ಕೆರೆ ಒತ್ತುವರಿದಾರರಿಗೆ ಬಿಗ್ ಶಾಕ್

1 day ago

11,671 ಎಕರೆ ಕೆರೆ ಜಾಗ ತೆರವಿಗೆ ‘ವಿಶೇಷ ಕಾರ್ಯಪಡೆ’ ರಚನೆಗೆ ಸಚಿವ ಈಶ್ವರ ಖಂಡ್ರೆ ಘೋಷಣೆ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸ್ವಾಧೀನ ಮತ್ತು ನಿರ್ವಹಣೆಯಲ್ಲಿರುವ 4,828 ಕೆರೆಗಳ ಬರೋಬ್ಬರಿ 11,671 ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇದಕ್ಕಾಗಿ ‘ವಿಶೇಷ ಕಾರ್ಯಪಡೆ’ (Special Task Force) ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಘೋಷಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ’ಯ ₹16,000 ಕೋಟಿ ವೆಚ್ಚದ ಕಾಮಗಾರಿಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೆರೆಗಳ ಸಂರಕ್ಷಣೆ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.

ರಾಜ್ಯದ ಗ್ರಾಮೀಣ ಕೆರೆಗಳ ಒತ್ತುವರಿ ಲೆಕ್ಕಾಚಾರ ಏನು?
ಸಚಿವರು ನೀಡಿದ ಅಂಕಿಅಂಶಗಳ ಪ್ರಕಾರ ರಾಜ್ಯದ ಗ್ರಾಮೀಣ ಕೆರೆಗಳ ಸ್ಥಿತಿಗತಿ ಹೀಗಿದೆ:

ಒಟ್ಟು ಕೆರೆಗಳು: ರಾಜ್ಯದ 5,927 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 32,504 ಕೆರೆಗಳಿವೆ.

ಒತ್ತುವರಿಯಾಗಿದ್ದ ಜಾಗ: ಈ ಪೈಕಿ 11,498 ಕೆರೆಗಳ ಒಟ್ಟು 26,873 ಎಕರೆ ಪ್ರದೇಶ ಒತ್ತುವರಿಯಾಗಿತ್ತು.

ತೆರವುಗೊಂಡ ಜಾಗ: ಈಗಾಗಲೇ 6,670 ಕೆರೆಗಳ 15,201 ಎಕರೆ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.

ಬಾಕಿ ಇರುವ ಒತ್ತುವರಿ: ಇನ್ನೂ 4,828 ಕೆರೆಗಳ 11,671 ಎಕರೆ ಒತ್ತುವರಿ ತೆರವು ಕಾರ್ಯ ಬಾಕಿ ಇದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಲು ವಿಶೇಷ ಕಾರ್ಯಪಡೆ ರಚಿಸಲಾಗುತ್ತಿದೆ.

ಅಂತರ್ಜಲ ಹೆಚ್ಚಳಕ್ಕೆ ಕೆರೆಗಳ ಪುನಶ್ಚೇತನ ಅಗತ್ಯ:
“ಗ್ರಾಮೀಣ ಕೆರೆಗಳ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆದು, ರಾಜಕಾಲುವೆ ಹಾಗೂ ಮಳೆ ನೀರು ಕಾಲುವೆಗಳ ಅಡೆತಡೆಗಳನ್ನು ನಿವಾರಿಸಿದರೆ ಮಳೆಗಾಲದಲ್ಲಿ ಕೆರೆಗಳು ಸಂಪೂರ್ಣವಾಗಿ ತುಂಬುತ್ತವೆ. ಇದರಿಂದ ಅಂತರ್ಜಲ ಮಟ್ಟವೂ ಗಣನೀಯವಾಗಿ ಹೆಚ್ಚಳವಾಗಲಿದೆ. ಕೆರೆಗಳ ಒತ್ತುವರಿ ತೆರವಿಗೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸಿ ಶ್ರಮಿಸಬೇಕು” ಎಂದು ಸಚಿವರು ಮನವಿ ಮಾಡಿದರು.

15 ತಿಂಗಳಲ್ಲಿ 15,000 ಕಿ.ಮೀ. ರಸ್ತೆ ಲೋಕಾರ್ಪಣೆಗೆ ಡೆಡ್‌ಲೈನ್: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವೇಗ ನೀಡಿರುವ ಸರ್ಕಾರ, ಈಗಾಗಲೇ 15,000 ಕಿ.ಮೀ. ರಸ್ತೆ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಸಚಿವರು, “ಜಿಲ್ಲಾ ಪಂಚಾಯಿತಿ ಸಿಇಓಗಳು ಮತ್ತೆ ಸರ್ಕಾರದ ಅನುಮೋದನೆಗೆ ಕಡತಗಳನ್ನು ಕಳುಹಿಸುವ ಅಗತ್ಯವಿಲ್ಲ. ತಮ್ಮ ಹಂತದಲ್ಲೇ ವಿನ್ಯಾಸ ಮತ್ತು ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು. ಮುಂದಿನ 15 ತಿಂಗಳ ಅವಧಿಯೊಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮೀಣ ಕರ್ನಾಟಕಕ್ಕೆ ಲೋಕಾರ್ಪಣೆ ಮಾಡಬೇಕು” ಎಂದು ತಾಕೀತು ಮಾಡಿದರು.

Leave a Reply