ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಗಣತಿ ಮೂರನೆಯ ದಿನವೂ ಹಲವು ಗೊಂದಲ ಗೋಜಲು

7 months ago

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಗಣತಿ ಮೂರನೆಯ ದಿನವೂ ಹಲವು ಗೊಂದಲ ಗೋಜಲು ತಾಂತ್ರಿಕ ಆಡಚಣೆಗಳೊಂದಿಗೆ ಮುಂದುವರೆದಿದೆ. ಆದರೆ ಈ ಸಮಸ್ಯೆಗಳನ್ನು ಬಗೆಹರಿಸುವುದು ತಮ್ಮ ಕೆಲಸ ಅಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್  ನಾಯಕ್ ಹೇಳಿದ್ದಾರೆ.

ಗಣತಿದಾರರು ಸಕಾಲಕ್ಕೆ ದೊರೆಯದ ಕೈಪಿಡಿ ಕೈಕೊಟ್ಟ ಆಪ್ ಮೊದಲಾದ ಸಮಸ್ಯೆ ನಡುವೆ ಗಣತಿ ಮಾಡಲು ಪರದಾಡುತ್ತಿದ್ದಾರೆ. ಸಂಗ್ರಹಿಸಿದ ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗದೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರೂ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರ ನಿರುತ್ಸಾಹ ಮೊಬೈಲ್‌ ಆ್ಯಪ್‌ನ ಜಂಜಾಟಗಳ ನಡುವೆ ಎರಡನೇ ದಿನವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ.

ಸಮೀಕ್ಷೆಯು ಅ.7ರ ವರೆಗೂ ನಡೆದು, ಒಟ್ಟು 2 ಕೋಟಿ ಮನೆಗಳ 7 ಕೋಟಿಗೂ ಅಧಿಕ ಜನರ ದತ್ತಾಂಶವನ್ನು ಸಂಗ್ರಹಿಸಬೇಕಿದೆ. ಆದರೆ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದೆ ಗೊಂದಲಮಯವಾಗಿದೆ ಹಾಗೂ ಜನ ಸಾಮಾನ್ಯರನ್ನು ರೇಜಿಗಿಡಿಸಿದೆ. ಹಲವು ಸಮುದಾಯಗಳ ವಿರೋಧದ ನಡುವೆ ಕೂಡ ಹಠಕ್ಕೆ ಬಿದ್ದಂತೆ ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಜನರಲ್ಲಿ ಅಸಹನೆ, ಆಕ್ರೋಶಗಳು ಮಡುಗಟ್ಟಿವೆ.

ಇಂಟರ್ನೆಟ್‌ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್‌ ಕೆಲಸ ಮಾಡದೇ ಇರುವುದು, ಮೊದಲ ದಿನ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಕಿಟ್‌ ವಿತರಣೆ ಆಗದ್ದು, ಇನ್ನು ಕೆಲವರಿಗೆ ಕಿಟ್‌ಗಳು ದೊರೆತರೂ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದ್ದು, ಇವೆರಡೂ ಇದ್ದರೂ, ಗಣತಿದಾರರಿಗೇ ಆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಗಣತಿಗೆ ಅಡ್ಡಿಯಾಗಿದೆ.

ಇಂಟರ್ನೆಟ್‌ ಇಲ್ಲದೆಡೆ ಆ್ಯಪ್‌ ಕೆಲಸ ನಿರ್ವಹಿಸದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.

ಗಣತಿಗೆ 1.85 ಲಕ್ಷ ಶಿಕ್ಷಕರು, ಪ್ರತಿ 10-12 ಮಂದಿ ಗಣತಿದಾರರ ಮೇಲೊಬ್ಬ ಮೇಲ್ವಿಚಾರಕರನ್ನೂ ನೇಮಿಸಿ ಅಗತ್ಯ ತರಬೇತಿಯನ್ನೂ ಒದಗಿಸಲಾಗಿದೆ. ಪ್ರತಿ ಗಣತಿದಾರರಿಗೆ 120 ರಿಂದ 150 ಮನೆಗಳ ಒಂದು ಬ್ಲಾಕ್‌ ಮಾತ್ರ ಸಮೀಕ್ಷೆಗೆ ನಿಗದಿ ಮಾಡಿದೆ. ಒಂದು ದಿನಕ್ಕೆ ಕನಿಷ್ಠ 7 ರಿಂದ 8 ಮನೆಗಳ ಸಮೀಕ್ಷೆ ನಡೆಸಿದರೂ ನಿಗದಿತ ಸಮಯದಲ್ಲಿ ಅಂದರೆ 16 ದಿನಗಳಲ್ಲಿ ಇಡೀ ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ಅಂದಾಜಿನಲ್ಲಿ ಆಯೋಗ ಇತ್ತು.

ಆದರೆ, ಮೀಟರ್ ರೀಡರ್‌ಗಳು ಈ ಮೊದಲೇ ಪ್ರತಿ ಮನೆಗೆ ಸ್ಟಿಕರ್‌ಗಳನ್ನು ಅಂಟಿಸಿದ್ದರಿಂದ ಮನೆಗಳ ಜಿಯೋಟ್ಯಾಗಿಂಗ್ ಮತ್ತು ಗಣತಿ ಬ್ಲಾಕ್‌ನ ನಕ್ಷೆ ಸುಲಭ ಎನ್ನಲಾಗಿತ್ತು. ಆದರೆ, ಮೀಟರ್ ರೀಡರ್‌ಗಳು ಅಂಗಡಿಗಳಿಗೂ ಸ್ಟಿಕ್ಕರ್‌ ಅಂಟಿಸಿ ಹೋಗಿದ್ದಾರೆ. ಹೀಗಾಗಿ ಬ್ಲಾಕ್‌ ನಿಗದಿ, ರಸ್ತೆ ಗುರುತಿಸುವುದೇ ಸಮಸ್ಯೆಯಾಯಿತು ಎಂದು ತಿಳಿದುಬಂದಿದೆ. ಹೀಗಾಗಿ 2 ಲಕ್ಷ ಗಣತಿದಾರರು ಕೇವಲ 10 ಸಾವಿರ ಮಂದಿಯ ಗಣತಿ ನಡೆಸಿದ್ದು, ಸರಾಸರಿ 20 ಗಣತಿದಾರರು ಒಬ್ಬರ ಸಮೀಕ್ಷೆ ನಡೆಸಿದಂತಾಗಿದೆ.

ಈ ಗೊಂದಲಗಳ ಬಗ್ಗೆ ಮಾಹಿತಿ ಬಂದಿದೆ ಆದರೆ ಅವುಗಳನ್ನು ಸರಿಪಡಿಸುವುದು ತಮ್ಮ ಕೆಲಸ ಅಲ್ಲ ಇದನ್ನು ಅಧಿಕಾರಿಗಳು ಮತ್ತು ಆಯೋಗದ ಸದಸ್ಯರು ನೋಡಿಕೊಳ್ಳುತ್ತಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಶುರುವಾಗಿದೆ, ಚೆನ್ನಾಗಿ ನಡೀತಿದೆ. ಸಮೀಕ್ಷೆಯನ್ನು ನಾನು ಪ್ರತಿದಿನ ಮಾನಿಟರ್ ಮಾಡಲ್ಲ. ಅದು ನನ್ನ ಕೆಲಸ ಅಲ್ಲ. ಹಾಗೇನಾದರೂ ಇದ್ದರೆ ನನ್ನ ಗಮನಕ್ಕೆ ತರುತ್ತಾರೆ, ನಾನು ಅದನ್ನು ಪರಿಹಾರ ಮಾಡುತ್ತೇನೆ. ಸಣ್ಣ ಸಣ್ಣ ವಿಷಯಗಳನ್ನು ಪರಿಹಾರ ಮಾಡುವುದು ನನ್ನ ಕೆಲಸವಲ್ಲ, ಅದನ್ನು ಅಧಿಕಾರಿಗಳು ಮಾಡುತ್ತಾರೆ ಎಂದರು.

Leave a Reply