ಅಧ್ಯಾಯ – IV – ಒಕ್ಕೂಟ ನ್ಯಾಯಾಂಗ
124. ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ ಮತ್ತು ರಚನೆ:-
(1) ಭಾರತಕ್ಕೆ ಒಂದು ಸರ್ವೋಚ್ಚ ನ್ಯಾಯಾಲಯವಿರತಕ್ಕದ್ದು ಮತ್ತು ಅದು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸಂಸತ್ತು ಕಾನೂನಿನ ಮೂಲಕ ಇನ್ನೂ ಅಧಿಕ ಸಂಖ್ಯೆಯನ್ನು ಗೊತ್ತುಪಡಿಸುವವರೆಗೆ [ಈಗ “ಮೂವತ್ತು”, 2009ನೆಯ ಇಸವಿಯ ಸರ್ವೋಚ್ಚ ನ್ಯಾಯಾಲಯ (ನ್ಯಾಯಾಧೀಶರ ಸಂಖ್ಯೆ) (ತಿದ್ದುಪಡಿ) ಅಧಿನಿಯಮದ (ಸಂಖ್ಯೆ 2009ರ 11) 2ನೇ ಪ್ರಕರಣವನ್ನು ನೋಡಿ. (5.2.2009ರಿಂದ ಜಾರಿಗೆ ಬಂದಿದೆ)] ಏಳಕ್ಕಿಂತ ಹೆಚ್ಚಾಗಿಲ್ಲದಷ್ಟು ಇತರ ನ್ಯಾಯಾಧೀಶರನ್ನು ಒಳಗೊಂಡಿರತಕ್ಕದ್ದು.
(2) [ರಾಷ್ಟ್ರಪತಿಯು, ಸರ್ವೋಚ್ಚ ನ್ಯಾಯಾಲಯದ ಪ್ರತಿಯೊಬ್ಬರು ನ್ಯಾಯಾಧೀಶನನ್ನು [124ಎ ಅನುಚ್ಛೇದದಲ್ಲಿ ಉಲ್ಲೇಖಿಸಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗದ ಶಿಫಾರಸ್ಸಿನ ಮೇಲೆ] ತನ್ನ ಸಹಿ ಮತ್ತು ಮೊಹರು ಇರುವ ವಾರಂಟಿನ ಮೂಲಕ ನೇಮಕ ಮಾಡತಕ್ಕದ್ದು ಮತ್ತು ಆ ನ್ಯಾಯಾಧೀಶನು ತನಗೆ ಅರವತ್ತೈದು ವರ್ಷಗಳ ವಯಸ್ಸು ತುಂಬುವವರೆಗೂ ಆ ಪದವನ್ನು ಧಾರಣ ಮಾಡತಕ್ಕದ್ದು: [ಸಂವಿಧಾನ (99ನೆಯ ತಿದ್ದುಪಡಿ) ಅಧಿನಿಯಮ, 2014ನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶ ದಿನಾಂಕ:16-10-2015ರಲ್ಲಿ ಅಸಿಂಧುಗೊಳಿಸಿದೆ.]
ಪರಂತು.-
(ಎ) ನ್ಯಾಯಾಧೀಶನು ರಾಷ್ಟ್ರಪತಿಗೆ ಪತ್ರ ಬರೆದು, ಸಹಿ ಮಾಡಿ, ಕಳುಹಿಸಿ ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು:
(ಬಿ) ಖಂಡ (4)ರಲ್ಲಿ ಉಪಬಂಧಿಸಲಾದ ರೀತಿಯಲ್ಲಿ ನ್ಯಾಯಾಧೀಶನನ್ನು ಅವನ ಪದದಿಂದ ತೆಗೆದುಹಾಕಬಹುದು.
(2ಎ) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನ ನೇಮಕಕ್ಕೆ ವಯಸ್ಸನ್ನು, ಸಂಸತ್ತು ಕಾನೂನಿನ ಮೂಲಕ ಉಪಬಂಧಿಸಬಹುದಾದಂಥ ಪ್ರಾಧಿಕಾರವು ಮತ್ತು ಉಪಬಂಧಿಸಬಹುದಾದಂಥ ರೀತಿಯಲ್ಲಿ ನಿರ್ಧರಿಸತಕ್ಕದ್ದು.] [1963ನೆಯ ಇಸವಿಯ ಸಂವಿಧಾನ (ಹದಿನೈದನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.]
(3) ಯಾರೇ ವ್ಯಕ್ತಿಯು ಭಾರತದ ನಾಗರಿಕನಾಗಿರುವ ಹೊರತು; ಮತ್ತು
(ಎ) ಒಂದು ಉಚ್ಚ ನ್ಯಾಯಾಲಯದಲ್ಲಿ ಅಥವಾ ನಿರಂತರವಾಗಿ ಎರಡು ಅಥವಾ ಇನ್ನೂ ಹೆಚ್ಚು ಉಚ್ಚ ನ್ಯಾಯಾಲಯಗಳಲ್ಲಿ ಕನಿಷ್ಠ ಪಕ್ಷ ಐದು ವರ್ಷಗಳ ಕಾಲ ನ್ಯಾಯಾಧೀಶನಾಗಿದ್ದ ಹೊರತು; ಅಥವಾ
(ಬಿ) ಒಂದು ಉಚ್ಚ ನ್ಯಾಯಾಲಯದಲ್ಲಿ ಅಥವಾ ನಿರಂತರವಾಗಿ ಎರಡು ಅಥವಾ ಹೆಚ್ಚು ಉಚ್ಚ ನ್ಯಾಯಾಲಯಗಳಲ್ಲಿ ಕನಿಷ್ಠಪಕ್ಷ ಹತ್ತು ವರ್ಷಗಳ ಕಾಲ ನ್ಯಾಯವಾದಿ ಆಗಿದ್ದ ಹೊರತು; ಅಥವಾ
(ಸಿ) ರಾಷ್ಟ್ರಪತಿಯ ಅಭಿಪ್ರಾಯದಲ್ಲಿ ಅವನು ಪ್ರಸಿದ್ದ ನ್ಯಾಯವೇತ್ತನಾಗಿದ್ದ ಹೊರತು ಅವನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ.
ವಿವರಣೆ I :- ಈ ಖಂಡದಲ್ಲಿ “ಉಚ್ಚ ನ್ಯಾಯಾಲಯ” ಎಂದರೆ, ಭಾರತದ ರಾಜ್ಯಕ್ಷೇತ್ರದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುತ್ತಿರುವ ಅಥವಾ ಈ ಸಂವಿಧಾನದ ಪ್ರಾರಂಭಕ್ಕೆ ಮುಂಚೆ ಯಾವುದೇ ಕಾಲದಲ್ಲಿ ಅದನ್ನು ಚಲಾಯಿಸಿದ್ದ ಉಚ್ಚ ನ್ಯಾಯಾಲಯ.
ವಿವರಣೆ II: – ಈ ಖಂಡದ ಉದ್ದೇಶಕ್ಕಾಗಿ, ಯಾರೇ ವ್ಯಕ್ತಿಯು ನ್ಯಾಯವಾದಿ ಆಗಿರುವ ಅವಧಿಯನ್ನು ಲೆಕ್ಕ ಹಾಕುವಲ್ಲಿ, ಅವನು ನ್ಯಾಯವಾದಿ ಆದ ಮೇಲೆ ಜಿಲ್ಲಾ ನ್ಯಾಯಾಧೀಶನ ಪದಕ್ಕೆ ಕಡಿಮೆಯಿಲ್ಲದ ನ್ಯಾಯಿಕ ಪದವನ್ನು ಧಾರಣ ಮಾಡಿದ್ದ ಅವಧಿಯನ್ನೂ ಸೇರಿಸತಕ್ಕದ್ದು.
(4) ಸರ್ವೋಚ್ಚ ನ್ಯಾಯಾಲಯದ ಯಾರೇ ನ್ಯಾಯಾಧೀಶನನ್ನು, ಅವನ ವಿಷಯದಲ್ಲಿ ರುಜುವಾತಾದ ದುರ್ವರ್ತನೆಯ ಅಥವಾ ಅಸಾಮರ್ಥ್ಯದ ಕಾರಣದ ಮೇಲೆ ತೆಗೆದು ಹಾಕಬೇಕೆಂಬುದಾಗಿ ಸಂಸತ್ತಿನ ಪ್ರತಿಯೊಂದು ಸದನದಿಂದ ಆ ಸದನದ ಒಟ್ಟು ಸದಸ್ಯ ಸಂಖ್ಯೆಯ ಬಹುಮತದ ಮೂಲಕ ಮತ್ತು ಹಾಜರಿದ್ದು ಮತ ಕೊಡುವ ಆ ಸದನದ ಸದಸ್ಯರಲ್ಲಿ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದ ಬಹುಮತದ ಮೂಲಕ ಸಮರ್ಥಿತವಾದ ಕೋರಿಕೆಯನ್ನು ರಾಷ್ಟ್ರಪತಿಗೆ ಅದೇ ಅಧಿವೇಶನದಲ್ಲಿ ಒಪ್ಪಿಸಿದ ತರುವಾಯ ರಾಷ್ಟ್ರಪತಿಯು ಹೊರಡಿಸಿದ ಆದೇಶದ ಹೊರತು ತೆಗೆದು ಹಾಕತಕ್ಕದ್ದಲ್ಲ.
(5) (4)ನೆಯ ಖಂಡದ ಮೇರೆಗೆ ಕೋರಿಕೆಯನ್ನು ಒಪ್ಪಿಸುವ ಬಗ್ಗೆ ಮತ್ತು ಯಾರೇ ನ್ಯಾಯಾಧೀಶನ ದುರ್ವರ್ತನೆಯನ್ನು ಅಥವಾ ಅಸಾಮರ್ಥ್ಯವನ್ನು ತನಿಖೆ ಮಾಡಿ ರುಜುವಾತು ಮಾಡುವ ಬಗ್ಗೆ ಪ್ರಕ್ರಿಯೆಯನ್ನು ಸಂಸತ್ತು ಕಾನೂನಿನ ಮೂಲಕ ವಿನಿಯಮಿಸಬಹುದು.
(6) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು, ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಸಮಕ್ಷಮ ಅಥವಾ ಆ ಬಗ್ಗೆ ಅವನಿಂದ ನೇಮಕಗೊಂಡ ಒಬ್ಬ ವ್ಯಕ್ತಿಯ ಸಮಕ್ಷಮ. ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ಸಹಿ ಹಾಕತಕ್ಕದ್ದು.
(7) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಪದಧಾರಣ ಮಾಡಿರುವ ಯಾರೇ ವ್ಯಕ್ತಿಯು, ಭಾರತದ ರಾಜ್ಯಕ್ಷೇತ್ರದಲ್ಲಿ ಇರುವ ಯಾವುದೇ ನ್ಯಾಯಾಲಯದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ವಾದಿಸತಕ್ಕದ್ದಲ್ಲ ಅಥವಾ ಕಾರ್ಯನಿರ್ವಹಿಸತಕ್ಕದ್ದಲ್ಲ.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 48-50



