ಸರ್ಕಾರ ನಿಜವಾಗಿಯೂ ಬದುಕಿದೆಯೇ? ಗೃಹ ಸಚಿವರು ಎಚ್ಚರವಾಗಿದ್ದಾರೆಯೇ?: ಕೆಪಿಸಿಸಿ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆಯೇ? ಸರ್ಕಾರ ನಿಜವಾಗಿಯೂ ಬದುಕಿದೆಯೇ? ಗೃಹ ಸಚಿವರು ಎಚ್ಚರವಾಗಿದ್ದಾರೆಯೇ? ಎಂದು ಕೆಪಿಸಿಸಿ ಪ್ರಶ್ನಿಸಿದೆ.
ವಿರೋಧ ಪಕ್ಷದ ನಾಯಕರ ಕಾರಿನ ಮೇಲೆಯೇ ಮೊಟ್ಟೆ ಎಸೆಯಲಾಗುತ್ತೆ ಅಂದರೆ, ಈ ಪ್ರಶ್ನೆಯನ್ನ ಸರ್ಕಾರಕ್ಕೆ ಕೇಳಲೇ ಬೇಕಿದೆ. ಹಾಗೇ ಇದನ್ನ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಗುಂಡಾಗಿರಿ ಎಂದೂ ಹೇಳಬೇಕಾಗಿದೆ ಎಂದಿದೆ.
ಅಷ್ಟಕ್ಕೂ ಸಿದ್ದರಾಮಯ್ಯನವರು ಮಡಿಕೇರಿಗೆ ತೆರಳಿದ್ದು ನೆರ ಸಂತ್ರಸ್ತರ ಕಷ್ಟ ಆಲಿಸಲು. ಇತ್ತ ಸರ್ಕಾರ ಮಾಡಲು ಆಗದ ಕೆಲಸವನ್ನ ಸಿದ್ದರಾಮಯ್ಯನವರು ಮಾಡಲು ಹೊರಟಿದ್ದರು. ಹೀಗೆ ಜನರ ಸಂಕಷ್ಟ ಕೇಳಲು ಹೋದವರ ಮೇಲೆಯೇ ಈ ಹೀನ ಕೃತ್ಯ ಎಸಗುವುದು ಬಿಜೆಪಿಗರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತೆ ಎಂದಿದೆ.
ಹಾಗೇ ರಾಜ್ಯದಲ್ಲಿ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನ ಪ್ರಶ್ನೆ ಮಾಡುವುದೇ ಅಪರಾಧ ಅನ್ನುವಂತಾಗಿದೆ. ತಮ್ಮ ಹೈಕಮಾಂಡ್ ಮೆಚ್ಚಿಸಲು ರಾಜ್ಯದಲ್ಲೂ ಸಾಕ್ಷಾತ್ ಉತ್ತರ ಪ್ರದೇಶದ ಗೂಂಡಾ ಆಡಳಿತವನ್ನೇ ಜಾರಿಗೆ ತರಲು ಬೊಮ್ಮಾಯಿ ಸರ್ಕಾರ ಹೊರಟಂತಿದೆ ಎಂದಿದೆ.
ಬಿಜೆಪಿಯ ಈ ನಡೆ ನೋಡಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಅದೇನೆಂದ್ರೆ ಸರ್ಕಾರದ ಸಚಿವರು, ಶಾಸಕರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿಯಂತೂ ನೀಡಿಲ್ಲ. ಪರಿಹಾರ ನೀಡುವ ಮಾತಂತೂ ಇಲ್ಲವೇ ಇಲ್ಲ. ತಮ್ಮ ಈ ತಪ್ಪನ್ನ ಮುಚ್ಚಿಟ್ಟುಕೊಳ್ಳಲು ಇಂತಹ ನೀಚ ಕೃತ್ಯಗಳನ್ನ ಮಾಡಿಸಲು ಹೊರಟಿದೆ ಸರ್ಕಾರ ಎಂದಿದೆ.
ಇಲ್ಲಿ ಸನ್ಮಾನ್ಯ ಸಿದ್ದರಾಮಯ್ಯನವರು ತಮ್ಮ ಅಭಿಪ್ರಾಯವನ್ನ ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಮಂಡಿಸಿದ್ದರಷ್ಟೇ. ಆದರೆ ಇದನ್ನೇ ಸಹಿಸದ ಬಿಜೆಪಿಗರು ಗೂಂಡಾಗಿರಿಗೆ ಇಳಿದಿರುವುದು ಹೀನ ಕೃತ್ಯ. ಇಲ್ಲಿ ಗಂಭೀರವಾದ ವಿಚಾರ ಅಂದರೆ ರಾಜ್ಯದ ಪೊಲೀಸ್ ವ್ಯವಸ್ಥೆ ಈ ಮಟ್ಟಿಗೆ ಹಾಳಾಗಿ ಹೋಗಿರುವುದು. ಸರ್ಕಾರ ಪೊಲೀಸರನ್ನ ಬಾಡಿಗೆ ಕಾವಲುಗಾರರಂತೆ ನಡೆಸಿಕೊಳ್ಳುತ್ತಿರುವುದು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಇಂತಹ ಘಟನೆ ನಡೆಯುತ್ತೆ ಅನ್ನುವುದರ ಬಗ್ಗೆ ಪೊಲೀಸರಿಗೆ ಸುಳಿವೇ ಇರಲಿಲ್ಲವೇ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಇದು ಪೊಲೀಸರ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವನ್ನ ಎತ್ತಿ ತೋರಿಸುವುದಿಲ್ಲವೇ? ಅಲ್ಲದೇ ಗಲಾಟೆ ಹೆಚ್ಚಾಗುತ್ತಿದಂತೆ ಪೊಲೀಸರು ಯಾಕೆ ಯಾರನ್ನೂ ವಶಕ್ಕೆ ತೆಗೆದುಕೊಳ್ಳಲಿಲ್ಲ ಅನ್ನುವುದಕ್ಕೆ ಉತ್ತರವೇ ಇಲ್ಲ ಎಂದಿದೆ.
ಇದನ್ನ ನೋಡಿದರೆ ಇದೊಂದು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಕೂಡಲೇ ಪ್ರಕರಣವನ್ನ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಮುಂದೆ ಯಾವುದೇ ನಾಯಕರ ಮೇಲೂ ಇಂತ ದಾಳಿ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದೆ.




