ಚಿಕ್ಕಮಗಳೂರು: ಚುನಾವಣೆ ನೆಪದಲ್ಲಿ ಯುಗಾದಿ ಹಬ್ಬಕ್ಕೆ ಸೀರೆ ಹಂಚಲು ಬಂದಿದ್ದ ಶಾಸಕ ಸಿ.ಟಿ.ರವಿ ಬೆಂಬಲಿಗರಿಗೆ ಮತದಾರರು ಮೈಚಳಿ ಬಿಡಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತರು ನಿನ್ನೆ ರಾತ್ರಿ ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ. ಸೀರೆ ಹಂಚುತ್ತಾ ತನ್ಮ ಮನೆಗೆ ಬಂದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ ಅವರು ಕೊಟ್ಟ ಸೀರೆಗೆ ಅವರ ಮುಂದೆಯೇ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ಮಧ್ಯೆ ಸೀರೆಯನ್ನು ಸುಟ್ಟು ಸೀರೆ ಹಂಚಲು ಬಂದಿದ್ದ ಬಿಜೆಪಿ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾನೆ.
ಕೊರೊನಾ ಸಂದರ್ಭದಲ್ಲಿ ಒಂದು ಕೆಜಿ ಅಕ್ಕಿ ಕೊಟ್ಟಿಲ್ಲ. ಈಗ ಎಲೆಕ್ಷನ್ ಬಂದಿದೆ ಎಂದು ಸೀರೆ ಹಂಚಲು ಬಂದಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಆತನ ಜೊತೆ ಸೇರಿದ ಹಲವರು ನಮಗೆ ಸೀರೆ ಬೇಡ, ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಮಗೆ ಸೂಕ್ತವಾದ ಮೂಲಭೂತ ಸೌಲಭ್ಯ ಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಎರಡು ಮೂರು ಸೀರೆಗಳನ್ನು ರಸ್ತೆಗೆ ಎಸೆದು ಬೆಂಕಿ ಹಚ್ಚಿದ್ದಾರೆ. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.



