ರಫೇಲ್ ಅವ್ಯವಹಾರ: ಭಾರತದ ಮಧ್ಯವರ್ತಿಗೆ 94 ಕೋಟಿ ರೂ. ಹಣ ನೀಡಿದ ಆರೋಪ

5 years ago

ದೆಹಲಿ: ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ 36 ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನ ಡಸಾಲ್ಟ್ ಮೂಲಕ ಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಯುದ್ಧ ವಿಮಾನಗಳು ಸೇವೆಯನ್ನು ಆರಂಭಿಸಿವೆ. ಈ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಯೊಬ್ಬನಿಗೆ ಬರೋಬ್ಬರಿ 94 ಕೋಟಿ ರೂ. ನೀಡಲಾಗಿದೆ ಎಂದು ಫ್ರಾನ್ಸ್‌ನ “ಮೀಡಿಯಾಪಾರ್ಟ್” ಆನ್‌ಲೈನ್ ಸುದ್ದಿ ಸಂಸ್ಥೆಯಲ್ಲಿ ವರದಿಯಾಗಿದೆ.

ವರದಿಯಲ್ಲಿ ಉಲ್ಲೇಖಿಸಲಾಗಿದರುವ ಮಧ್ಯವರ್ತಿಯು ಇನ್ನೊಂದು ರಕ್ಷಣಾ ವ್ಯವಹಾರದ ಮೂಲಕ ಭಾರತದಲ್ಲಿ ಅಕ್ರಮವಾಗಿ ಹಣ ವರ್ಗಾಯಿಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಆರೋಪಸಿದ್ದರು. ಆದರೆ, ಈ ಕುರಿತು ಸುಪ್ರೀಂ ಕೋರ್ಟ್ ಸರ್ಕಾರದ ಪರ ತೀರ್ಪು ನೀಡಿತ್ತು. ಅಚ್ಚರಿಯ ಸಂಗತಿ ಎಂದರೆ, ವಿಚಾರಣೆ ವೇಳೆ ದಾಖಲೆಗಳು ಕಳುವಾಗಿವೆ ಎಂದು ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿತ್ತು. ಅನೇಕ ಅನುಮಾನಗಳಿಗೆ ಕಾರಣವಾಗಿದ್ದ ಈ ಪ್ರಕರಣದ ಕುರಿತು ದಿ ಹಿಂದೂ ಪತ್ರಿಕೆಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು. ಕಡೆಗೆ ಸರ್ಕಾರ ಕ್ಲೀನ್ ಚಿಟ್ ಪಡೆದುಕೊಂಡಿತ್ತು.

ಯುಪಿಎ ಮೂಲ ಒಪ್ಪಂದದ ಪ್ರಕಾರ, ಡಸಾಲ್ಟ್ ಕಂಪನಿ ಎಚ್.ಎ.ಎಲ್. ಗೆ ತಂತ್ರಜ್ಞಾನ ನೀಡಬೇಕಿತ್ತು. ಭವಿಷ್ಯದಲ್ಲಿ ಎಚ್.ಎ.ಎಲ್. ಈ ರಫೇಲ್ ಯುದ್ಧವಿಮಾನಗಳನ್ನು ಉತ್ಪಾದಿಸಲು ಅವಕಾಶವಿತ್ತು. ಆದರೆ, ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಎಚ್.ಎ.ಎಲ್ ಬದಲಿಗೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಈ ಮೂಲಕ ಯುದ್ಧ ವಿಮಾನ ತಯಾರಿಯಲ್ಲಿ ಎಚ್.ಎ.ಎಲ್.ಗೆ ಅಭೂತಪೂರ್ವ ಸಾಧನೆಗೆ ಇದ್ದ ಅವಕಾಶವನ್ನು ಇಲ್ಲವಾಗಿಸಲಾಗಿತ್ತು.

ಇದೀಗ ಮತ್ತೊಮ್ಮೆ ಈ ವಿವಾದ ಎದ್ದಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಗೆ ಬಳಸಿಕೊಳ್ಳುತ್ತವೆ? ಜನರಿಗೆ ಹೇಗೆ ತಲುಪಿಸುತ್ತವೆ? ಎಂಬುದನ್ನು ಕಾದು ನೋಡಬೇಕಿದೆ.

Leave a Reply