ಬಾಗಲಕೋಟೆ: ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಮೀಸಲಿಟ್ಟು ಅನೇಕ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯನ್ನು ಮಾಡಿದರೆ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದ ಮತ್ತು ಗುತ್ತಿಗೆದಾರರ ಅತಿಯಾಸೆಯಿಂದ ಕಾಮಗಾರಿಗಳು ಕಳಪೆಯಾಗುತ್ತಿರುವದು ಹೊಸದಲ್ಲ. ಇಂತಹ ಕಳಪೆ ಕಾಮಗಾರಿಗಳ ಸಾಲಿಗೆ ಬಾಗಲಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾವಳಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವೂ ಸೇರುತ್ತಿದೆ.
ಬಾಗಲಕೋಟ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯ ೨೦೧೯-೨೦ ನೇ ಸಾಲಿನ ಠೇವಣಿ ವಂತಿಗೆ ಅನುದಾನದ ಕ್ರಿಯಾ ಯೋಜನೆ ಅಡಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ದುರಸ್ತಿಯಾಗಿರುವ ಕಟ್ಟಡ ಇದೀಗ ಮತ್ತೆ ಸೋರುತ್ತಿದೆ. ಇನ್ನೂ ಬಡ ಕುಟುಂಬದ ವಿದ್ಯಾರ್ಥಿಗಳು ಇಂತಹ ಸರ್ಕಾರಿ ವಸತಿ ನಿಲಯಗಳನ್ನು ನೆಚ್ಚಿಕೊಂಡು ಬಂದಿರುತ್ತಾರೆ. ಪಾಲಕರು ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟು ವಸತಿ ನಿಲಯದಲ್ಲಿ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಆದರೆ ಇಲ್ಲಿನ ಅವ್ಯವಸ್ಥೆ ಯಾವ ಒಬ್ಬ ಅಧಿಕಾರಿಗೂ ಕಾಣದಂತಾಗಿದೆ. ಯಾಕೆಂದರೆ ಇಲ್ಲಿ ಇರುವವರೂ ಯಾವುದೇ ರಾಜಕಾರಣಿಯ ಹಾಗೂ ಅಧಿಕಾರಿಗಳ ಮಕ್ಕಳಲ್ಲಾ, ದಲಿತರ ಹಾಗೂ ಬಡ ಶ್ರಮೀಕ ವರ್ಗದ ಮಕ್ಕಳು.
ಇಂತಹ ವಸತಿ ನಿಲಯಗಳಿಗೆ ಉಪ ವಿಭಾಗದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ೨-೩ ತಿಂಗಳಿಗೊಮ್ಮೆ ಭೇಟಿ ನೀಡಿ ವಸತಿ ನಿಲಯಗಳ ಹಾಗೂ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಬೇಕೆಂದು ಸರ್ಕಾರಿ ನಿಯಮವಿದ್ದರು, ಇತ್ತ ಕಡೆ ಯಾವ ಒಬ್ಬ ಅಧಿಕಾರಿಯೂ ಸುಳಿದಿಲ್ಲ ಎಂಬ ಆರೋಪವಿದೆ. ಮೇಲಾಗಿ ವಸತಿ ನಿಲಯದ ಮೇಲ್ವಿಚಾರಕರು ವಸತಿ ನಿಲಯದಲ್ಲಿಯೇ ಇರಬೇಕೆಂದು ನಿಯಮವಿದೆ. ಆದರೆ ಇಲ್ಲಿನ ಮೇಲ್ವಿಚಾರಕರಿಗೆ ಅದು ಅನ್ವಯವಾಗುವದಿಲ್ಲ ಎನ್ನುವ ಹಾಗೇ ಮನಸ್ಸೋ ಇಚ್ಚೆ ಬಂದು ಹೋಗುತ್ತಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಮಳೆಗಾಳದಲ್ಲೂ ಈ ವಸತಿ ನಿಲಯ ಸೋರುತ್ತಿತ್ತು. ಆ ಸಂದರ್ಭಲ್ಲಿ ಪಂಚಾಯತ ರಾಜ್ ಇಲಾಖೆಯ ಜಮಖಂಡಿಯ ಸಹಾಯಕ ಕಾರ್ಯನಿವಾಹಕ ಅಧಿಕಾರಿ ವಿ.ಎ.ಗೌಡರ ಅವರಿಗೆ ಮೌಖಿಕವಾಕವಾಗಿ ದೂರು ನೀಡಲಾಗಿತ್ತು. ಅವರು ಸಂಬಂಧಪಟ್ಟ ಗುತ್ತಿಗೆದಾರನಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿ ಸರಿಪಡಿಸುವದಾಗಿ ತಿಳಿಸಿದರು. ಆ ಸಂದರ್ಭದಲ್ಲಿ ಪ್ರವಾಹ ಬಂದಿದ್ದರಿಂದ ಆ ವಿಷಯ ಅಲ್ಲಿಯೇ ಉಳಿದು ಹೋಗಿತ್ತು ಆದರೆ ಈಗ ಅವರು ನಿವೃತ್ತಿಯಾಗಿದ್ದಾರೆ.
ಇದರ ಬಗ್ಗೆ ಮೇಲ್ವೀಚಾರಕರನ್ನು ಕೇಳಿದರೆ ಅನೇಕ ಬಾರಿ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೂ ಇದುವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಬೆಸರ ವ್ಯಕ್ತಪಡಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗೆ ನಮ್ಮ ಪ್ರತಿನಿಧಿ ೨-೩ ಬಾರಿ ಕರೆ ಮಾಡಿದರು ಅವರು ಸ್ವೀಕರಿದಿಲ್ಲ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಯಾವುದಾದರೂ ವಸತಿ ನಿಲಯಗಳಿಗೆ ಹಾನಿಯಾಗಿದೆ ಅಥವಾ ಅವುಗಳ ವಾಸ್ತವ ಸ್ಥಿತಿಯನ್ನು ನೋಡಲು ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ಇವರ ಹಾಗೇ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರವಣಕುಮಾರ ನಾಯ್ಕ ತಮ್ಮ ಅಧಿಕಾರ ಅವಧಿಯಲ್ಲಿ ಒಂದು ಬಾರಿಯು ವಸತಿ ನಿಲಯಕ್ಕೆ ಭೇಟಿ ನೀಡಿರುವದಿಲ್ಲ, ಸಮಾಜ ಕಲ್ಯಾಣ ಡಿಡಿ ಮಹೇಶ ಪೋತದಾರ ಅವರನ್ನು ಹೋರತುಪಡಿಸಿ ಯಾವ ಒಬ್ಬ ಅಧಿಕಾರಿಯೂ ವಸತಿ ನಿಲಯಕ್ಕೆ ಭೇಟಿ ನೀಡಿರುವದಿಲ್ಲವೆಂದು ನಿಲಯದ ಮೇಲ್ವಿಚಾರಕರು ತಿಳಿಸಿದ್ದಾರೆ. ಹೀಗಿರುವಾಗ ವಸತಿ ನಿಲಯಗಳ ಅವ್ಯವಸ್ಥೆ ಸರ್ಕಾರದ ಗಮನಕ್ಕೆ ಬರುವದು ಹೇಗೆ ಎನ್ನುವದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ದುರಸ್ತಿ ಮಾಡಿ ಒಂದು ವರ್ಷದಲ್ಲಿಯೇ ಸೋರುತ್ತಿರುವದರಿಂದ ಕಳಪೆ ಕಾಮಗಾರಿಯಾಗಿದೆ ಎಂದು ಸ್ಪಷ್ಟವಾಗಿ ಕಣ್ಣು ಮುಂದೆಯೇ ಕಾಣುತ್ತಿದೆ. ಆದರೆ ಅಧಿಕಾರಿಗಳು ವಿಷಯ ಗೊತ್ತಿದ್ದರು ಗೊತ್ತಿಲ್ಲದಂತೆ ಇದ್ದಾರೆ. ಈಗಲಾದರೂ ಅಧಿಕಾರಿಗಳಾದರೂ ಎಚ್ಚೆತ್ತು ಕೊಂಡು ಇದರ ಬಗ್ಗೆ ಸೂಕ್ತ ಕ್ರಮಕೈಗೊಂಡು ಈ ರೀತಿ ಕಳಪೆ ಕಾಮಗಾರಿ ಮಾಡುವ ಮೂಲಕ ಜನರ ತೆರಿಗೆ ದುಡ್ಡು ಹಾಳು ಮಾಡುವದಲ್ಲದೇ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎನ್ನುವ ಅರಿವೂ ಇಲ್ಲದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕಳಪೆ ಕಾಮಗಾರಿಯನ್ನು ಮತ್ತೊಮ್ಮೆ ಗುತ್ತಿಗೆದಾರರಿಂದ ಮರು ದುರಸ್ತಿ ಮಾಡಿಸಬೇಕು ಅಥವಾ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸ್ಥಳೀಯರ ಹಾಗೂ ಹೋರಾಟಗಾರರ ಒತ್ತಾಯವಾಗಿದೆ.




