ಕನ್ನಡ ಏಕೀಕರಣದ ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಪಿಂಜಾರ್ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಸ್ಥಾಪಿಸಿ

2 days ago

ಕನ್ನಡ ಏಕೀಕರಣದ ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಪಿಂಜಾರ್ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಸ್ಥಾಪಿಸಿ

ವಿಜಯಪುರ ವಿಮಾನ ನಿಲ್ದಾಣಕ್ಕೆ ಆದಿಲ್ ಶಾಹಿ ಹೆಸರು ನಾಮಕರಣ ಮಾಡಿ: ಅಫ್ಸರ್ ಕೊಡ್ಲಿಪೇಟೆ 

ವಿಜಯಪುರ: ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಕರ್ನಾಟಕದ ಬಹುತ್ವದ ಪರಂಪರೆಯನ್ನು ಗೌರವಿಸುವುದು ಕೇವಲ ಕನ್ನಡ ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಭಾಷೆ ನಮ್ಮ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಡಳಿತ, ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ದೊರೆಯಬೇಕು ಎಂದು ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದರು.

ವಿಜಯಪುರದಲ್ಲಿ ಆಯೋಜಿಸಲಾಗಿದ್ದ ‘ಒಲವಿನ ಕರ್ನಾಟಕ ಮತ್ತು ಟಿಪ್ಪು ಸುಲ್ತಾನ್ ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸವೆಂದರೆ ಕೇವಲ ರಾಜರು, ಅರಸರು ಮತ್ತು ಯುದ್ಧಗಳ ಇತಿಹಾಸವಲ್ಲ. ಈ ನಾಡಿನ ಏಕೀಕರಣ, ಅಭಿವೃದ್ಧಿ, ಭಾಷೆ, ಸಂಸ್ಕೃತಿ ಹಾಗೂ ಸ್ವಾಭಿಮಾನಕ್ಕಾಗಿ ವಿವಿಧ ಧರ್ಮ, ಜಾತಿ ಮತ್ತು ಸಮುದಾಯಗಳ ಜನರು ನೀಡಿದ ತ್ಯಾಗ ಮತ್ತು ಕೊಡುಗೆಗಳ ಇತಿಹಾಸವಾಗಿದೆ. ಇಂತಹ ಮಹನೀಯರನ್ನು ಜಾತಿ ಮತ್ತು ಧರ್ಮದ ಕನ್ನಡಕದಿಂದ ನೋಡದೆ ಅವರ ಐತಿಹಾಸಿಕ ಕೊಡುಗೆಗಳ ಆಧಾರದ ಮೇಲೆ ಗೌರವಿಸಬೇಕು ಎಂದರು.

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಕನ್ನಡ ನಾಡಿನ ಅಸ್ಮಿತೆಗಾಗಿ ಪ್ರಾಣವನ್ನೇ ಅರ್ಪಿಸಿದ ಪೈಲ್ವಾನ್ ರಂಜಾನ್ ಸಾಬ್ ಪಿಂಜಾರ್ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಸ್ಥಾಪಿಸಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆಗಾಗಿ ಸೇವೆ ಸಲ್ಲಿಸುವ ಸಾಧಕರಿಗೆ ಪ್ರತಿವರ್ಷ ಪ್ರಶಸ್ತಿ ಪ್ರದಾನ ಮಾಡಬೇಕು. ಅವರ ಜೀವನ ಚರಿತ್ರೆ ಮತ್ತು ಕನ್ನಡ ನಾಡಿಗಾಗಿ ಮಾಡಿದ ತ್ಯಾಗವನ್ನು ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದರು.

ಐತಿಹಾಸಿಕ ವಿಜಯಪುರ ನಗರ ಆದಿಲ್ ಶಾಹಿ ಅರಸರ ಆಡಳಿತ, ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಕ ವಿಶ್ವದ ಗಮನ ಸೆಳೆದಿದೆ. ಗೋಳಗುಮ್ಮಟ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳು ಈ ನಾಡಿನ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಇಂತಹ ಐತಿಹಾಸಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ‘ಆದಿಲ್ ಶಾಹಿ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು. ಇದು ಕೇವಲ ಹೆಸರಿನ ಬೇಡಿಕೆಯಲ್ಲ; ವಿಜಯಪುರದ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಗೆ ಸಲ್ಲಿಸುವ ಗೌರವವಾಗಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಕೊಡುಗೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವ ಬದಲು ಐತಿಹಾಸಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು. ಅವರು ಯುದ್ಧಭೂಮಿಯ ವೀರರಾಗಿದ್ದಷ್ಟೇ ಅಲ್ಲದೆ ಆಡಳಿತ, ಕೃಷಿ, ಕೈಗಾರಿಕೆ, ವ್ಯಾಪಾರ, ರೇಷ್ಮೆ ಉದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಕೊಡುಗೆ ನೀಡಿದ್ದಾರೆ ಎಂದರು.

ವಿಶೇಷವಾಗಿ ಮೈಸೂರು ರಾಕೆಟ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸೇನಾ ಬಳಕೆ, ರೇಷ್ಮೆ ಉದ್ಯಮಕ್ಕೆ ಉತ್ತೇಜನ, ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಸೇರಿದಂತೆ ಅವರ ಆಡಳಿತಾತ್ಮಕ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯಂತೆ ಟಿಪ್ಪು ಸುಲ್ತಾನ್ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು. ಈ ವಿಶ್ವವಿದ್ಯಾಲಯದಲ್ಲಿ ಅವರ ಆಡಳಿತ, ಇತಿಹಾಸ, ವಿಜ್ಞಾನ, ರಾಕೆಟ್ ತಂತ್ರಜ್ಞಾನ, ಕೃಷಿ, ಆರ್ಥಿಕ ಸುಧಾರಣೆಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಕೊಡುಗೆಗಳ ಕುರಿತು ಸಂಶೋಧನೆ ನಡೆಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಧರ್ಮಗಳು ಬೇರೆ ಇರಬಹುದು, ಆದರೆ ನಮ್ಮ ನಾಡು ಒಂದೇ; ನಮ್ಮೆಲ್ಲರ ರಕ್ತದ ಬಣ್ಣ ಒಂದೇ. ಪರಸ್ಪರ ಪ್ರೀತಿ, ಗೌರವ, ಸಹಬಾಳ್ವೆ ಮತ್ತು ಸಹೋದರತ್ವದ ಮೂಲಕ ಸದೃಢ, ಸಮೃದ್ಧ ಹಾಗೂ ಸ್ವಾಭಿಮಾನಿ ಕರ್ನಾಟಕವನ್ನು ನಿರ್ಮಿಸೋಣ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಇತಿಹಾಸ, ಕನ್ನಡ ರಾಜ್ಯೋತ್ಸವದ ಮಹತ್ವ, ಕರ್ನಾಟಕದ ಏಕೀಕರಣ ಹಾಗೂ ನಾಡಿನ ಸೌಹಾರ್ದ ಪರಂಪರೆಯ ಕುರಿತು ಹಲವಾರು ಗಣ್ಯರು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿವಿಧ ಸಂಘಟನೆಗಳ ಮುಖಂಡರುಗಳಾದ, ಅಬ್ದುಲ್ ಹಮೀದ್ ಮಾಗಿನಮನಿ, ಅಪ್ಸರಾ ಚಪ್ಪರಬಂದ್, ಇಲಿಯಾಸ್ ನಾಟೇಕರ್, ಮುನ್ನಾ ಬಕ್ಷಿ, ರಿಯಾಜ್ ಹುಂಡೇಕರ್, ಯಾಸೀನ್ ಪಟೇಲ್, ಅಜರ್ ಬಂಗಿ, Adv. ಗೌಸ್ ಹವಾಲ್ದಾರ್, ಸಿರಾಜ್ ಸರ್, ಇಲಿಯಾಸ್ ಸಿದ್ದಿಕಿ, ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ದ್ರಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ್ ಅಹಮದ್ ಮನಿಯಾರ್ ನಗರಾಧ್ಯಕರಾದ ಉಮರ್ ಖಾನ್ ಪಠಾನ್, ಜಿಲ್ಲಾ ಉಪಾಧ್ಯಕ್ಷರಾದ ಮುನಾಫ್ ಪಠಾನ್ ಮತ್ತು ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Leave a Reply