ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ಫೋಟೊ ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಜಾರಿಗೊಳಿಸಿದೆ.
ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸಿ ಕಚೇರಿಯ ಫೋಟೋ/ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಹಾಗೂ ಇಂತಹ ಫೋಟೋ/ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟಾಗುತ್ತಿರುವುದು ಹಾಗೂ ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.
ಈ ಸಂಬಂಧ ಈ ಹಿಂದೆ ನೌಕರರ ಸಂಘ ಮನವಿಯ ಸಲ್ಲಿಸಿತ್ತು. ಇಂದು ಅಧಿಕೃತ ಆದೇಶ ಜಾರಿ ಮಾಡಲಾಗಿದೆ.
ಸರ್ಕಾರದ ಈ ಆದೇಶದ ಕುರಿತು ಪರವಿರೋಧ ಚರ್ಚೆ ಪ್ರಾರಂಭವಾಗಿದ್ದು ಇಲಾಖೆಯಲ್ಲಿ ಮೊದಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಈ ಆದೇಶ ಭ್ರಷ್ಟಾಚಾರವನ್ನು ಮತ್ತಷ್ಡು ಕುಮ್ಮಕ್ಕು ನೀಡುತ್ತದೆ ಎಂದು ನೆಟ್ಟಿಗರು ವಿರೋಧಿಸುತ್ತಿದ್ದರೆ ಆಡಳಿತ ಸುಧಾರಣೆ ಮತ್ತು ಸುರಕ್ಷತೆಗೆ ಇದು ಅನಿವಾರ್ಯ ಎಂದು ಇನ್ನೊಂದು ನೆಟ್ಟಿಗರ ಗುಂಪು ಬೆಂಬಲಿಸುತ್ತಿದೆ.



