ಮಹಿಳಾ ಐಎಎಸ್ ಅಧಿಕಾರಿಗೆ ಆನ್ಲೈನ್ ವಂಚನೆ: ದೂರು ದಾಖಲು

1 year ago

ಬೆಂಗಳೂರು: ಯುಟ್ಯೂಬ್ ಚಾನಲ್ ಒಂದರಲ್ಲಿ ಬಂದ ಜಾಹೀರಾತು ನೋಡಿ ಆನ್ ಲೈನ್ ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾಗಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆಗೊಳಗಾಗಿರುವ ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ನೀಡಿದ ದೂರಿನ  ಮೇರೆಗೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೋವನ್ನು ಪಲ್ಲವಿ ನೋಡಿದ್ದರು. ಬಳಿಕ ಸೀರೆ ಆಯ್ಕೆ ಮಾಡಿ, ಅದರ ಸ್ಕ್ರೀನ್ ಶಾಟ್ ಜೊತೆಗೆ ಆನ್ಲೈನ್ ಮೂಲಕ ಮಾರ್ಚ್ 10ರಂದು ಗೂಗಲ್ ಪೇ ಮೂಲಕ 850 ರೂಪಾಯಿ ಪಾವತಿಸಿದ್ದರು. ಆದರೆ ಹಲವು ದಿನಗಳು ಕಳೆದರೂ ಮಾರಾಟಗಾರರು ಸೀರೆ ಮನೆ ವಿಳಾಸಕ್ಕೆ ಕಳುಹಿಸಲಿರಲಿಲ್ಲ. ಅಲ್ಲದೆ, ಹಣವನ್ನು ರಿಫಂಡ್ ಮಾಡಿರಲಿಲ್ಲ. ಕರೆ ಹಾಗೂ ಮೇಸೆಜ್ ಮಾಡಿದರೂ ಸ್ಪಂದಿಸದೆ ತನಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಬಂದ ಜಾಹೀರಾತಿನಿಂದ ತನಗೆ ಮಾತ್ರವಲ್ಲದೆ, ಹಲವರಿಗೂ ಮೋಸ ಮಾಡಿರುವ ಶಂಕೆಯಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಮನವಿ ಮಾಡಿದ್ದಾರೆ.

Leave a Reply