ಬೆಂಗಳೂರು: ರೈತರಿಗೆ ನೀಡುವ ಸಬ್ಸಿಡಿಯಲ್ಲಿ ಕಮಿಷನ್ ಪಡೆದಿರುವ ಆರೋಪ ಮಾಡಿ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ಚಾಮರಾಜನಗರ ಜಿಲ್ಲಾ ಹನಿ ನೀರಾವರಿ ವಿತರಕರ ಸಂಘದಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ. ಇದೇ ವಿಚಾರವಾಗಿ ಪ್ರಧಾಜಿ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ‘‘ನಾ ಖಾನೆದುಂಗಾ’ ಎನ್ನುತ್ತಿದ್ದ ಪ್ರಧಾನಿಗಳು ‘ನಾ ಬಾತ್ ಕರೂಂಗಾ’ ಎಂಬಂತೆ ಮೌನ ವಹಿಸಿದ್ದಾರೆಂದು ಟೀಕಿಸಿದೆ.
‘ಮಾನ್ಯ ಪ್ರಧಾನಿಗಳೇ ಹಿಂದೊಮ್ಮೆ ಸಚಿವ ಮುನಿರತ್ನರನ್ನು ಭ್ರಷ್ಟ ಎಂದು ಹೇಳಿದ್ದಿರಿ, ಈಗ ನಿಮ್ಮ ಹೇಳಿಕೆಗೆ ಪೂರಕವೆಂಬಂತೆ ಅವರ ವಿರುದ್ಧದ ದೂರು ನಿಮ್ಮ ಮುಂದಿದೆ. ‘ನಾ ಖಾನೆದುಂಗಾ’ ಎನ್ನುತ್ತಿದ್ದ ತಾವು ಈಗ ಕೈಗೊಳ್ಳುವ ಕ್ರಮವೇನು? ಭ್ರಷ್ಟಾಚಾರಕ್ಕೆ ಹಾಗೂ 40% ಕಮಿಷನ್‌ಗೆ ಬೆಂಬಲಿಸುತ್ತೀರಾ? ಕ್ರಮ ಕೈಗೊಳ್ಳುವಿರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ತೋಟಗಾರಿಕಾ ಸಚಿವ ಮುನಿರತ್ನರವರ ಕಮಿಷನ್ ಲೂಟಿಯ ಬಗ್ಗೆ ಪ್ರಧಾನಿಗೆ ಪತ್ರ ತಲುಪಿದೆ, ನಿಮಗೂ ಬರಲಿಲ್ಲವೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ? ಹನಿ ನೀರಾವರಿ ವಿತರಕರ ಸಂಘ ನಿಮಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದ ತಾವು ಭ್ರಷ್ಟಾಚಾರದ ರಕ್ಷಕನಂತೆ ನಿಂತಿದ್ದೀರಿ. ಈ ಆರೋಪಕ್ಕೆ ತನಿಖೆ ನಡೆಸಿ ‘ಪಾರದರ್ಶಕತೆ’ ನಿರೂಪಿಸುತ್ತೀರಾ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘40% ಸರ್ಕಾರದ ಮತ್ತೊಬ್ಬ ಸಚಿವರ ವಿರುದ್ಧ ಪ್ರಧಾನಿಗೆ ಮತ್ತೊಂದು ಪತ್ರ ಬರೆಯಲಾಗಿದೆ. ಬಿಜೆಪಿ ಸರ್ಕಾರದ ಭ್ರಷ್ಟರ ವಿರುದ್ಧದ ಪತ್ರಗಳಿಂದಲೇ ಪ್ರಧಾನಿ ಕಚೇರಿಯ ‘ಡ್ರಾಪ್ ಬಾಕ್ಸ್’ ತುಂಬಲಿದೆ. ‘ನಾ ಖಾನೆದುಂಗಾ’ ಎನ್ನುತ್ತಿದ್ದ ಪ್ರಧಾನಿಗಳು ಇಷ್ಟೆಲ್ಲ ಪತ್ರಗಳು ಹೋದರೂ ‘ನಾ ಬಾತ್ ಕರೂಂಗಾ’ ಎಂಬಂತೆ ಮೌನ ವಹಿಸಿದ್ದಾರೆ’ ಎಂದು ಕಾಂಗ್ರೆಸ್ ಕುಟುಕಿದೆ.
‘ತೋಟಗಾರಿಕಾ ಸಚಿವ ಮುನಿರತ್ನ ಅವರು ಹನಿ ನೀರಾವರಿ ಉಪಕರಣಗಳನ್ನು ತಯಾರಿಸುವ ಕಂಪನಿಗಳಿಂದ ಅಷ್ಟು ಪ್ರಮಾಣದಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. ಅದಲ್ಲದೇ ಮೊದಲು ರೈತರಿಗೆ ನೀಡಲಾಗುತ್ತಿದ್ದ ಉಪಕರಣಗಳಿಗೆ ಡೀಲರ್‌ಗಳೇ ಬಿಲ್ ನೀಡುತ್ತಿದ್ದರು. ಆದರೆ, ಈಗ ಅದನ್ನು ರದ್ದು ಪಡಿಸಿ ಕಂಪನಿಗಳೇ ಕೊಡುವಂತೆ ಮಾಡಲಾಗಿದೆ’ ಎಂದು ಚಾಮರಾಜನಗರ ಜಿಲ್ಲಾ ಹನಿ ನೀರಾವರಿ ವಿತರಕರ ಸಂಘದ ಗೌರವ ಕಾರ್ಯದರ್ಶಿ ಗುರುಪ್ರಸಾದ್ ಆರೋಪಿಸಿದ್ದರು. ‘ಈ ಭ್ರಷ್ಟಾಚಾರದ ಬಗ್ಗೆ ಜಿಲ್ಲಾ ಸಂಘದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಇಡೀ ರಾಜ್ಯದ ಒಟ್ಟು ಬಜೆಟ್‌ನಲ್ಲಿ ಹನಿ ನೀರಾವರಿಗೆ ಕೇವಲ ₹500 ಕೋಟಿ ಅನುದಾನ ನೀಡಲಾಗುತ್ತಿದೆ. ಅದರಲ್ಲೂ ಇವರು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.



