ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರ ಕೋಪ ಶಮನಕ್ಕೆ ಸಿದ್ದರಾಮಯ್ಯ ಯತ್ನ

10 months ago

ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಹಂಚಿಕೆ ಸೇರಿದಂತೆ ಹಲವ ವಿಚಾರಗಳಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರ ಕೋಪ ಶಮನ ಮಾಡಲು ಸಿಎಂ ಸಿದ್ದರಾಮಯ್ಯ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿರುವ ರಾಜು ಕಾಗೆ ಸೇರಿದಂತೆ ಹಲವು ಶಾಸಕರನ್ನು ಜೂನ್ 25ರಂದು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ.

ದೆಹಲಿಯಿಂದ ಸಿದ್ದರಾಮಯ್ಯ ಹಿಂತಿರುಗಿದ ಕೂಡಲೇ ಕಾಂಗ್ರೆಸ್ಸಿನ ಎಲ್ಲ ಶಾಸಕರನ್ನು ಭೇಟಿ ಮಾಡಿ ಅವರ ಅಸಮಾಧಾನ ತಣಿಸಲು ತೀರ್ಮಾನ ಮಾಡಿದ್ದಾರೆ.

ಜೂನ್ 25ರಿಂದ ಪ್ರತಿನಿತ್ಯ ತಂಡ ತಂಡವಾಗಿ ಕಾಂಗ್ರೆಸ್ಸಿನ ಕೆಲವು ಶಾಸಕರನ್ನು ಭೇಟಿಯಾಗಿ ಅವರ ಕುಂದುಕೊರತೆ ಆಲಿಸುವ ಮೂಲಕ ಆಡಳಿತದ ಹಲವು ಹಂತಗಳಲ್ಲಿ ಎದ್ದಿರುವ ಅಪಸ್ವರ ತಣಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಈ ಕುರಿತಂತೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್‌‍ ಶಾಸಕರ ಅಸಮಾಧಾನವನ್ನು ನಾನು ಬಗೆಹರಿಸುತ್ತೇನೆ ಎಂದರು.

ವಸತಿ ಯೋಜನೆಯಲ್ಲಿ ನಡೆದಿರುವ ಲಂಚಾವತಾರದ ಬಗ್ಗೆ ಪ್ರಸ್ತಾಪಿಸಿದ ಹಿರಿಯ ಶಾಸಕ ಬಿ.ಆರ್‌.ಪಾಟೀಲ್‌ ಅವರನ್ನು ರಾಯಚೂರಿಗೆ ಆಗಮಿಸಲು ನಾನು ಕರೆದಿದ್ದೆ. ಆದರೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಹಾಗಾಗಿ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ 25 ಕ್ಕೆ ಬಂದು ತಮನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ನಾನು ಚರ್ಚೆ ಮಾಡುತ್ತೇನೆ ಎಂದರು.

ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರೊಂದಿಗೂ ಮಾತನಾಡುತ್ತೇನೆ. ಅವರ ಅಸಮಾಧಾನಕ್ಕೆ ಕಾರಣವೇನು ಎಂದು ತಿಳಿದುಕೊಂಡು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಮುಖ್ಯಮಂತ್ರಿಯವರ ವಿಶೇಷ ಅನುದಾನ ಎಂದು ಯಾವುದೂ ಇಲ್ಲ. ಬಜೆಟ್‌ನಲ್ಲಿ ಆ ರೀತಿ ಪ್ರಸ್ತಾಪಗಳಿರುವುದಿಲ್ಲ. ರಾಜು ಕಾಗೆ ಅವರಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನ ಎಂದು ಯಾವ ರೂಪದಲ್ಲಿ ಕೊಡಲಾಗಿದೆಯೋ ಗೊತ್ತಿಲ್ಲ. ಅಗತ್ಯ ಇರುವ ಕಡೆಗೆ ವಿಶೇಷವಾಗಿ ಅನುದಾನ ನೀಡಬೇಕಾಗುತ್ತದೆ. ಆದರೆ ಮುಖ್ಯಮಂತ್ರಿಯವರ ಅನುದಾನ ಎಂದು ಯಾವುದೂ ಇಲ್ಲ ಎಂದರು.

ರಾಷ್ಟ್ರಪತಿ ಭೇಟಿ: ಇನ್ನು ತಮ್ಮ ದೆಹಲಿ ಪ್ರವಾಸದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ದೆಹಲಿಗೆ ಭೇಟಿ ನೀಡುತ್ತಿರುವ ತಾವು ಪ್ರಧಾನಮಂತ್ರಿ ಭೇಟಿಗೆ ಸಮಯ ಕೇಳಿದ್ದೇನೆ. 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ವೇಳೆ ಕೆಲ ವಿಷಯಗಳ ಚರ್ಚೆಯಾಗಿವೆ. ಅದರ ಬಗ್ಗೆ ಪ್ರಧಾನಮಂತ್ರಿ ಗಮನ ಸೆಳೆಯಲು ಸಮಯ ಕೇಳಿದ್ದೇನೆ ಎಂದರು.

ರಾಜ್ಯದ ಬಹಳಷ್ಟು ಮಸೂದೆಗಳು ಬಾಕಿ ಇದ್ದು, ಅದರ ಬಗ್ಗೆ ಗಮನ ಹರಿಸಲು ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲು ಸಮಯ ಕೇಳಲಾಗಿತ್ತು. ರಾಷ್ಟ್ರಪತಿಯವರು ನಾಳೆ ಬೆಳಿಗ್ಗೆ ಸಮಯ ನೀಡಿದ್ದಾರೆ ಎಂದರು.

ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರ ಭೇಟಿ ಮಾಡಿ ಚರ್ಚಿಸಲು ಸಮಯ ಕೇಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡಲು ನಾಳೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈಗಾಗಲೇ ರಾಜ್ಯಸರ್ಕಾರ 5 ಸಾವಿರ ಕೋಟಿ ನೀಡುತ್ತಿದೆ. ಕೇಂದ್ರ ಸರ್ಕಾರವು ವಿಶೇಷ ಅನುದಾನ ನೀಡಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದರು.

Leave a Reply