ಸಾಂಗ್ಲಿ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ಕುರಿತು ದಾಖಲೆಗಳಿವೆ: ಎಂ ಬಿ ಪಾಟೀಲ್

10 months ago

ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಗೆ ನಡೆದ ಚುನಾವಣೆ ಸಮಯದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ದುರ್ಬಳಕೆ ಕುರಿತಂತೆ ಆರೋಪ ಪ್ರತ್ಯಾರೋಪಗಳು ಜೀವಂತವಾಗಿರುವ ಬೆನ್ನಲ್ಲೇ, ಸಾಂಗ್ಲಿ ವಿಧಾನಸಭೆ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದ ಅಕ್ರಮ ನಡೆದಿದ್ದು, ಈ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಅಕ್ರಮದ ಮಾದರಿಯಲ್ಲಿಯೇ ಸಾಂಗ್ಲಿ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಅಕ್ರಮ ನಡೆದಿದೆ. ಸಾಂಗ್ಲಿ ಕ್ಷೇತ್ರದ ಅಕ್ರಮಗಳ ಕುರಿತಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮಯದಲ್ಲಿ ತಾವು ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಸಾಂಗ್ಲಿ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದೆ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಗೋಚರಿಸಿತ್ತು. ಅನೇಕ ಕಡೆ ನಾವು ಗೆಲ್ಲುತ್ತೇವೆ ಎಂಬ ವರದಿಗಳು ತಲುಪಿದ್ದವು. ಆದರೆ,ಸಾಂಗ್ಲಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೊನೆಯ ಕ್ಷಣಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಈ ಎಲ್ಲಾ ಮಾಹಿತಿಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಳಿ ಇದೆ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸೋಲು ಕಂಡಿದ್ದೆವು. ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಂತರಿಕ ಮಟ್ಟದ ತನಿಖೆ ನಡೆಸಿದ್ದು, ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಇಲ್ಲಿಂದ ಹೋರಾಟ ಆರಂಭಿಸಲಾಗುತ್ತಿದೆ ಎಂದರು.

ಮಹದೇವಪುರ ಮಾದರಿಯಲ್ಲಿಯೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಮ್ಮ ಅಭ್ಯರ್ಥಿ ಸೋತರು. ಇದೇ ರೀತಿ ಸಾಕಷ್ಟು ಕಡೆ ಆಗಿದೆ. ಈ ಬಗ್ಗೆ ಅನೇಕ ಮಾಹಿತಿ ರಾಹುಲ್ ಗಾಂಧಿ ಬಳಿ ಇವೆ ಎಂದರು.

ಇಂತಹ ಮತಕಳ್ಳತನದ ಹಿನ್ನೆಲೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪದ್ದತಿ ಮತ್ತೆ ಬರಲಿ. ಮುಂದೆ ಎಐ ಕೂಡ ಬರುತ್ತದೆ. ಇಂತಹ ಸಂದರ್ಭದಲ್ಲಿ ಹ್ಯಾಕಿಂಗ್ ಆಗುವ ಸಾಧ್ಯತೆ ಇದೆ. ಹಾಗಾಗಿ ಈ ರೀತಿ ಆಗದ ರೀತಿ ಕ್ರಮ ವಹಿಸಬೇಕು. ಬ್ಯಾಲೆಟ್ ತಂದರೆ ಈ ರೀತಿ ಆಗೋದಿಲ್ಲ ಎಂದರು. 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹಲವು ರೀತಿಯ ತಕರಾರುಗಳು ಎದ್ದಿವೆ. ಹೀಗಿದ್ದರೂ ತರಾತುರಿಯಲ್ಲಿ ವಿಡಿಯೋನೆಲ್ಲಾ ಯಾಕೆ ಡಿಲೀಟ್ ಮಾಡಿದ್ರು. ಇದೆಲ್ಲವೂ ಪ್ರಶ್ನೆ ಎದ್ದೇಳೋ ಹಾಗೆ ಮಾಡಿದೆ ಎಂದರು.

Leave a Reply