ಕೈದಿಗಳು ಮೊಬೈಲ್ ಬಳಸಿದ ಪ್ರಕರಣಕ್ಕೆ‌ ಸ್ಪೋಟಕ ತಿರುವು

1 year ago

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ‌ ಮೋಸ್ಟ್ ವಾಂಟೆಡ್ ಉಗ್ರ ಸೇರಿದಂತೆ ಹಲವು ಕೈದಿಗಳು ಮೊಬೈಲ್ ಬಳಸಿದ ಪ್ರಕರಣಕ್ಕೆ‌ ಸ್ಪೋಟಕ ತಿರುವು ಸಿಕ್ಕಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೈದಿಗಳ ದೃಶ್ಯಾವಳಿ ಬಿಡುಗಡೆ ಬಂದು ವ್ಯವಸ್ಥಿತ ಪಿತೂರಿಯಾಗಿದ್ದು, ಹಲವು ವಿಚಾರಣಾಧೀನ ಕೈದಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ ಎಂಬ ಅಂಶ ತನಿಖಾ ತಂಡಕ್ಕೆ ಗೊತ್ತಾಗಿದೆ.

ದೇಶಾದ್ಯಂತ ಸಂಚಲನ ಮೂಡಿಸಿದ ಐಸಿಎಸ್‌ ಶಂಕಿತ ಉಗ್ರ ಶಕೀಲ್, ಸಜಾ ಬಂಧಿ ವಿಕೃತ ಕಾಮಿ ಉಮೇಶ್ ರೆಡ್ಡಿ,  ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟ ತರುಣ್ ರಾಜ್‌ಗೆ ವಿಶೇಷ ಸೌಲಭ್ಯ ನೀಡಿರುವ ಆರೋಪ  ಹಾಗೂ ಕೆಲ ಕೈದಿಗಳ ನೃತ್ಯದ ವಿಡಿಯೋ ಸಹ ಬಹಿರಂಗವಾದ ಪ್ರಕರಣದ ತನಿಖೆಗೆ ಉನ್ನತ ಸಮಿತಿ ರಚಿಸಲಾಗಿದೆ.

ಇದರ ಜೊತೆಗೆ ಜೈಲು ಅಧಿಕಾರಿಗಳ ನೇತೃತ್ವದಲ್ಲಿ ಕೂಡ ತನಿಖೆಗೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳ ನೇತೃತ್ವದ ವಿಶೇಷ ತನಿಖಾ ತಂಡ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ಉಮೇಶ್ ರೆಡ್ಡಿ, ತರುಣ್, ಶಾಹಿದ್ ಹಾಗೂ ಶಕೀಲ್‌ನನ್ನು  ವಿಚಾರಣೆಗೊಳಡಿಸಿ ಹೇಳಿಕೆ ಪಡೆದುಕೊಂಡಿದೆ. ಅಲ್ಲದೆ, ಆ ವಿಡಿಯೋ ದೃಶ್ಯಾವಳಿ ಆಧರಿಸಿ ಕೃತ್ಯ ನಡೆದ ಸ್ಥಳ ಪರಿಶೀಲಿಸಿದ್ದು, ಸರ್ಕಾರಕ್ಕೆ ಸಮಗ್ರ ವರದಿಯನ್ನು ಅಧಿಕಾರಿಗಳು ಸಲ್ಲಿಸಿದೆ.

ಇದರಲ್ಲಿ ಉಮೇಶ್ ರೆಡ್ಡಿ, ತರುಣ್ ರಾಜ್ ಹಾಗೂ ಶಂಕಿತ ಉಗ್ರ ಶಕೀಲ್‌ಗೆ ಬಲವಂತವಾಗಿ ಮೊಬೈಲ್ ಕೊಟ್ಟು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೆ, ತರುಣ್‌ ರಾಜ್‌ಗೆ ಹಣಕ್ಕಾಗಿ ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ. ಆರೋಪಿಗಳ ಹೇಳಿಕೆ ಹಾಗೂ ಸಾದಂರ್ಭಿಕ ಪುರಾವೆಗಳನ್ನು ಅವಲೋಕಿಸಿದಾಗ ಜೈಲಿನಲ್ಲಿ ದುರುದ್ದೇಶದಿಂದಲೇ ಕೃತ್ಯ ನಡೆದಿರುವ ಬಗ್ಗೆ ಸಂಶಯವಿದೆ ಎಂದು ವರದಿಯಲ್ಲಿ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಶಂಕಿತ ಉಗ್ರ ಜುಹಾಬ್ ಹಮೀದ್ ಶಕೀಲ್ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದು, ಎರಡು ವರ್ಷಗಳ ಹಿಂದೆ ತನಗೆ ಬಂಧಿಯೊಬ್ಬ ಕೊಟ್ಟ ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಆತನಿಗೆ ಮರಳಿಸಿದೆ. ಆ ಮೊಬೈಲ್‌ನಿಂದ ನಾನು ಯಾರಿಗೂ ಕರೆ ಮಾಡಿ ಮಾತನಾಡಿಲ್ಲ. ನಾನು ಈವರೆಗೆ ಮೊಬೈಲ್ ಬಳಸಿಲ್ಲ ಎಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾರಾಗೃಹದ 8ನೇ ಬ್ಯಾರಕ್‌ನ 7ನೇ ಕೊಠಡಿಯಲ್ಲಿ ಬಂಧಿಗಳಾಗಿದ್ದ ಮಂಜುನಾಥ ಅಲಿಯಾಸ್‌ ಕೋಳಿ ಮಂಜ, ಚರಣ್ ರಾವ್‌, ಧನಂಜಯ ಅಲಿಯಾಸ್ ರೇಣುಕಾ ಪ್ರಸಾದ್‌ ಹಾಗೂ ಕಾರ್ತಿಕ್‌ ಅಲಿಯಾಸ್ ಚಿಟ್ಟೆ ನೃತ್ಯ ಮಾಡಿದ್ದರು. 2018ರಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ನಾಲ್ವರು ಜೈಲು ಸೇರಿದ್ದರು.

2018ರಲ್ಲಿ ಕಾರ್ತಿಕ್ ಅಲಿಯಾಸ್ ಚಿಟ್ಟೆ, 2022ರ ಜೂನ್‌ನಲ್ಲಿ ಕೋಳಿ ಮಂಜ, 2024ರಲ್ಲಿ ಚರಣ್ ಜೈಲಿನಿಂದ ಬಂಧ ಮುಕ್ತರಾಗಿದ್ದರು. ಈ ವಿಡಿಯೋ ಬಹಿರಂಗಕ್ಕೂ ಎರಡು ದಿನಗಳ ಮುನ್ನ ಧನಂಜಯ ಹೊರಬಂದಿದ್ದ. ಹೀಗಾಗಿ ಈ ನೃತ್ಯದ ದೃಶ್ಯಾವಳಿ ನಾಲ್ಕು ವರ್ಷಗಳ ಹಳೆಯ ವಿಡಿಯೋ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಇಡೀ ಪ್ರಕರಣ ಒಂದು ವ್ಯವಸ್ಥಿತ ಸಂಚಾಗಿದೆ. ಇದರಲ್ಲಿ ವಿಚಾರಣಾಧೀನ ಕೈದಿಗಳು ಮಾತ್ರವಲ್ಲ, ಜೈಲು ಸಿಬ್ಬಂದಿ ಕೂಡಾ ಶಾಮೀಲಾಗಿದ್ದಾರೆ. ಹೊರಗಿನ ವ್ಯಕ್ತಿಗಳ ಪಾತ್ರ ಕೂಡ ಇದರಲ್ಲಿ ಇದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ.

Leave a Reply