ನಾಯಕತ್ವ ಬದಲಾವಣೆ ಕುರಿತಂತೆ ಯಾರೂ ಕೂಡ ಮಾತನಾಡಬಾರದು: ಡಿ ಕೆ ಶಿವಕುಮಾರ್

1 year ago

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತಂತೆ ಯಾರೂ ಕೂಡ ಮಾತನಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಖಡಕ್ ಆಗಿ ಪಕ್ಷದ ನಾಯಕರಿಗೆ ತಾಕೀತು ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಶಿಸ್ತು ಮುಖ್ಯ. ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ನೀಡಲಾಗಿದೆ. ಇದೇ ರೀತಿ ಮಾತನಾಡುವವರಿಗೂ ನೋಟಿಸ್ ನೀಡಲಾಗುವುದು. ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ? ಎಂದು ಕೇಳಿದರು.

ನೀವು ಪಕ್ಷ ಕಟ್ಟಲು ಕಷ್ಟಪಟ್ಟಿದ್ದೀರಿ. ಆ ಕಾರಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ನಿಮ್ಮ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಪತ್ರಕರ್ತರು ಕೇಳಿದಾಗ, ನಾನೊಬ್ಬನೆ ಪಕ್ಷ ಕಟ್ಟಿದ್ದೇನೆಯೇ? ನನ್ನಂತೆ ನೂರಾರು, ಸಾವಿರಾರು ಲಕ್ಷಾಂತರ ಜನ ಪಕ್ಷ ಕಟ್ಟಿದ್ದಾರೆ. ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ ಎಂದರು.

ಪಕ್ಷದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಆಗುಹೋಗುಗಳನ್ನು ಗಮನಿಸಲು ರಣದೀಪ್ ಸುರ್ಜೇವಾಲಾ ಬಂದಿದ್ದು ಎಲ್ಲರ ಅಭಿಪ್ರಾಯ ಆಲಿಸಿದ್ದಾರೆ. ಈಗಿನಿಂದಲೇ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದು ಸೇರಿದಂತೆ, ಜವಾಬ್ದಾರಿಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಚರ್ಚೆ ನಡೆಸಲು, ಜವಾಬ್ದಾರಿ ವಹಿಸಲಿದ್ದಾರೆ ಎಂದರು.

Leave a Reply