ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ

10 months ago

ಬೆಂಗಳೂರು: ಐಪಿಎಲ್ ಕಪ್ ಗೆದ್ದ ಆರ್ ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತ  ಸಂಬಂಧ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಕಾಲ್ತುಳಿತ ದುರಂತ ಸಂಬಂಧ ಕರ್ತವ್ಯ ಲೋಪದ ಆರೋಪ ಮಾಡಿ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ಮಾಡಿದ ಆದೇಶ ವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ರದ್ದುಪಡಿಸಿದೆ.

ಪ್ರಕರಣ ಸಂಬಂಧ ಆದೇಶ ಪ್ರಕಟಿಸಿದ ನ್ಯಾಯಮೂರ್ತಿ ಬಿಕೆ ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರಿದ್ದ ಪೀಠ, ವಿಕಾಸ್ ಕುಮಾರ್ ಅವರಿಗೆ ತಕ್ಷಣವೇ ಸೇವೆಗೆ ನಿಯೋಜಿಸಬೇಕು ಅಲ್ಲದೆ, ಹಿಂದಿನ ಎಲ್ಲಾ ಭತ್ಯೆ, ಸೌಲಭ್ಯ ಒದಗಿಸಲು ನಿರ್ದೇಶನ ನೀಡಿದೆ.

ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದರು.ಆರ್ಸಿಬಿ ಐಪಿಎಲ್ ಗೆಲುವನ್ನು ಸಂಭ್ರಮಿಸಲು ಕಳೆದ ಜೂನ್ 3 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಹಾಗೂ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು.

ಪ್ರಕರಣ ಸಂಬಂಧ ರಾಜ್ಯ ಸರ್ಕಾರ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಈ ಅಮಾನತು ಪ್ರಶ್ನಿಸಿ ವಿಕಾಸ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು.

ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ವಿವರಣೆ ಕೋರಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಜಿ ಹೆಚ್ಚುವರಿ ಕಾಲಾವಕಾಶ ಕೋರಿದ್ದರು. ಅದರಂತೆ ವಿಚಾರಣೆ ಮುಂದೂಡಲಾಗಿತ್ತು.

ಆರ್ ಸಿಬಿಐ ಹೊಣೆ: ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ತನ್ನ ಆದೇಶದಲ್ಲಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಆರ್ ಸಿಬಿಯೇ ಹೊಣೆ ಎಂದು ತಿಳಿಸಿದೆ.

ಗೆಲುವಿನ ಸಂಭ್ರಮಾಚರಣೆ ಕುರಿತು ಆರ್ ಸಿಬಿ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿತ್ತು. ಇದರ ಪರಿಣಾಮ ಸ್ಟೇಡಿಯಂ ಹೊರಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಜನಸ್ತೋಮ ಸೇರುವಂತಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸರಿಗೆ ಸಮರ್ಪಕ ಬಂದೋಬಸ್ತ್, ಸಿದ್ಧತೆಗೆ ಸಮಯ ಸಿಗಲಿಲ್ಲ ಎಂದು ತಿಳಿಸಿದೆ.

ಗೆಲುವಿನ ಸಂಭ್ರಮಾಚರಣೆಗಾಗಿ ಆರ್ ಸಿಬಿ ಪೊಲೀಸ್ ಇಲಾಖೆಯಿಂದ ಸೂಕ್ತ ಅನುಮತಿಯನ್ನೂ ಪಡೆದಿರಲಿಲ್ಲ. ಆದರೆ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಗೆಲುವಿನ ಸಂಭ್ರಮಾಚರಣೆ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದು ದುರಂತಕ್ಕೆ ಕಾರಣವಾಯಿತು. ಪೊಲೀಸರಿಗೂ ಕೂಡಾ ಸಮಯದ ಅಭಾವದಿಂದಾಗಿ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ. ಅಲ್ಲದೇ ಕಡಿಮೆ ಅವಧಿಯಲ್ಲಿ ನಾವು ಪೊಲೀಸರಿಂದ ಇದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರು ತಮಗೆ ಸಾಧ್ಯವಾದಷ್ಟು ವ್ಯವಸ್ಥೆಯನ್ನು ಮಾಡಿರುವುದಾಗಿ”  ಆದೇಶದಲ್ಲಿ ಉಲ್ಲೇಖಿಸಿದೆ.

ಪೊಲೀಸ್ ಸಿಬಂದಿ ಕೂಡಾ ಮನುಷ್ಯರು. ಅವರು ದೇವರಾಗಲಿ ಅಥವಾ ಜಾದೂಗಾರರಲ್ಲ. ಅಷ್ಟೇ ಅಲ್ಲ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಪೊಲೀಸರ ಬಳಿ ಅಲ್ಲಾವುದ್ದೀನ್ ದೀಪದಂತಹ ಮಾಂತ್ರಿಕ ಶಕ್ತಿಗಳಿಲ್ಲ ಎಂದು ತಿಳಿಸಿದೆ.

ಇಂತಹ ಆದೇಶದ ಬೆನ್ನಲ್ಲೇ ಇದೀಗ ಹಿಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪೊಲೀಸ್ ಆಯುಕ್ತ ಬಿ ದಯಾನಂದ ಹಾಗೂ ಇತರರ ಅಮಾನತು ಆದೇಶ ಏನಾಗಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ಘಟನೆಯ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಘಟನೆ ಸಂಬಂಧ ಆರ್ ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ, ಸುನಿಲ್ ಮ್ಯಾಥ್ಯೂ, ಕಿರಣ್, ಶಮಂತ್ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತರನ್ನು ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದ್ದ ನ್ಯಾಯಾಲಯ, ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಈ ವಿಚಾರದಲ್ಲೂ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.

Leave a Reply