ಆಸಕ್ತರಿಗೆ ಸಾವರ್ಕರ್ ಜೀವನದ ಪುಸ್ತಕ ನೀಡುತ್ತೇನೆ: ಸುಧಕರ್

4 years ago

ಆಸಕ್ತರಿಗೆ ಸಾವರ್ಕರ್ ಜೀವನದ ಪುಸ್ತಕ ನೀಡುತ್ತೇನೆ: ಸುಧಕರ್

ಚಿಕ್ಕಬಳ್ಳಾಪುರ: ವೀರ ಸಾವರ್ಕರ್ ಅವರು ಸ್ವಾತಂತ್ರಕ್ಕಾಗಿ ಆದರ್ಶದ ಹೋರಾಟ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಇದರಲ್ಲಿ ಭಿನ್ನಾಭಿಪ್ರಾಯ ಇದ್ದರೆ, ಅಂತಹವರು ಸ್ವಾತಂತ್ರೃ ಇತಿಹಾಸ ತಿಳಿದಿರಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರದ ಇತಿಹಾಸ ಮತ್ತು ಸಾವರ್ಕರ್ ಅವರ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಅಂತಹವರಿಗೆ ನನ್ನ ಪ್ರಾಯೋಜಕತ್ವದಲ್ಲಿ ಸಾವರ್ಕರ್ ಅವರ ಬದುಕಿನ ಕುರಿತು ಇರುವ ಪುಸ್ತಕಗಳನ್ನು ಕಳುಹಿಸುತ್ತೇನೆ. ಅವುಗಳನ್ನು ಓದಿದ ನಂತರ ಮಾತನಾಡಲಿ, ಅಜ್ಞಾನದಿಂದ ಮಾತನಾಡುವುದು ಬೇಡ ಎಂದರು.
ಅಜ್ಞಾನದಿಂದ ಮಾತನಾಡುವುದರಿಂದ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಕಡಿಮೆ ಮಾಡುವುದು ಆಗಬಾರದು. ಇತಿಹಾಸ ಸಂಪೂರ್ಣ ಅರಿತು ಮಾತನಾಡುವ ಕೆಲಸವಾಗಬೇಕು ಎಂದರು.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಮೊಟ್ಟೆ ಎಸೆದಿರುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸೂಕ್ತ ವೇದಿಕೆ ಇದೆ. ಹೋರಾಟಕ್ಕೂ ಅವಕಾಶ ಇದೆ, ಸಂವಿಧಾನವೂ ಕಲ್ಪಿಸಿದೆ, ಪ್ರಜಾಪ್ರಭುತ್ವ ನೀತಿಯೂ ಅದೇ ಆಗಿದೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರ ಮೇಲೆ ನಡೆದ ಈ ಘಟನೆಯನ್ನು ಖಂಡಿಸುವುದಾಗಿ ಮತ್ತು ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಖಂಡಿಸಿದ್ದಾರೆ ಎಂದರು.
ಜನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಕಾರ್ಯಕ್ರಮದ ಹೆಸರು, ದಿನಾಂಕ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ರಾಷ್ಟ್ರ ನಾಯಕರ ಬಗ್ಗೆ ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಜಿಲ್ಲಾಕೇಂದ್ರವಾಗಿ ದೇವನಹಳ್ಳಿಯನ್ನು ಮಾಡುವುದಾಗಿ ಹೇಳಿದರು.
ಭೌಗೋಳಿಕವಾಗಿ ದೇವನಹಳ್ಳಿ ಸೂಕ್ತವಾಗಿದ್ದು, ಎಲ್ಲ ತಾಲೂಕುಗಳ ಕೇಂದ್ರಸ್ಥಾನವಾಗಿದೆ. ಹಿಂದೆಯೇ ಈ ತೀರ್ಮಾನ ಕೈಗೊಂಡಿದ್ದು, ಆದೇಶವನ್ನು ಮಾತ್ರ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಜಿಲ್ಲಾಕೇಂದ್ರವಾಗಿ ದೇವನಹಳ್ಳಿ ರಚನೆಯಾದರೂ ಗ್ರಾಮಾಂತರದ ಎಲ್ಲ ತಾಲೂಕುಗಳಿಗೆ ಸೂಕ್ತ ಸ್ಥಾನಮಾನ ಒದಗಿಸಲಾಗುವುದು. ದೇವನಹಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಇರುವ ಕಾರಣದಿಂದ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಕೇವಲ ರಾಜಕಾರಣದ ದುರುದ್ಧೇಶದಿಂದ ಹೋರಾಟ ಮಾಡಿದರೆ ಉಪಯೋಗವಿಲ್ಲ, ಇದರಲ್ಲಿ ರಾಜಕಾರಣ ಮಾಡುವವರು ಜಿಲ್ಲೆಯ ಪ್ರಗತಿ ಬಗ್ಗೆ ವಿಚಾರ ಮಾಡಲಿ ಎಂದರು.

Leave a Reply