ಬೋವಿ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ಕಮೀಷನ್ ಕರ್ಮಕಾಂಡ ಬೆಳಕಿಗೆ ಬಂದಿದೆ: ಆರ್ ಅಶೋಕ್

8 months ago

ಬೆಂಗಳೂರು: ಬೋವಿ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ಕಮೀಷನ್ ಕರ್ಮಕಾಂಡ ಬೆಳಕಿಗೆ ಬಂದಿದೆ. ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ನೀಡಲು ನಿಗಮದ ಅಧ್ಯಕ್ಷರು ಕಮಿಷನ್ ಕೇಳುತ್ತಿರುವ ಹಗರಣ ಬಲಿಯಾಗಿದೆ ಎಂದು ವಿಧಾನಸಭೆ ಪ್ರತಿ ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದ ಫಲಾನುಭವಿಗಳಿಗೆ 25 ಲಕ್ಷ ಹಣ ಬಿಡುಗಡೆ ಸಹಾಯಧನ ಬಿಡುಗಡೆ ಮಾಡಲು 5 ಲಕ್ಷ ಕಮಿಷನ್ ಗೆ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಕಮಿಷನ್ ದಂಧೆ, ಲಂಚಗುಳಿತನ, ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ರವಿಕುಮಾರ್ ಕನ್ನಡಿ ಹಿಡಿದಿದ್ದಾರೆ ಎಂದಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನ ಸ್ವತಃ ತಾವೇ ಸದನದಲ್ಲಿ ಒಪ್ಪಿಕೊಂಡಿದ್ದೀರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬಂತೆ SCSP/TSP ಹಣದ ದುರ್ಬಳಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಈಗ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಅಕ್ರಮ ಸಾಕ್ಷಿ ಸಮೇತ ಬಹಿರಂಗವಾಗಿದೆ ಎಂದಿದ್ದಾರೆ.

ಇಷ್ಟಾದರೂ ತಾವು ಕುರ್ಚಿಗೆ ಅಂಟಿಕೊಂಡು ಕೂರುತ್ತೀರಿ ಎಂದರೆ ನಿಮ್ಮ ಭಂಡತನಕ್ಕೆ ನೀವೇ ಸಾಟಿ. ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಇದ್ದರೆ ತಾವು ಇನ್ನೊಂದು ಕ್ಷಣವೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದಿದ್ದಾರೆ.

Leave a Reply