊತ್ತಾದದ್ದು ಹರಿವು ಸಿನೆಮಾ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರದರ್ಶನ ಆದಾಗ. ಅಲ್ಲಿನ ಪ್ರೇಕ್ಷಕರನ್ನು ಮುಖಾಮುಖಿ ಆದಾಗ. ಯಾವುದೇ ಸಿದ್ಧಾಂತದ ‘hangover’ ಇಲ್ಲದ ಅಪ್ಪಟ ಪ್ರೇಕ್ಷಕರನ್ನು ಎದುರುಗೊಂಡಾಗ ಅರ್ಥವಾಗಿದ್ದು ಈ social media ಗೂ ಆಚೆ ನಮ್ಮ ಸಿನೆಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ಇದ್ದಾರೆ ಎಂದು.
ಇದೇ ಎಫ್ಬಿಯಲ್ಲಿ ನನ್ನ ಆಪ್ತ ಗೆಳೆಯರ ಬಳಗದಲ್ಲೇ ನನ್ನ ಸಿನೆಮಾಗಳ ಬಗ್ಗೆ ತಾತ್ಸಾರ ಕುಹುಕವಾಡುವ ದೊಡ್ಡ ಪಡೆಯೇ ಇದೆ. ಆದರೆ ಅದ್ಯಾವುದೂ ನನ್ನ ಸಿನೆಮಾ ಜರ್ನಿಯನ್ನು ತಡೆಯಲು ಆಗುವುದಿಲ್ಲಾ ಎಂದು ನನಗೇ ಮನವರಿಕೆಯಾಗಿದೆ. ಕೈಯಲ್ಲಿ ಕಾಸೇ ಇಲ್ಲದೇ ಸಿನೆಮಾ ನಿರ್ದೇಶನಕ್ಕೆ ಮುಂದಾದವನು ನಾನು. ಇನ್ನು ಕಳೆದುಕೊಳ್ಳುವುದು ಏನಿದೆ?
ಹಾಗಂತ ಎಲ್ಲರನ್ನೂ ಇದೇ POV ಅಲ್ಲಿ ನೋಡುವುದೂ ತಪ್ಪು. ನಮ್ಮ ಸುತ್ತಮುತ್ತಲು ನಮ್ಮನ್ನು ಎಚ್ಚರಿಸುವವರು ಇರ್ತಾರೆ. ಅವರು ಯಾರೆಂದು ಗುರುತಿಸುವ ಪ್ರಬುದ್ಧತೆ ನಿಮಗೆ ನೀವೇ ಬೆಳೆಸಿಕೊಳ್ಳಿ. ಅವರೇ ನಿಜವಾಗಿಯೂ ನಿಮ್ಮನ್ನು ಕಾಯುವವರು. ಅವರು ಎಫ್ಬಿಯಲ್ಲೇ ಇರಬೇಕು ಅಂತೇನಿಲ್ಲಾ. ಆದರೆ ಅಂತಹವರಿಂದಲೇ ನಿಮ್ಮ ಸೃಜನಶೀಲತೆಯ ಕೃತಿಗಳಲ್ಲಿ ಹೊಸತನ್ನು ಹುಟ್ಟುಹಾಕಲು ಸಾಧ್ಯವಾಗುವುದು. ಅವರೇ ಪ್ರೇರೇಪಿಸುವವರು, ತಿದ್ದುವವರು, over all ಆಗಿ ನಿಮ್ಮನ್ನು ಬೆಳೆಸುವವರು. ಅವರ ಸಂಖ್ಯೆ ಮೂರು-ನಾಲ್ಕರಲ್ಲೇ ಇರುತ್ತದೆ.
ಹಾಗಾಗಿ
ಸ್ಟಾರಿಸಂ, ಕಾರ್ಪೋರೇಟೀಕರಣ, ಮೋನೊಪೊಲಿ, ಜಾತಿ ರಾಜಕಾರಣವನ್ನು ಅತ್ಯುಗ್ರವಾಗಿ ಟೀಕಿಸುವವರೇ, ಇದೇ ಮೇಲಿನ ಅಂಶಗಳನ್ನು ಒಳಗೊಂಡ ನಿರ್ದೇಶಕರ ಸಿನೆಮಾಗಳನ್ನು ಸಂಭ್ರಮಿಸುವುದು ಕಣ್ಮುಂದೆ ಇರುವಾಗ, ಟೀಕೆ ಟಿಪ್ಪಣಿಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲಾ.
ಎಷ್ಟಾದರೂ ನಮಗೆ ಬೆಳಗೆ ತಿಂಡಿಗೆ ಇಡ್ಲಿ ವಡೆ ರೈಸ್ ಬಾತ್ ಸಿಕ್ಕರೆ ಅದೇ ಮೃಷ್ಟಾನ್ನ, ಬೆಳಗ್ಗೆ ಫಸ್ಟ್ ಶಾಟ್ ಅಂದುಕೊಂಡ ಟೈಮಿಗೆ ಎಲ್ಲರೂ ಅಸೆಂಬಲ್ ಆಗಿ, ಮೇಕಪ್-ಕಾಸ್ಟ್ಯೂಮ್ ಹಾಕ್ಕಬಂದು, ಡೈಲಾಗ್ ರೆಡಿಯಾಗಿ, ಆರ್ಟಿಸ್ಟ್ ಬಂದು, ಸಿಂಗಲ್ ಟೇಕ್ ಅಲ್ಲಿ ಶಾಟ್ ಓಕೆ ಆದರೆ ಅದೇ ಸ್ವರ್ಗ ಅಲ್ವಾ. ಅದಕ್ಕಿಂತ ಇನ್ನೇನು ಬೇಕು. ಎಂಜಾಯ್.
– ಮಂಸೋರೆ, ನಿರ್ದೇಶಕ



