ಲಕ್ಕೇನಹಳ್ಳಿ ದಲಿತರಿಗೆ ಒಕ್ಕಲೆಬ್ಬಿಸುವ ಭೀತಿ, ಪ್ರತಿಭಟನೆ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ

4 years ago

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ದಲಿತ ಕಾಲೋನಿ ಜನರಿಗೆ ಬಗರ್ ಹುಕುಂ ಸಾಗುವಳಿ ಹಾಗೂ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ಹುನ್ನಾರವನ್ನು ಹಿರಿಯೂರು ತಾಲ್ಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಂತರ ಅರಣ್ಯಾಧಿಕಾರಿಗಳಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಯಿತು.
ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ರಾಜ್ಯ ಸಂಚಾಲಕ ಕೆ.ಬಿ.ರೂಪನಾಯಕ್ ಮಾತನಾಡಿ, ಲಕ್ಕೇನಹಳ್ಳಿ ದಲಿತ ಕಾಲೋನಿ ಜನರು ಕಳೆದ ಹತ್ತು ವರ್ಷಗಳಿಂದ ಅರಣ್ಯ ಮತ್ತು ಬಗರ್ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಅವರವರ ಹೆಸರಿಗೆ ಹಕ್ಕು ಪತ್ರ ನೀಡುವುದು ಅಗತ್ಯವಿದೆ ಎಂದರು.
ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಅನಗತ್ಯವಾಗಿ ದಲಿತರನ್ನು ಉಳುಮೆ ಮಾಡದಂತೆ ತಡೆವೊಡ್ಡಲಾಗುತ್ತಿದ್ದು, ಇದರಿಂದಾಗಿ ದಲಿತರಿಗೆ ಭೂಮಿಯಿಲ್ಲದಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ, ಜನಾಂಗದವರಿಗೆ ಅನುಕೂಲವಾಗಲಿ ಎಂದು ಅರಣ್ಯ ಹಕ್ಕು ಕಾಯ್ದೆಯನ್ನು ಸಂವಿಧಾನ ಬದ್ಧಗೊಳಿಸಿ ಜಾರಿಗೆ ತರಲಾಗಿದ್ದು, ಹಕ್ಕುಪತ್ರ ನೀಡಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಎಂದರು.
ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವಾಗಲೇ ಬಗರ್ ಹುಕುಂ ಸಮಿತಿಗಳನ್ನು ಆಯಾಯ ಶಾಸಕರ ನೇತೃತ್ವದಲ್ಲಿ ರಚಿಸಲಾಗಿದ್ದರು ಸಹ ಅಂತಿಮ ತೀರ್ಮಾನಕ್ಕೆ ಬಂದು ಭೂಮಿ ಹಕ್ಕು ಪತ್ರಗಳ ನೀಡಲೂ ವಿಳಂಬವಾಗುತ್ತಿರುವುದು ಶೋಚನೀಯ ಎಂದರು.
ಇದೇ ಸಂದರ್ಭದಲ್ಲಿ ರಂಗನಾಥ್ ಜಯಣ್ಣ ಭೂತೇಶ, ರಮೇಶ ಮುಂತಾದವರು ಹಾಜರಿದ್ದರು.

Leave a Reply