ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿ ಸರದಿಯಲ್ಲಿ ಮಾಜಿ ಚಾನ್ಸಲರ್ ರಿಷಿ ಸುನಕ್ ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಗಳಿಸಿದ್ದಾರೆ. ಕನ್ಸರ್ವೇಟೀವ್ ಪಕ್ಷದ ಸಂಸದರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ 88 ಮತಗಳು ರಿಷಿ ಸುನಕ್ ಪರ ಚಲಾವಣೆಯಾಗಿವೆ. ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳ ಸಂಖ್ಯೆ 8 ರಿಂದ 6 ಕ್ಕೆ ಇಳಿದಂತಾದೆ.
ಭಾರತ ಮೂಲದ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್ಮನ್, ಟ್ರೇಡ್ ಸಚಿವ ಪೆನ್ನಿ ಮೋರ್ಡೌಂಟ್ (67) ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (50) ಮಾಜಿ ಸಚಿವ ಕೆಮಿ ಬಡೆನೊಚ್ (40) ಹಾಗೂ ಟಾಮ್ ತುಗೇಂಧತ್ (37) ಪ್ರಧಾನಿಯಾಗುವ ಸರದಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಹೊಸದಾಗಿ ನೇಮಕವಾಗಿರುವ ಚಾನ್ಸಲರ್ ನದೀಮ್ ಜಹಾವಿ, ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಕನಿಷ್ಠ ಅಗತ್ಯವಿರುವ 30 ಸಂಸದರ ಬೆಂಬಲ ಪಡೆಯಲು ವಿಫಲವಾಗಿದ್ದು ಪ್ರಧಾನಿ ಹುದ್ದೆಯಿಂದ ದೂರವಾಗಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್ ತಮ್ಮ ಗೆಲುವಿನ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಈಗಿನ ಫಲಿತಾಂಶವನ್ನು ಕಾಯ್ದುಕೊಂಡಲ್ಲಿ ಪ್ರಧಾನಿ ಹುದ್ದೆಯ ಅಂತಿಮ ಸರದಿಯಲ್ಲಿ ರಿಷಿ ಸುನಕ್ ಕೂಡ ಇರಲಿದ್ದಾರೆ.




