ಅಭಿವೃದ್ಧಿಯ ಪದಕ್ಕೆ ಅರ್ಥ ತಿಳಿಯದ ಬಿಜೆಪಿ ಸರ್ಕಾರ: ಕೆಪಿಸಿಸಿ

4 years ago

ಬೆಂಗಳೂರು: ಅಭಿವೃದ್ಧಿಯ ಪದಕ್ಕೆ ಅರ್ಥ ತಿಳಿಯದ ಬಿಜೆಪಿ ಸರ್ಕಾರ ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನ ಮಾತ್ರ ತಮ್ಮದೆಂದು ಬೆನ್ನು ತಟ್ಟಿಕೊಳ್ಳುವುದನ್ನ ಮಾತ್ರ ಬಿಟ್ಟಿಲ್ಲ ಎಂದು ಕೆಪಿಸಿಸಿ ಹೇಳಿದೆ

ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಂಬೇಡ್ಕರ್ ಸ್ಕೂಲ್ ಕಟ್ಟಡ ಸೇರಿದಂತೆ ಇನ್ನಿತರ ಕಟ್ಟಡಗಳ ಉದ್ಘಾಟನೆ ನಡೆಸುತ್ತಿದ್ದಾರೆ. ಈ ವೇಳೆ 40 ವರ್ಷಗಳಿಂದ ಆಗದ ಅಭಿವೃದ್ಧಿ ಕೆಲಸಗಳು 20 ತಿಂಗಳಿಂದ ನಡೆಯುತ್ತಿವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ಇದೀಗ ತನ್ನ ಹಳೆಯ ಚಾಳಿಯನ್ನೇ ಬಿಜೆಪಿ ಮುಂದುವರೆಸಿದೆ. ಬೆಂಗಳೂರು ವಿವಿಯಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಕ್ಸ್ ವಿದ್ಯಾಲಯವನ್ನ ಪ್ರಧಾನಿ ನರೇಂದ್ರ ಮೋದಿಯವರಿಂದ ಮತ್ತೊಮ್ಮೆ ಉದ್ಘಾಟನೆ ಮಾಡಿಸಿದ್ದಾರೆ. ಈ ಮೂಲಕ ಇದು ತಮ್ಮ ಶ್ರಮವೆಂದು ಬಿಂಬಿಸಿಕೊಂಡಿದೆ ಎಂದಿದೆ.

ಅಸಲಿಗೆ ಇದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಸಾಧನೆ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ವಿಶ್ವಕಂಡ ಅಪ್ರತಿಮ ಆರ್ಥಿಕ ತಜ್ಞರು ಅಂದರೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನದ ಸಂದರ್ಭಕ್ಕೆ ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕ ರೂಪದಲ್ಲಿ ಯೋಜನೆಯೊಂದನ್ನ ರೂಪಿಸಬೇಕು ಅನ್ನುವ ನಿರ್ಧಾರವನ್ನ ಕಾಂಗ್ರೆಸ್ ಸರ್ಕಾರ ಮಾಡಿತು. ಅದರಂತೆ ಅಂದಿನ PWD ಸಚಿವರಾಗಿದ್ದ ಡಾ.ಹೆಚ್.ಸಿ ಮಹಾದೇವಪ್ಪ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಹಾಗೂ ಐಟಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ಇದರ ಬಗ್ಗೆ ಮುತುವರ್ಜಿ ವಹಿಸಿದರು ಎಂದಿದೆ.

2017ರಲ್ಲಿ ಸುಮಾರು 45 ಎಕರೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಯಿತು. ಇದಕ್ಕಾಗಿ 350 ಕೋಟಿ ರೂಪಾಯಿ ಮಂಜೂರು ಮಾಡಲಾಯಿತು. ಕಟ್ಟಡದ ಶಂಕುಸ್ಥಾಪನೆಯನ್ನ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಅವರು ನೆರವೇರಿಸಿದ್ದರು ಎಂದಿದೆ.

ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಕ್ಸ್ ಆರಂಭಿಸಲು ನಮ್ಮ ಸರ್ಕಾರ ಮಾಡಿದ ಶ್ರಮ ಅಷ್ಟಿಷ್ಟಲ್ಲ. ಲಂಡನ್ ಸ್ಕೂಲ್ ಆಫ್ ಎಕಾನಿಕ್ಸ್ ಗೆ ಅಂದಿನ ಐಟಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ  ನೇತೃತ್ವದಲ್ಲಿ ನಿಯೋಗವೊಂದು ತೆರಳಿ ಅಲ್ಲಿ ಸಾಕಷ್ಟು ಅಧ್ಯಯನವನ್ನ ನಡೆಸಲಾಯಿತು. ಅಲ್ಲಿ ನೀಡುವ ಗುಣಮಟ್ಟದ ಶಿಕ್ಷಣವನ್ನೇ ಇಲ್ಲೂ ನೀಡುವ ಉದ್ದೇಶದಿಂದ ಅಲ್ಲಿನ ವಿವಿ ಜೊತೆ ಒಪ್ಪಂದವನ್ನ ಕೂಡಾ ಮಾಡಿಕೊಳ್ಳಲಾಗಿತ್ತು. ಅಲ್ಲಿನ ಪ್ರಾಧ್ಯಾಪಕರು ಇಲ್ಲಿಗೆ ಬಂದು ಪಾಠಮಾಡುವ ರೀತಿ ಒಪ್ಪಂದ ಮಾಡಿಕೊಳ್ಳಲಾಯಿತು.ಈ ಮೂಲಕ ಇಲ್ಲಿ ಓದುವ ನಮ್ಮ ಬಡ ವಿದ್ಯಾರ್ಥಿಗಳಿಗೆ ಉತ್ತಮವಾದ ಶೈಕ್ಷಣಿಕ ಪರಿಸರವನ್ನ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿತ್ತು ಎಂದಿದೆ.

 ಇಲ್ಲಿ ಮತ್ತೊಂದು ಹೆಮ್ಮೆಯ ವಿಚಾರ ಅಂದರೆ ಆರು ತಿಂಗಳಲ್ಲೇ ಕಟ್ಟಡ ನಿರ್ಮಾಣಗೊಂಡು 2017ರ ಜೂನ್ ತಿಂಗಳಲ್ಲಿ ತರಗತಿಗಳು ಆರಂಭವಾದವು. ಅಂದು ಪ್ರಧಾನಿಗಳಾಗಿದ್ದ ಡಾ.ಮನಮೋಹನ ಸಿಂಗ್ ಇದರ ಉದ್ಘಾಟನೆ ಮಾಡಿದ್ದರು. ಅಲ್ಲದೇ ಈಗಾಗಲೇ 3 ಬ್ಯಾಚ್ ಗಳು ಇಲ್ಲಿಂದ ಕಲಿತು ಹೊರ ಹೋಗಿವೆ. ಹೀಗಿರುವಾಗ ಮತ್ತೊಮ್ಮೆ ಇದರ ಉದ್ಘಾಟನೆ ಮಾಡುವುದೆಂದರೆ ಇದು ಹಾಸ್ಯಾಸ್ಪದ ಅಲ್ಲವೇ ಎಂದಿದೆ.

ಇಲ್ಲಿ ಬಿಜೆಪಿ ಸರ್ಕಾರ ಮತ್ತೊಂದು ಯಡವಟ್ಟು ಮಾಡಿದೆ ಅದೇನೆಂದ್ರೇ ನಮ್ಮ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಗುಣಮಟ್ಟದಿಂದ ನಡೆದುಕೊಂಡು ಹೋಗಲು ಒಂದು ಗೌರ್ನಿಂಗ್ ಕೌನ್ಸಿಲ್ ಸ್ಥಾಪನೆ ಮಾಡಿತ್ತು.  ಉದ್ಯಮಿಗಳಾದ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಶಾ ಹಾಗೂ ಸ್ಯಾಮ್ ಪಿತ್ರೋಡಾರಂಥವರನ್ನ ಸದಸ್ಯರನ್ನಾಗಿ ಮಾಡಿತ್ತು. ಜೊತೆಗೆ ರಾಷ್ಟ್ರದ ಅತ್ಯುನ್ನತ ಆರ್ಥಿಕ ತಜ್ಞರನ್ನ ನೇಮಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಘ ಪರಿವಾರದವರನ್ನ ಹಾಗೂ ಬಸವರಾಜ  ಹೊರಟ್ಟಿ ಪುತ್ರನನ್ನ ಈ ದೊಡ್ಡ ಸ್ಥಾನಕ್ಕೆ ತಂದು ಕೂರಿಸಿ ಅವಿವೇಕಿತನ ಮೆರೆದಿದೆ ಎಂದಿದೆ.

ನಮ್ಮ ಸರ್ಕಾರದ ಸಾಧನೆಯನ್ನ ತಾವು ಏನೂ ಮಾಡದೇ ತಮ್ಮದೆಂದು ಬಿಜೆಪಿ ಸರ್ಕಾರ ಬೀಗುತ್ತಿದೆ. ಈ ಮೂಲಕ ರಾಜ್ಯದ ಜನರ ದಾರಿ ತಪ್ಪಿಸಲು ಹೊರಟಿದೆ. ಇದು ಖಂಡನಾರ್ಹ. ಇದು ರಾಜ್ಯದ ಜನರಿಗೆ ಮಾಡುತ್ತಿರುವ ಮೋಸ. ಬಾಬಾ ಸಾಹೇಬರಿಗೆ ಬಗೆದಿರುವ ದ್ರೋಹ. ಇನ್ನಾದರೂ ಬಿಜೆಪಿಯವರು ಈ ರೀತಿಯ ಸುಳ್ಳಿನ ಮನೆಗಳನ್ನ ಕಟ್ಟುವುದನ್ನ ಬಿಟ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡುವತ್ತ ಗಮನ ಹರಿಸಲಿ ಎಂದಿದೆ.

Leave a Reply