ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಬೇಕು: ಆರ್ ಅಶೋಕ್

8 months ago

ಬೆಂಗಳೂರು:: ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ತಮ್ಮನ್ನು ಮೋಸದಿಂದ ಸೋಲಿಸಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದು, ತಕ್ಷಣವೇ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿರುವ ಅವರು, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ವೇಳೆ ತಮ್ಮನ್ನು ಮೋಸದಿಂದ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಪಾಟೀಲ್ ಅನ್ವರಿ ಗೆಲುವು ದಾಖಲಿಸಿದ್ದರು ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಕ್ರಮ ಬಯಲು ಮಾಡಿರುವ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದಿದ್ದಾರೆ.

ಮತಗಳ್ಳತನ ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ರಾಜಣ್ಣ ಅವರನ್ನು ಅತ್ಯಂತ ಅಗೌರವವಾಗಿ ಸಂಪುಟದಿಂದ ವಜಾ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ, ಈಗ ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ? ಅಥವಾ ನಿಮ್ಮ ಪಕ್ಷದ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ? ಎಂದು ಪ್ರಶ್ನೆ ಮಾಡಿದ್ದಾರೆ.

2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಮತ ಖರೀದಿ ಮೂಲಕ ಗೆದ್ದರು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಈಗಾಗಲೇ ಬಯಲು ಮಾಡಿದ್ದಾರೆ. ಪಂಚಾಯಿತಿ ಇಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ, “ಆಗೆಲ್ಲಾ ಇವಿಎಂ ಇರಲಿಲ್ಲ, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು” ಎಂದು ಕಾಂಗ್ರೆಸ್ ಪಕ್ಷ 60 ವರ್ಷ ಹೇಗೆ ಚುನಾವಣೆ ಗೆಲ್ಲುತ್ತಿತ್ತು ಎನ್ನುವುದನ್ನ ಗೃಹ ಸಚಿವ ಪರಮೇಶ್ವರ್ ಅವರು ಲೀಲಾಜಾಲವಾಗಿ ವಿವರಿಸಿದ್ದಾರೆ ಎಂದಿದ್ದಾರೆ.

ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬ. ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ಟೀಕಿಸಿದ್ದಾರೆ.

Leave a Reply