ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ರಾಜ್ಯದ ಏಳು ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆ ಕಡಿಮೆಯಾಗಿದೆ, 24 ಜಿಲ್ಲೆಗಳಲ್ಲಿ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಸಚಿವಾಲಯ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ. ಜುಲೈ 28ಕ್ಕೆ ಕೊನೆಗೊಂಡ ವಾರಕ್ಕೆ ಹೋಲಿಸಿದಲ್ಲಿ ಆಗಸ್ಟ್ 24ಕ್ಕೆ ಕೊನೆಗೊಳ್ಳುವ ವಾರದ ಅವಧಿಯಲ್ಲಿ ಕೊರಿನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವ ಸಂಗತಿಯನ್ನು ಉಲ್ಲೇಖಿಸಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರಿಗೆ ಪತ್ರದ ಮೂಲಕ ರೋಗ ಹರಡದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ರಾಜ್ಯದ 24 ಜಿಲ್ಲೆಗಳಲ್ಲಿ ಕೊರೊನಾ ಮಾಣ ಹೆಚ್ಚಿದೆ. ಮುಂದಿನ ತಿಂಗಳಲ್ಲಿ ಹಬ್ಬಗಳ ಕಾರಣದಿಂದ ಸಾಮೂಹಿಕವಾಗಿ ಜನ ಸೇರುವ ಸಂಭವನೀಯತೆ ಇದೆ. ಆದ್ದರಿಂದ ಎಲ್ಲ ಜಿಲ್ಲೆಗಳಲ್ಲಿ ಸೂಕ್ತ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ.
ಕೊರೊನಾ ತಡೆ ಲಸಿಕೆ ನೀಡುವಿಕೆ ಮತ್ತು ಪರೀಕ್ಷೆ ಹೆಚ್ಚಿಸಬೇಕು, ಹೆಚ್ಚು ಪ್ರಕರಣಗಳು ವರದಿಯಾಗುವ ಜಿಲ್ಲೆಗಳು, ಪಾಸಿಟಿವಿಟಿ ರೇಟ್, ಕ್ಲಸ್ಟರ್ಗಳ ಮೇಲೆ ಸೂಕ್ತ ನಿಗಾ ಇಡಬೇಕು ಎಂದು ಸೂಚಿಸಲಾಗಿದ್ದು, ಐಎಲ್ಐ ಮತ್ತು ಸಾರಿ ಪ್ರಕರಣಗಳ ಮೇಲೆ ಸೂಕ್ಷ್ಮ ನಿಗಾ ಇಡುವಂತೆ ನಿರ್ದೇಶಿಸಲಾಗಿದೆ. ಜೊತೆಗೆ, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಜೀನೋಮ್ ಸೀಕ್ವೆನ್ಸಿಂಗ್ ಅಗತ್ಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರಿನ ಪ್ರಮಾಣ ಶೇ.90-95 ರಷ್ಟಿದೆ ಎಂದು ಹೇಳಲಾಗಿದೆ.



