ಬೆಂಗಳೂರು: ರಾಜ್ಯ ವಿಧಾನ ಮಂಡಲದಲ್ಲಿ ಅಂಗೀಕರಿಸಲಾಗಿರುವ ದ್ವೇಷಭಾಷಣ ಪ್ರತಿಬಂಧಕ ಮಸೂದೆ ವಾಕ್ ಸ್ವಾತಂತ್ರ್ಯವನ್ನು ಕಸಿಯಲಿದೆ. ಹೀಗಾಗಿ ಮಸೂದೆಗೆ ಅಂಕಿತ ಹಾಕಬಾರದು ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆ ಅಧಿವೇಶನದಲ್ಲಿ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕಿತ್ತು. ಆದರೆ ಇದಕ್ಕೆ ಅವಕಾಶ ನೀಡದೆ ರಾಜ್ಯ ಸರ್ಕಾರ ಸದನದಲ್ಲಿ ನನಗೆ ಬಹುಮತ ಇದೆ ಎಂದು ಧ್ವನಿ ಮತದ ಮೂಲಕ ಅನುಮೋದನೆ ಪಡೆದುಕೊಂಡಿದೆ ಎಂದರು.
ಇಂತಹ ಮಸೂದೆ ತರುವಾಗ ಅದು ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಅವಕಾಶವಿದೆ. ವಿಧಾನಸಭೆ ಇರುವುದು ಮಸೂದೆ ಮಂಡನೆ ಹಾಗೂ ಚರ್ಚೆಗೇ ಹೊರತು ಗಲಾಟೆ ಮಾಡುವುದಕ್ಕಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದರ ಚರ್ಚೆಗೆ ಅವಕಾಶ ನೀಡಲಿಲ್ಲ. ನಾನು ಮಸೂದೆಯ ಬಗ್ಗೆ ಚರ್ಚೆ ಮಾಡಲು ಮುಂದಾದಾಗ ಕಾಂಗ್ರೆಸ್ ಶಾಸಕರು, ಸಚಿವರು ಭಯಗೊಂಡು ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿದರು. ಈ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ನಡೆಯೂ ನನಗೆ ಬೇಸರ ತಂದಿದೆ ಎಂದರು.
ಬಿಜೆಪಿಯಲ್ಲಿ 15 ಶಾಸಕರು ಈ ಬಗ್ಗೆ ಮಾತನಾಡಲು ತಯಾರಾಗಿ ಬಂದು ಸಭಾಧ್ಯಕ್ಷರಿಗೆ ಹೆಸರು ನೀಡಿದ್ದರು. ಸಮಗ್ರ ಚರ್ಚೆಯ ಬಳಿಕ ಮಸೂದೆಯನ್ನು ಸದನ ಸಮಿತಿಗೆ ಒಪ್ಪಿಸಬೇಕೆಂದು ಆಗ್ರಹಿಸಲು ತೀರ್ಮಾನಿಸಿದ್ದೆವು. ಆದರೆ ಏಕಾಏಕಿ ಮಸೂದೆ ಪಾಸ್ ಮಾಡಲಾಗಿದೆ ಎಂದರು.
ಈಗ ಅದು ಅನುಮೋದನೆಗಾಗಿ ರಾಜ್ಯಪಾಲರ ಬಳಿಗೆ ಹೋಗಿದೆ. ಸೋಮವಾರ ನಾನು, ರಾಜ್ಯಾಧ್ಯಕ್ಷರು ಹಾಗೂ ಇತರ ಮುಖಂಡರು ರಾಜ್ಯಪಾಲರ ಬಳಿಗೆ ಹೋಗಿ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಇದು ಜನರ ಹಾಗೂ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯುವ ಮಸೂದೆ. ತುರ್ತು ಪರಿಸ್ಥಿತಿ ತಂದು ವಾಕ್ ಸ್ವಾತಂತ್ರ್ಯ ಕಸಿದುಕೊಂಡಂತೆಯೇ ಇಲ್ಲಿ ಮಸೂದೆ ಮೂಲಕ ಸ್ವಾತಂತ್ರ್ಯ ಕಸಿಯಲಾಗುತ್ತಿದೆ. ನಮ್ಮ ಅಹವಾಲಿಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಆದ್ದರಿಂದ ರಾಜ್ಯಪಾಲರ ಬಳಿಗೆ ಹೋಗುತ್ತಿದ್ದೇವೆ. ರಾಜ್ಯಪಾಲರು ಮೀಸಲಾತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೇಳಿದ್ದಾರೆ. ಯಾವುದೇ ಕಾನೂನು ತರುವಾಗ ಹೀಗೆಯೇ ಚರ್ಚೆ ಮಾಡಬೇಕಾಗುತ್ತದೆ ಎಂದರು.
ಕೇರಳದ ಕನ್ನಡ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯನವರ ಆಪ್ತ ಪಾಲುದಾರರಾದ ಮುಖಂಡರೇ ಇದನ್ನು ಮಾಡಿದ್ದಾರೆ. ಇದರಲ್ಲಿ ಸಿಎಂ, ಡಿಸಿಎಂ ಕೈವಾಡ ಇದ್ದು, ಈ ಎಲ್ಲ ಬೆಳವಣಿಗೆಗಳು ಅವರಿಗೆ ಮೊದಲೇ ಗೊತ್ತಿತ್ತು ಎಂದರು.
ನೀನು ಹೊಡೆದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎಂದು ಮೊದಲೇ ತೀರ್ಮಾನಿಸಿಕೊಂಡಿದ್ದರು. ಇವರ ಬ್ರದರ್‌ಗಳು ಎಲ್ಲವನ್ನೂ ಮೊದಲೇ ಚರ್ಚೆ ಮಾಡಿಕೊಂಡು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಕೇರಳಕ್ಕೆ ಪತ್ರ ಬರೆದಿರುವುದು ಕೂಡ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುವುದರ ಭಾಗ. ಕೇರಳ ಸಿಎಂ ಬುಲ್ಡೋಜರ್ ಎಂದಾಗ ಅದಕ್ಕೆ ಸಿಎಂ ಸಿದ್ದರಾಮಯ್ಯ ಏನೂ ಹೇಳಲಿಲ್ಲ. ಇದು ಕನ್ನಡಕ್ಕೆ ದ್ರೋಹ ಬಗೆದ ಸರ್ಕಾರ ಎಂದರು.
ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿದಾಗಲೇ ಈ ಬಗ್ಗೆ ಚರ್ಚೆ ಮಾಡಬೇಕಿತ್ತು. ಎಲ್ಲದಕ್ಕೂ ಮೋದಿಯಿಂದ ಅನ್ಯಾಯ ಎನ್ನುತ್ತಾರೆ. ಈಗ ಇದನ್ನು ಏಕೆ ಅನ್ಯಾಯ ಎಂದು ಹೇಳುತ್ತಿಲ್ಲ? ಸಿಎಂ ಸಿದ್ದರಾಮಯ್ಯ ಕನ್ನಡಕ್ಕೆ ಮಾರಕವಾದ ನಡೆ ಇಟ್ಟಿದ್ದಾರೆ. ಇದರ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಿ. ಇಲ್ಲವಾದರೆ ಇದರಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆ ಎಂದೇ ಭಾವಿಸುತ್ತೇವೆ ಎಂದರು.




