ಇದು ಕರಾವಳಿಯ ಲೆಕ್ಕಾಚಾರ

10 months ago

ಹಿಂದು – ಮುಸ್ಲಿಂ ಎಂದು ಕೊಲೆಯಾದರೆ ಮಾತ್ರ ಲೆಕ್ಕ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಮಾರಕ ಗುಂಡಿಗಳಿಗೆ ಬಿದ್ದು ವಾಹನ ಸವಾರರು ಸತ್ತರೆ ಲೆಕ್ಕಕ್ಕೆ ಇಲ್ಲ. ಇದು ಕರಾವಳಿಯ ಲೆಕ್ಕಾಚಾರ.

ಪ್ರತಿ ಮಳೆಗಾಲದಲ್ಲಿ ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಗುಂಡಿಗಳು ಬೀಳುವುದು, ಅವುಗಳಿಗೆ ಉರುಳಿ ದ್ವಿಚಕ್ರ ವಾಹನ ಸವಾರರು ಸಾಯುವುದು ಸರ್ವೇಸಾಮಾನ್ಯ ಎಂಬಂತಾಗಿದೆ.  ಈ ಬಾರಿಯು ಪ್ರಥಮ ಮಳೆಗೆ ಅಪಾಯಕಾರಿ ಗುಂಡಿಗಳು ಈ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಪ್ರಥಮ ಬಲಿಯೂ ಆಗಿ ಹೋಗಿದೆ. ಮುಂದಕ್ಕೆ ಎಷ್ಟು ಅಮೂಲ್ಯ ಪ್ರಾಣಗಳು ಇಲ್ಲಿ ಬಲಿಯಾಗುತ್ತದೊ ತಿಳಿಯದು. ಇದಕ್ಕಾಗಿ ತಲೆ ಕೆಡಿಸಿಕೊಳ್ಳುವವರು ಇಲ್ಲಿ ಯಾರೂ ಇಲ್ಲ.

ಸುರತ್ಕಲ್ ನಲ್ಲಿ ಎಲ್ಲರಿಗೂ ಚಿರಪರಿಚಿತರಾದ ಜನತಾ ಕಾಲನಿಯ ಅಶ್ರಫ್ ನಿನ್ನೆ ರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಪಣಂಬೂರು ಬಳಿ ಹೆದ್ದಾರಿಯಲ್ಲಿ ಮೂಡಿರುವ ಅರ್ಧ ಅಡಿಗೂ ಆಳವಾದ ಗುಂಡಿಗೆ ಸಿಲುಕಿ ದ್ವಿಚಕ್ರ ಸಮೇತ ಉರುಳಿ ಬಿದ್ದಿದ್ದಾರೆ. ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಚಕ್ರದ ಅಡಿಗೆ ಬಿದ್ದು ಮೃತ ಪಟ್ಟಿದ್ದಾರೆ. ಪುಟ್ಟ ಮಕ್ಕಳು, ಮಡದಿ, ವೃದ್ದೆ ತಾಯಿ ಕ್ಷಣ ಮಾತ್ರದಲ್ಲಿ ಅನಾಥರಾಗಿದ್ದಾರೆ. 

   ಈ ಹೆದ್ದಾರಿಯನ್ನು ಮಳೆಗಾಲಕ್ಕೆ ಮುನ್ನ ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಿ, ಇಂತಹ ದಾರುಣ ಸಾವುಗಳಿಗೆ ಕಡಿವಾಣ ಹಾಕಿ ಎಂದು ನಾವು ” ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಯಿಂದ ಧ್ವನಿ ಎತ್ತುತ್ತಲೆ ಬಂದಿದ್ದೇವೆ. ಈ ಬೇಡಿಕೆ ಮುಂದಿಟ್ಟು, ಶಾಸಕರು, ಸಂಸದರನ್ನು ಒತ್ತಾಯಿಸಿ ಕೂಳೂರಿನಲ್ಲಿ ಶಾಂತಿಯುತ ಧರಣಿ ನಡೆಸಿದ್ದಕ್ಕೆ ನಮ್ಮ ಮೇಲೆ FIR ದಾಖಲಿಸಲಾಯಿತು. ನನ್ನ ಮನೆಗೆ ಪೊಲೀಸರನ್ನು ಕಳುಹಿಸಿ ಬಾಗಿಲಿಗೆ ಎಚ್ಚರಿಕೆ ನೋಟೀಸು ಅಂಟಿಸಲಾಯ್ತು. ಆದರೂ ನಾವು ನಮ್ಮ ಮಿತಿಯಲ್ಲಿ ಹೋರಾಟ ಮುಂದುವರಿಸಿದ್ದೆವು.

ಈಗ, ಹೆದ್ದಾರಿ ಗುಂಡಿಗಳಿಂದ ಉಂಟಾಗುವ  ಈ ವರ್ಷದ ಮಳೆಗಾಲದ ಸರಣಿ ಸಾವುಗಳಿಗೆ ಮುನ್ನುಡಿ ಬರೆಯಲಾಗಿದೆ. ಅಶ್ರಫ್ ಪ್ರಾಣ ತೆತ್ತಿದ್ದಾನೆ. ದುರಂತ ಅಂದರೆ, ರಾಷ್ಟ್ರೀಯ ಹೆದ್ದಾರಿಯ ಈ ದುಸ್ತಿತಿಯ ಪರಿಶೀಲನೆಗೆ ಬರಬೇಕಿದ್ದ, ಗುಂಡಿಗಳನ್ನು ಮುಚ್ಚಿಸಲು ಕ್ರಮ ಜರುಗಿಸಬೇಕಿದ್ದ ಸಂಸದ ಬ್ರಿಜೇಶ್ ಚೌಟರು, ತಮ್ಮ ಈ ಕರ್ತವ್ಯದ ಬದಲಿಗೆ, ಜಿಲ್ಲೆಯ ಶಾಂತಿ ಕದಡುವ “ಹೆಣ ರಾಜಕಾರಣ” ನಡೆಸುವ ತಂಡದ ಭಾಗ ಆಗಿಹೋಗಿದ್ದಾರೆ‌.

ಹಿಂಸೆಗೆ ಪ್ರಚೋದಿಸುವ, ದ್ವೇಷ ಭಾಷಣಗಳು ಮೊಳಗುವ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಿಡಿತಕ್ಕೆ ತರಲು ಹರ ಸಾಹಸ ಪಡುತ್ತಿರುವ ಜಿಲ್ಲೆಯ ನೂತನ ಪೊಲೀಸ್ ಅಧಿಕಾರಿಗಳನ್ನು ಬೆದರಿಸಿ, ಕೈಕಟ್ಟಿ ಹಾಕಲು ಬೆಂಗಳೂರಿನಿಂದ ಬಂದ ಆರ್‌. ಅಶೋಕ, ವಿಜಯೇಂದ್ರ, ಸುನಿಲ್ ಕುಮಾರ್, ಸದಾನಂದ ಗೌಡ ಮುಂತಾದವರ ನೇತೃತ್ವದ ನಿಯೋಗದ ಭಾಗವಾಗಿ ಸಂಸದ ಚೌಟರು ಡಿ ಸಿ ಆಫೀಸು, ಎಸ್ ಪಿ ಆಫೀಸು ಅಂತ ಓಡಾಡುತ್ತಿದ್ದಾರೆ. ಆ ಮೂಲಕ ತಾನು ಸಹ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಪೂಂಜಾ ಮುಂತಾದ ಶಾಸಕರುಗಳಿಗಿಂತ ಭಿನ್ನ ಅಲ್ಲ. ಎಂದು ತೋರಿಸಿ ಕೊಡುತ್ತಿದ್ದಾರೆ.

ನಿಜಕ್ಕೂ ಇದು ಬಹಳ ಬೇಸರದ ಸಂಗತಿ. ಈಗಲಾದರು ಸಂಸದರು ಎಚ್ಚೆತ್ತುಕೊಳ್ಳಲಿ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ರ ಮಾದರಿಯನ್ನು ತೊರೆದು, ಹತ್ತಾರು ಸಂಖ್ಯೆಯಲ್ಲಿ ಬಿದ್ದಿರುವ ಹೆದ್ದಾರಿ ಗುಂಡಿಗಳನ್ನು ಮುಚ್ಚಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಲಿ. ಇಲ್ಲದಿದ್ದಲ್ಲಿ ಈ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಮರಣದ ಮೆರವಣಿಗೆಯೆ ಉಂಟಾಗಲಿದೆ.ಹೆದ್ದಾರಿ ಗುಂಡಿಗಳಿಗೆ ಹಿಂದು – ಮುಸ್ಲಿಂ ಎಂದು ಬೇಧ ಇಲ್ಲ‌.

ನಾವು ತೀವ್ರ ರೀತಿಯ ಹೋರಾಟಕ್ಕೆ ಇಳಿಯುವಂತೆ ಮಾಡಬೇಡಿ. ಹಾಗೆಯೆ ಮೃತ ಅಶ್ರಫ್ ನ ಅನಾಥವಾದ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ಕೊಡಿಸಿ. ಆ ಕಂದಮ್ಮಗಳನ್ನು ಬೀದಿ ಪಾಲು ಮಾಡಬೇಡಿ.

– ಮುನೀರ್ ಕಾಟಿಪಳ್ಳ, ಸಂಚಾಲಕ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

Leave a Reply