ಬೆಂಗಳೂರು: ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಶರು ಹಲವು ಕುತಂತ್ರ ಮಾರ್ಗಗಳಿಂದ ಭಾರತವನ್ನು ತಮ್ಮ ವಶವಾಗಿಸಿಕೊಂಡರು. ಮುಂದೆ ದೇಶಾದ್ಯಂತ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಹಸ್ರಾರು ಮಂದಿ ಹುತಾತ್ಮರಾದರು. ಹಲವರ ತ್ಯಾಗ ಮತ್ತು ಬಲಿದಾದಿಂದ ದೇಶ ಸ್ವಾತಂತ್ರ್ಯ ಗಳಿಸಿದೆಯೆಂದು ಬಿಎಂಆರ್‌ಡಿಎ ಆಯುಕ್ತ ಗಿರೀಶ್ ಹೊಸೂರ್ ಹೇಳಿದರು.
ಸಂಜಯನಗರದ ಶರಣ ಸೇವಾ ಸಮಿತಿ ಏರ್ಪಡಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆಯೂ ಅನನ್ಯ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿರುವ ನಾವು ನಮ್ಮಲ್ಲಿರುವ ಭೇದ-ಭಾವಗಳನ್ನು ಕಳೆದುಕೊಂಡು ನಿಜವಾದ ಭಾರತೀಯರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಕಾರಗೊಳಿಸೋಣವೆಂದು ಕರೆನೀಡಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಪಾತ್ರವನ್ನು ಕುರಿತು ಮಾತನಾಡಿದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರುದ್ರೇಶ್ ಅದರಂಗಿ, ಬ್ರಿಟೀಶರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ವಿಜಯ ಕರ್ನಾಟಕದ ವೀರರಾಣಿ ಕಿತ್ತೂರು ಚೆನ್ನಮ್ಮನವರದ್ದಾಗಿದೆ. ಬ್ರಿಟೀಶರ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆಯನ್ನು ತೀವ್ರವಾಗಿ ವಿರೋಧಿಸಿದ ಚೆನ್ನಮ್ಮ ಅಕ್ಟೋಬರ್ ೨೩, ೧೮೨೪ರಂದು ಥ್ಯಾಕರೆಯನ್ನು ಕೊಂದು ಬ್ರಿಟೀಶರ ವಿರುದ್ಧ ಐತಿಹಾಸಿಕ ವಿಜಯವನ್ನು ಸಾಧಿಸಿದರು. ಮುಂದೆ ಒಳಗಿನವರ ಸಂಚಿನಿಂದಾಗಿ ಬ್ರಿಟೀಶರು ಚೆನ್ನಮ್ಮನನ್ನು ಸೆರೆಹಿಡಿದರು ಎಂದರು.
ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರಿಟೀಶರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಬಂಡೆದ್ದಿದ್ದಾರೆ. ಕೊಪ್ಪಳದ ಕ್ರಾಂತಿ, ಬೀದರ್ ದಂಗೆ, ಬೂದಿಬಸಪ್ಪನ ದಂಗೆ, ಕೊಡಗಿನ ಚಿಕ್ಕವೀರ ರಾಜೇಂದ್ರ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಹೋರಾಟಗಳು ಮಹತ್ವವಾದವುಗಳು ಎಂದರು.
ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು ಖಾದಿಯನ್ನು ನೇಯ್ದು ಗಾಂಧೀಜಿಯವರ ಸತ್ಯಾಗ್ರಹ ಚಳವಳಿಯನ್ನು ನಾಡಿನೆಲ್ಲೆಡೆ ಪಸರಿಸಿದರು. ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಮೈಲಾರ ಮಹದೇವಪ್ಪ ಬಹುದೊಡ್ಡ ಬಂಡುಕೋರರಾಗಿ ಬ್ರಿಟೀಶರಿಗೆ ಸಿಂಹಸ್ವಪ್ನರಾಗಿದ್ದು, ೧೯೪೩ರಲ್ಲಿ ಬ್ರಿಟೀಶರ ಗುಂಡಿಗೆ ಬಲಿಯಾದರು. ವಾಲಿ ಚೆನ್ನಪ್ಪ, ಕೋ.ಚೆನ್ನಬಸಪ್ಪ, ಜಯದೇವಿತಾಯಿ ಲಿಗಾಡೆ, ಟಿ.ಸಿದ್ಧಲಿಂಗಯ್ಯ ಮೊದಲಾದವರ ಹೋರಾಟಗಳು ಅಮರವಾದವು. ಈಸೂರು ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥ ಧ್ವಜಸತ್ಯಾಗ್ರಹ, ಶಿವಪುರ ಧ್ವಜಸತ್ಯಾಗ್ರಹ ಮೊದಲಾದ ಸಂಗ್ರಾಮಗಳು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಗ್ರಗಣ್ಯವಾದವುಗಳು ಎಂದರು.
ಮಾಜಿ ಸೈನಿಕ ದಂಪತಿಗಳಾದ ವಿಠಲ ದೇವೂರು ಮತ್ತು ಮಾಜಿ ಲೆಫ್ಟಿನೆಂಟ್ ಕಮಾಂಡರ್ ವಿ. ಸರಸ್ವತಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೀರಶೈವ ಲಿಂಗಾಯತ ನಿಗಮದ ನಿರ್ದೇಶಕ ಮಹಾಂತೇಶ ಪಾಟೀಲ, ಶರಣ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್, ಕಾರ್ಯದರ್ಶಿ ಶಿವಲಿಂಗ ಎಂ. ಉಪಸ್ಥಿತರಿದ್ದರು. ಉಪಾಧ್ಯಕ್ಷ ಗಂಗಾಧರ ಎಂ. ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಸದಸ್ಯೆಯರು ವಚನ ಗಾಯನ ನಡೆಸಿಕೊಟ್ಟರು.



