ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಮೇಲೆ ಅಚ್ಚರಿಯ ಇಡಿ ದಾಳಿ

9 months ago

ಷೇರು ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಂಡ ರಿಲಯನ್ಸ್

ದೆಹಲಿ: ಜಾರಿ ನಿರ್ದೇಶನಾಲಯ ಉದ್ಯಮಿ ಅನಿಲ್ ಅಂಬಾನಿ ಅವರಿಗೆಗೆ ಸಂಬಂಧಿಸಿದ ಸುಮಾರು 50 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಮೂಲಗಳ ಪ್ರಕಾರ, ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸುವ ಸಲುವಾಗಿ ಈ ದಾಳಿ ನಡೆದಿದೆ.

ಇಡಿ ಜಾರಿ ಹಿನ್ನೆಲೆಯಲ್ಲಿ ರಿಲಯನ್ಸ್‌ ಪವರ್‌ ಮತ್ತು ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಗಳ ಷೇರುಗಳ ಬೆಲೆಯಲ್ಲಿ ಶೇ.5ರಷ್ಟು ಕುಸಿತವಾಗಿದೆ. ಸದರಿ ಪ್ರಕರಣದಲ್ಲಿ, 2017 ರಿಂದ 2019ರ ಅವಧಿಯಲ್ಲಿ ಸುಮಾರು 3,000 ಕೋಟಿ ರೂ. ಸಾಲಗಳನ್ನು ನಕಲಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂದು ಇಡಿ ಅನುಮಾನ ವ್ಯಕ್ತಪಡಿಸಿದೆ.

ಮೂಲಗಳು ಮತ್ತು ವರದಿಗಳ ಪ್ರಕಾರ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹದ ಆವರಣಗಳ ಮೇಲೆ ದಾಳಿ ನಡೆದಿದೆ. ಜೊತೆಗೆ ರಿಲಯನ್ಸ್ ಸಮೂಹದ ಹಿರಿಯ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಕೂಡ ದಾಳಿ ನಡೆದಿದೆ.

ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ, ಬ್ಯಾಂಕ್ ಆಫ್ ಬರೋಡಾ, ರಾಷ್ಟ್ರೀಯ ವಸತಿ ಬ್ಯಾಂಕ್, ಸೆಬಿ ಹಾಗೂ ಸಿಬಿಐ ಸಂಸ್ಥೆಗಳು ಹಂಚಿಕೊಂಡಿರುವ ಮಾಹಿತಿಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

2017 ರಿಂದ 2019ರ ಅವಧಿಯಲ್ಲಿ ಯೆಸ್ ಬ್ಯಾಂಕ್ ನೀಡಿದ 3,000 ಕೋಟಿ ರೂ. ಸಾಲವನ್ನು ಶೆಲ್ ಫರ್ಮ್‌ಗಳು ಮತ್ತು ಇತರ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಜೊತೆಗೆ ತನಿಖಾ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಅಧಿಕಾರಿಗಳು ಮತ್ತು ಕಂಪನಿಯ ಉತ್ತೇಜಕರುಗಳಿಗೆ ಸಂಬಂಧಿಸಿದಂತೆ ಲಂಚದ ವ್ಯವಹಾರ ನಡೆದಿರುವ ಮಾಹಿತಿ ಸಿಕ್ಕಿದೆ. ಇದೇ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಅವರಿಗೆ ಸೇರಿದ ಸ್ಥಳಗಳು ಮತ್ತು ಕಂಪನಿಗಳ ಮೇಲೆ ಇಡಿ ದಾಳಿ ಮಾಡಿದೆ. ಅಲ್ಲದೆ 25 ಅಧಿಕಾರಿಗಳನ್ನು ಕೂಡ ತನಿಖೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. 

ತನಿಖೆ ವೇಳೆ ಯೆಸ್ ಬ್ಯಾಂಕ್‌ ಅನುಮೋದನೆ ಪ್ರಕ್ರಿಯೆಯಲ್ಲಿ ಕೂಡ ಅಕ್ರಮ ನಡೆದಿದೆ ಎಂದು ಶಂಕಿಸಲಾಗಿದೆ. ಹಲವು ಅಕ್ರಮಗಳನ್ನು ಗುರುತಿಸಿದ್ದಲ್ಲದೆ ಸಾಲ ನೀಡುವ ಪ್ರಕ್ರಿಯೆಯಲ್ಲಿ ಕೂಡ ಹಲವು ಷರತ್ತುಗಳನ್ನು ಬ್ಯಾಂಕ್ ಉಲ್ಲಂಘಿಸಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

Leave a Reply