ಬೆಳಗಾವಿ: ಪ್ರಿಯಕರನ ಜೊತೆ ಓಡಿಹೋಗಲು ಪತಿ ಮನೆಗೆ ಕನ್ನ: ಪತ್ನಿ ಸೇರಿ ಇಬ್ಬರ ಬಂಧನ

2 hours ago

ಬೆಳಗಾವಿ: ಪ್ರಿಯಕರನ ಜೊತೆ ಓಡಿಹೋಗುವ ಉದ್ದೇಶದಿಂದ ಪತಿಯ ಮನೆಯಲ್ಲೇ ಕಳ್ಳತನ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೂಲತಃ ಮೂಡಲಗಿ ತಾಲೂಕಿನ ಹಸೀನಾ ನದಾಫ್ ಎಂಬ ಮಹಿಳೆ ಕಳೆದ ಎರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಜೊತೆ ವಿವಾಹವಾಗಿದ್ದಳು. ಆದರೆ ಮದುವೆಯಾದ ಬಳಿಕವೂ ತನ್ನ ಪ್ರಿಯಕರ ಹಣಮಂತ ಮಾರಾಪೂರನ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಇದೀಗ ಹಸೀನಾ ಮತ್ತು ಹಣಮಂತ ಸೇರಿ ಶರೀಫ್ ಮನೆಗೆ ಕನ್ನ ಹಾಕಿ, ಸುಮಾರು 21 ಲಕ್ಷ ರೂಪಾಯಿ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಜೊತೆಗೆ 11 ಸಾವಿರ ರೂಪಾಯಿ ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ದಿಲಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ಪೊಲೀಸ್ ತಂಡ, ಕೃತ್ಯ ನಡೆದ 48 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಾದ ಹಣಮಂತ ಮಾರಾಪೂರ ಹಾಗೂ ಹಸೀನಾ ನದಾಫ್ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದ್ದಾರೆ.

Leave a Reply