ಒಂದೇ ವೇದಿಕೆಯಲ್ಲಿ ಆತ್ಮೀಯರಾಗಿ ಕಾಣಿಸಿಕೊಂಡ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್

5 months ago

ಬೆಂಗಳೂರು:  ಅಧಿಕಾರ ಹಸ್ತಾಂತರ ಕುರಿತಾಗಿ ರಾಜ್ಯ ಕಾಂಗ್ರೆಸ್ ನಲ್ಲಿನಾನಾ ರೀತಿಯ ತಂತ್ರಗಾರಿಕೆಗಳ ಬಿಕ್ಕಟ್ಟಿನ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಂದೇ ವೇದಿಕೆಯಲ್ಲಿ ಪುನಃ ಆತ್ಮೀಯರಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಗರದ ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿರುವ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ-2025ರ ಉದ್ಘಾಟನಾ ಸಮಾರಂಭದಲ್ಲಿ ಉಭಯ ನಾಯಕರು ಕಾಣಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಟಾಲ್‌ ಗಳ ವಿಕ್ಷಣೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಡಿ.ಕೆ.ಶಿವಕುಮಾರ್‌ ಮೀನು ಹಾಗೂ ಇತರ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ವಿವರಣೆ ನೀಡಿದ್ದಾರೆ. ಸಿದ್ದರಾಮಯ್ಯ ಕೂಡ ಪ್ರತಿಯೊಂದಕ್ಕೂ ಸ್ಪಂದಿಸಿ ತಲೆದೂಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆದ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿರುವ ಡಿ ಕೆ ಶಿವಕುಮಾರ್ ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಚಟುವಟಿಕೆ ನಡೆಸುವ ಮೂಲಕ ಗಮನ ಸೆಳೆದಿದ್ದರು.

ಇದರ ಬೆನ್ನಲ್ಲೇ ತಾವು ಐದು ವರ್ಷದವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಈ ಅವಧಿಯನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳುವ ಮೂಲಕ ಶಿವಕುಮಾರ್ ಬಣದ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದರು. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಉಭಯ ನಾಯಕರನ್ನು ಉತ್ತರ ದ್ರುವ ದಕ್ಷಿಣ ಧ್ರುವ ವನ್ನಾಗಿ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು ಆದರೆ ಎಲ್ಲರ ನೀರಿಕ್ಷೆ ಹುಸಿ ಮಾಡಿ ಇಬ್ಬರೂ ನಾಯಕರು ಒಟ್ಟಾಗಿ ಕಾಣಿಸಿಕೊಂಡು ಸಹಜ ರೀತಿಯಲ್ಲಿ ವರ್ತಿಸುವ ಮೂಲಕ ಗಮನಸೆಳೆದಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರ್ಧಕ್ಕೆ ನಿರ್ಗಮಿಸಿದ ಡಿ ಕೆ ಶಿವಕುಮಾರ್, ತಾವು ಹೋಗಬೇಕಾದ ಕಾರಣವನ್ನು ವೇದಿಕೆಯ ಮೇಲೆ ವಿವರಿಸಿದರು. ಕಾರ್ಯಕ್ರಮದಲ್ಲಿ ಅವರು, ನೀರಾವರಿ ವಿವಾದಕ್ಕೆ ಸಂಬಂಧಪಟ್ಟಂತಹ ಕೋರ್ಟ್‌ ವಿವಾದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡಲು ದೆಹಲಿಯಿಂದ 50 ವಕೀಲರ ತಂಡ ಬೆಂಗಳೂರಿಗೆ ಬಂದಿದೆ. ಅವರ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಬೇಕಿದೆ. ಅದರಲ್ಲಿ ಭಾಗವಹಿಸಲು ನಾನು ತುರ್ತಾಗಿ ಹೋಗಬೇಕು ಎಂದು ಹೇಳಿ ವೇದಿಕೆಯಿಂದ ತೆರಳಿದರು. 

Leave a Reply