ಭಗವದ್ಗೀತೆ ಸರ್ವರ ಶ್ರೇಯಸ್ಸಿಗೆ ಮಾರ್ಗದರ್ಶಕ: ಡಾ.ಕೆ. ಸುಧಾಕರ್ ಅಭಿಮತ
ಚಿಕ್ಕಬಳ್ಳಾಪುರ: ಇಡೀ ಮಾನವ ಕುಲದ ಸಮಾನತೆ ಮತ್ತು ಶ್ರೇಯಸ್ಸಿಗಾಗಿ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಬೋಧಿಸಿರುವ ಆದರ್ಶಗಳು ಪೂರಕವಾಗಿವೆ. ಸಮಾಜದಲ್ಲಿ ಧರ್ಮದ ಉಳಿವಿಗಾಗಿ ಯಾವ ಸಂಬಂಧಗಳೂ ಮುಖ್ಯವಲ್ಲ ಎಂಬುದನ್ನು ಶ್ರೀ ಕೃಷ್ಣ ತಿಳಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಒಂದು ಧರ್ಮ, ಜಾತಿಗೆ ಸೀಮಿತವಾಗದೆ ಇಡೀ ಮಾನವ ಕುಲಕ್ಕೆ ಮಾರ್ಗದರ್ಶಕವಾಗಿದೆ ಎಂದರು.
ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಬೇಕು. ಮಹಾಭಾರತದಲ್ಲಿ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ, ನೂರು ತಪ್ಪುಗಳ ನಂತರ ಶಿಕ್ಷಿಸುವುದನ್ನು ತಿಳಿಸಿದ್ದಾರೆ. ಇದರಲ್ಲಿ ಎಲ್ಲರನ್ನೂ ಪ್ರೀತಿಸುವ ವಿಚಾರವಿದೆ. ವೈರಾಗ್ಯದ ಬಗ್ಗೆ, ಸಹನೆ ಮತ್ತು ಸೌಹಾರ್ದತೆ ಬಗ್ಗೆ ವಿವರಿಸಲಾಗಿದೆ ಎಂದು ತಿಳಿಸಿದರು.
ಈ ಮಣ್ಣಿನಲ್ಲಿ ಜನಿಸಿದ ನಾವು, ಮಣ್ಣಿನಲ್ಲಿ ಬೆಳೆದ ಆಹಾರ ಸೇವಿಸಿ, ಕೊನೆಗೆ ಮಣ್ಣಿಗೆ ಸೇರುತ್ತೇವೆ. ಶ್ರೀಮಂತಿಕೆ ಎಂಬುದು ಜನಪರ, ಪ್ರಕೃತಿಪರ, ಮನುಷ್ಯತ್ವ ಉಳಿಸಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದನ್ನು ಶ್ರೀಕೃಷ್ಣ ನಮಗೆ ಅರಿವು ಮೂಡಿಸಿದ್ದಾರೆ. ಮುಖ್ಯವಾಗಿ ಗೆಳೆತನದ ಮಹತ್ವದ ಬಗ್ಗೆ ಕುಚೇಲನ ಸಂಬಂಧ ವರ್ಣಿಸಲಸಾಧ್ಯ. ಜಾತಿ, ಅಂತಸ್ತಿಗೆ ಮಿಗಿಲಾಗಿ ಸ್ನೇಹ ನೋಡಿದವರು ಶ್ರೀಕೃಷ್ಣ ಎಂದು ವರ್ಣಿಸಿದರು.
ಭಕ್ತಿ, ನಂಬಿಕೆಯಿಂದ ಬೇಡಿದ ದ್ರೌಪದಿಯನ್ನು ರಕ್ಷಿಸಿದವರು ಶ್ರೀಕೃಷ್ಣ, ಎಷ್ಟೇ ಕಷ್ಟ ಬಂದರೂ ಅರ್ಜುನನ ಕೈ ಬಿಡದವರು ಶ್ರೀಕೃಷ್ಣ, ನಿಸ್ವಾರ್ಥವಾದ ಶುದ್ಧ ಮನಸ್ಸಿನಿಂದ ಇದ್ದ ಕೃಷ್ಣ ಎಲ್ಲರಿಗೂ ಒಳಿತಾಗಬೇಕು ಎಂಬ ಏಕೈಕ ಉದ್ಧೇಶದಿಂದ ಆದರ್ಶರಾಗಿದ್ದಾರೆ. ಪ್ರತಿನಿತ್ಯ ಶ್ರೀಕೃಷ್ಣನ ಆರಾಧನೆ ಮಾಡಬೇಕು, ವಿದೇಶಗಳಲ್ಲಿ ನಾವೇ ನಾಚುವ ರೀತಿಯಲ್ಲಿ ಕೃಷ್ಣನ ಭಕ್ತರಿದ್ದಾರೆ, ಶ್ರೀಕೃಷ್ಣನ ಶಕ್ತಿಯೊಂದಿದ್ದರೆ ಅನಿಶ್ಚಿತತೆ ನಮ್ಮನ್ನು ಕಾಡುವುದಿಲ್ಲ. ಬದಲಿಗೆ ನಿಶ್ಚಿತ ದಾರಿಯಲ್ಲಿ ಕೊಂಡೊಯ್ಯಲಿವೆ ಕೃಷ್ಣನ ಆದರ್ಶಗಳು ಎಂದರು.
ಯಾದವ ಸಮುದಾಯದ ಮುಖಂಡರು ಮನವಿ ಮಾಡಿದ ಒಂದೇ ವಾರದಲ್ಲಿ ಶ್ರೀಕೃಷ್ಣ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ. ಇಂದೇ ಆದೇಶಪತ್ರ ವಿತರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಶೀಘ್ರವೇ ಭವನ ನಿರ್ಮಾಣಕ್ಕೂ ಅನುದಾನ ನೀಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳ ವಸತಿ ಶಾಲೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಶೀಘ್ರವೇ ಮಂಜೂರು ಮಾಡಲಾಗುವುದು. ಸಂಖ್ಯೆಯಲ್ಲಿ ಯಾದವ ಸಮುದಾಯ ಚಿಕ್ಕದಿದ್ದು, ಆದರ್ಶದ ಬದುಕಿಗೆ ಶಿಕ್ಷಣ, ಆರೋಗ್ಯ ಸಿಗುವ ರೀತಿಯಲ್ಲಿ ಆ ಸಮುದಾಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು, ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದಿಂದ ಯುವಕರ ಸಬಲೀಕರಣ ಸಾಧ್ಯವಿದ್ದು, ಜ್ಞಾನಕ್ಕಿರುವ ಶಕ್ತಿ ಯಾವುದಕ್ಕೂ ಇಲ್ಲ ಎಂಬುದನ್ನು ಅರಿತು, ಶಾರದೆಯನ್ನು ಒಲಿಸಿಕೊಳ್ಳುವತ್ತ ಮುಖ ಮಾಡಬೇಕು. ಸಮುದಾಯದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಯಾದವ ಸಮುದಾಯದ ವಸತಿ ರಹಿತರಿಗಾಗಿ ಈಗಾಗಲೇ 1,800 ನಿವೇಶನ ಸಿದ್ದಪಡಿಸಲಾಗಿದೆ. ಇದಕ್ಕಾಗಿ ಈಗಾಗಲೇ ಜಮೀನು ಮತ್ತು ಫಲಾನುಭವಿಗಳನ್ನು ಗುರ್ತಿಸಲಾಗಿದೆ. ಇವರೆಲ್ಲರಿಗೂ ಮನೆ ನಿರ್ಮಾಣವನ್ನು ಸರ್ಕಾರದಿಂದಲೇ ಮಾಡಿಕೊಡುವುದಾಗಿ ಪ್ರಕಟಿಸಿದರು.
ಅದೇ ರೀತಿಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು. ಈ ಸಮುದಾಯಗಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು. ಇದೇ ಉದ್ಧೇಶದಿಂದ ತಾವು ಶಾಸಕರಿದ್ದಾಗಲೇ ಒಂದು ಜಿಪಂ ಮತ್ತು ಒಂದು ತಾಪಂ ಸ್ಥಾನವನ್ನು ಯಾದವ ಸಮುದಾಯಕ್ಕೆ ನೀಡಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲಾಗಿತ್ತು ಎಂದರು.
ಮುಂದೆಯೂ ಇದೇ ರೀತಿಯಲ್ಲಿ ರಾಜಕೀಯ ಸ್ಥಾನಮಾನ ಕಲ್ಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುವುದು. ಯುವಕರು ಮುಂದೆ ಬರುವ ಪ್ರಯತ್ನ ಮಾಡಬೇಕು, ಸಮುದಾಯದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.




